ADVERTISEMENT

ಚಿಕ್ಕಮಗಳೂರು | ಆನೆ ಹಾವಳಿ ನಿರಂತರ: ಜನ ತತ್ತರ

ಐದು ತಿಂಗಳ ಅವಧಿಯಲ್ಲಿ 5 ಜಾನುವಾರು ಸಾವು: 132 ಬೆಳೆಹಾನಿ ಪ್ರಕರಣಗಳು ದಾಖಲು

ವಿಜಯಕುಮಾರ್ ಎಸ್.ಕೆ.
Published 15 ಸೆಪ್ಟೆಂಬರ್ 2025, 4:11 IST
Last Updated 15 ಸೆಪ್ಟೆಂಬರ್ 2025, 4:11 IST
ಮೂಡಿಗೆರೆ ತಾಲ್ಲೂಕಿನ ಕಸ್ಕೇಬೈಲ್ ಸಮೀಪ ಹೆದ್ದಾರಿ ದಾಟಿದ ಕಾಡಾನೆಗಳು
ಮೂಡಿಗೆರೆ ತಾಲ್ಲೂಕಿನ ಕಸ್ಕೇಬೈಲ್ ಸಮೀಪ ಹೆದ್ದಾರಿ ದಾಟಿದ ಕಾಡಾನೆಗಳು   

ಚಿಕ್ಕಮಗಳೂರು: ಕೆಲ ತಾಲ್ಲೂಕುಗಳಿಗೆ ಸೀಮಿತವಾಗಿದ್ದ ಕಾಡಾನೆ ಹಾವಳಿ ಈಗ ಇಡೀ ಜಿಲ್ಲೆಗೆ ವ್ಯಾಪಿಸಿದೆ. ಮೂಡಿಗೆರೆ, ಚಿಕ್ಕಮಗಳೂರು, ತರೀಕೆರೆ ತಾಲ್ಲೂಕಿನಲ್ಲಿ ಇದ್ದ ಆನೆ ಹಾವಳಿ, ಈಗ ಎನ್.ಆರ್.ಪುರ, ಕೊಪ್ಪ, ಶೃಂಗೇರಿ ತಾಲ್ಲೂಕಿಗೂ ವ್ಯಾಪಿಸಿದೆ.

ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಭತ್ತದ ಬೆಳೆ ಕಡಿಮೆಯಾಗುತ್ತಿದೆ. ಇದಕ್ಕೆ ಕಾಡಾನೆ ಹಾವಳಿಯೂ ಒಂದು ಪ್ರಮುಖ ಕಾರಣ. ಕಾಡಾನೆ ಹಾವಳಿಯಿಂದ ರೋಸಿ ಹೋಗಿ ಹಲವರು ಭತ್ತದ ಗದ್ದೆಗಳನ್ನು ಪಾಳು ಬಿಟ್ಟಿದ್ದಾರೆ.

ಚಿಕ್ಕಮಗಳೂರು ವಿಭಾಗದಲ್ಲಿ ಐದು ತಿಂಗಳ ಅವಧಿಯಲ್ಲಿ 5 ಜಾನುವಾರು ಮೃತಪಟ್ಟಿದ್ದರೆ, 132 ಬೆಳೆಹಾನಿ ಪ್ರಕರಣಗಳು ದಾಖಲಾಗಿದ್ದು, ₹55.29 ಲಕ್ಷ ಪರಿಹಾರವನ್ನು ಅರಣ್ಯ ಇಲಾಖೆ ಪಾವತಿಸಿದೆ. ಕೊಪ್ಪ ವಿಭಾಗ ವ್ಯಾಪ್ತಿಯಲ್ಲಿ 2022-23ನೇ ಸಾಲಿನಿಂದ ಈವರೆಗೆ 697 ಬೆಳೆನಷ್ಟ ಪ್ರಕರಣಗಳನ್ನು ದಾಖಲಿಸಿದ್ದು, ₹1.25 ಕೋಟಿ ಪರಿಹಾರವನ್ನು ಇಲಾಖೆ ಪಾವತಿಸಿದೆ.

ADVERTISEMENT
ಮೂಡಿಗೆರೆ ತಾಲ್ಲೂಕಿನ ನಂದೀಪುರದ ಬಳಿ ಕಾಣಿಸಿಕೊಂಡಿದ್ದ ಬೀಟಮ್ಮ ತಂಡದ ಕಾಡಾನೆಗಳು

ಮೂಡಿಗೆರೆ: ಕಾಡಾನೆ ದಾಳಿಗೆ ರೈತರ ಬದಕು ಮೂರಾಬಟ್ಟೆ

ತಾಲ್ಲೂಕಿನಲ್ಲಿ ದಾಳಿ‌ ನಡೆಸುತ್ತಿರುವ ಕಾಡಾನೆಗಳಿಂದ ರೈತರ ಬದುಕು ಮೂರಾಬಟ್ಟೆಯಾಗಿದೆ. ತಾಲ್ಲೂಕಿನ ಗೋಣಿಬೀಡು ಕಸಬಾ ಬಣಕಲ್ ಬಾಳೂರು ಹೋಬಳಿಗಳು ಕಾಡಾನೆ ದಾಳಿಗೆ ತತ್ತರಿಸಿರುವ ಪ್ರದೇಶಗಳಾಗಿವೆ. ತಾಲ್ಲೂಕಿನಲ್ಲಿ ಬೀಟಮ್ಮ ಭುವನೇಶ್ವರಿ ಎಂಬ ಎರಡು ತಂಡಗಳ ಸುಮಾರು 50ಕ್ಕೂ ಹೆಚ್ಚು ಕಾಡಾನೆಗಳಿದ್ದು ಅದಲ್ಲದೇ ಎರಡು ಕಾಡಾನೆಗಳ ಒಂದು ತಂಡ ಹಾಗೂ ಒಂಟಿ ಕಾಡಾನೆಯೊಂದು ನಿತ್ಯವೂ ತಾಲ್ಲೂಕಿನ ಒಂದಲ್ಲಾ ಒಂದು ಪ್ರದೇಶದಲ್ಲಿ ದಾಳಿ ನಡೆಸುತ್ತಲೇ ಇವೆ. ಈಗಾಗಲೇ ತಾಲ್ಲೂಕಿನಲ್ಲಿ ದಶಕದಿಂದ ಹತ್ತಕ್ಕೂ ಹೆಚ್ಚು ಮಂದಿ ಕಾಡಾನೆ ದಾಳಿಗೆ ಸಿಲುಕಿ ಸಾವನ್ನಪ್ಪಿದ್ದು ಎಂಟಕ್ಕೂ ಅಧಿಕ ಮಂದಿ ಸಾವಿನ ದವಡೆಯಿಂದ ಪಾರಾಗಿದ್ದರೂ ಗಂಭೀರವಾಗಿ ಗಾಯಗೊಂಡ ಕಾರಣ ಅವರ ಬದುಕು ಸಹ ಸಂಕಷ್ಟದಲ್ಲಿಯೇ ಇದೆ. 30ರಿಂದ 40 ಕಾಡಾನೆಗಳು ಒಂದು‌ ಬಾರಿ ತಿರುಗಾಡಿದರೆ ಹತ್ತಾರು ವರ್ಷಗಳಿಂದ ಮಕ್ಕಳಂತೆ ಪೋಷಿಸಿರುವ ಕಾಫಿ ತೋಟಗಳು ಕ್ಷಣಾರ್ಧದಲ್ಲಿ ನಿರ್ನಾಮವಾಗುತ್ತವೆ. ಹಾನಿಯಾದ ಕಾಫಿ ತೋಟಗಳಿಗೆ ನೀಡುವ ಪರಿಹಾರ ಅತ್ಯಲ್ಪವಾಗಿದೆ ಎಂಬುದು ಬೆಳೆಗಾರರ ಆರೋಪ. ರೈತರ ಬದುಕು‌ ದಿನದಿಂದ ದಿನಕ್ಕೆ ಸಂಕಷ್ಟದ ಸುಳಿಗೆ ಸಿಲುಕುತ್ತಿದೆ. ಕಾಡಾನೆ ದಾಳಿಗೆ ಹೆದರಿ ಬಹುತೇಕ ಭತ್ತದ ಗದ್ದೆಗಳನ್ನು ಪಾಳು ಬಿಡಲಾಗಿದೆ. ‘ಎರಡು ವರ್ಷಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಜೀವ ಹಾನಿ ಸಂಭವಿಸಿದಾಗ ಒಂದು ಅಥವಾ ಎರಡು ಕಾಡಾನೆಗಳನ್ನು ಹಿಡಿದು ಸ್ಥಳಾಂತರಿಸಿ ಕೈ ತೊಳೆದು ಕೊಳ್ಳಲಾಗುತ್ತದೆ. ಕಾಡಾನೆ ದಾಳಿಯಿಂದ ಆಗುವ ಹಾನಿಯನ್ನು ‌ಊಹಿಸಲು‌ ಸಾಧ್ಯವಿಲ್ಲ. ಒಂದು ಬಾರಿ ಒಂದು ಕಾಡಾನೆ‌ ತೋಟಕ್ಕೆ ಬಂದರೆ ಹೊಸ ಗಿಡ ಹಾಕಿ ಫಸಲು ತೆಗೆಯಲು ಕನಿಷ್ಠ 5 ವರ್ಷ ಕಾಯಬೇಕಾಗುತ್ತದೆ. ಅಂದರೆ ಕಾಡಾನೆ ದಾಳಿಯು ಒಂದು ವರ್ಷದ ಬೆಳೆಯನ್ನಷ್ಟೇ ಅಲ್ಲದೇ ಐದಾರು ವರ್ಷಗಳ ಬೆಳೆಯನ್ನು ನಷ್ಟ ಮಾಡುತ್ತವೆ. ಆದ್ದರಿಂದ ಕಾಡಾನೆ ಹಾವಳಿ ತಡೆಯಲು ಶಾಶ್ವತ ಯೋಜನೆ ರೂಪಿಸಬೇಕು’ ಎನ್ನುತ್ತಾರೆ ಬೆಳೆಗಾರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಾಲಕೃಷ್ಣ ಬಾಳೂರು. ತಾಲ್ಲೂಕಿನಲ್ಲಿ ಸುಮಾರು 4 ಸಾವಿರಕ್ಕೂ ಅಧಿಕ ಮೀಸಲು ಅರಣ್ಯವಿದ್ದರೂ ಕಾಡಾನೆಗಳು ನಾಡಿನತ್ತ ಬರಲು ಅರಣ್ಯದಲ್ಲಿ ಕಾಡಾನೆಗಳಿಗೆ ಬೇಕಾದ ಆಹಾರ ಇಲ್ಲ ಎಂಬುದು ಪರಿಸರಾಸಕ್ತರ ಆರೋಪವಾಗಿದ್ದು ವನ್ಯ ಪ್ರಾಣಿಗಳ ಮೇವಿಗಾಗಿ ಅರಣ್ಯ ಇಲಾಖೆ ಜಾರಿಗೊಳಿಸಿದ ಯೋಜನೆಗಳು ವಿಫಲವಾಗಿರುವುದರಿಂದ ಕಾಡಾನೆಗಳು ಅಹಾರವನ್ನು ಹರಸಿ ನಾಡಿಗೆ ಬರುತ್ತಿವೆ. ಕಾಡಿನಲ್ಲಿ ‌ಮೇವು ಬೆಳೆಸಲು ಪರಿಣಾಮಕಾರಿಯಾಗಿ ಕಾರ್ಯೋನ್ಮುಖರಾಗಬೇಕು ಎಂಬುದು ಅವರ ವಾದ. ತಾಲ್ಲೂಕಿನಲ್ಲಿ ಕಾಡಾನೆಗಳಿಂದ ಬೆಳೆ ಹಾನಿ‌ ಮಾತ್ರವಲ್ಲದೇ ಕಾಡಾನೆ‌ ದಾಳಿ ಪ್ರದೇಶದಲ್ಲಿ ಜನ ಮನೆಯಿಂದ ಹೊರ ‌ಬರಲು‌ ಹೆದರುವಂತಾಗಿದೆ.

ಶೃಂಗೇರಿಗೂ ಬಂದ ಕಾಡಾನೆಗಳು

ತಾಲ್ಲೂಕಿಗೆ ಇದೇ ಮೊದಲ ಬಾರಿಗೆ ಒಂದು ತಿಂಗಳ ಹಿಂದೆ ಮೂರು ಕಾಡಾನೆಗಳ ಹಾವಳಿ ಮಾಡಿವೆ. ಕಳೆದ ಆಗಸ್ಟ್ ತಿಂಗಳಲ್ಲಿ ಎರಡು ಕಾಡಾನೆಗಳು ಮಾರನಕೊಡಿಗೆ ಮೌಳಿ ಬೆಸೂರು ವೈಕುಂಠಪುರ ಶಾರದಾ ಪೀಠದ ನರಸಿಂಹವನಗಳಲ್ಲಿ ಸಂಚರಿಸಿ ಭತ್ತದ ಗದ್ದೆ ತೋಟಗಳನ್ನು ನಾಶ ಮಾಡಿದೆ. ನಂತರ ಹರಿಹರಪುರ ಕಡೆಯಿಂದ ಹೊನಗೋಡು ಅಡ್ಡಗದ್ದೆ ಚಿತ್ರವಳ್ಳಿ ಕಾವಡಿ ಹುಲಿಮನೆ ಬಿಲಾಗದ್ದೆಯಲ್ಲಿ ಕಾಣಿಸಿಕೊಂಡು ತೋಟ ಮತ್ತು ಗದ್ದೆಗಳಿಗೆ ಹಾನಿಯುಂಟು ಮಾಡಿವೆ. ತಾಲ್ಲೂಕಿನಲ್ಲಿ ಮಲೆನಾಡು ಮತ್ತು ಕರಾವಳಿ ಜನಪರ ಒಕ್ಕೂಟ ಮಲೆನಾಡು ನಾಗರಿಕ ಹಿತರಕ್ಷಣಾ ವೇದಿಕೆ ಮತ್ತು ರೈತ ಸಂಘದ ಮುಖಂಡರು ಪ್ರತಿಭಟನೆ ನಡೆಸಿ ಕುಮ್ಕಿ ಆನೆಗಳನ್ನು ಕರೆಸಿ ಆನೆಗಳನ್ನು ಹಿಡಿಯಬೇಕು ಎಂದು ಒತ್ತಾಯಿಸಿದ್ದಾರೆ.

ಮೊದಲ ಬಾರಿಗೆ ಕೊಪ್ಪದಲ್ಲಿ ಪ್ರತ್ಯಕ್ಷ

ಪಟ್ಟಣ ಕೇಂದ್ರ ಭಾಗದಲ್ಲಿ ಇದೇ ಮೊದಲು ಕಾಡಾನೆಗಳು ಸಂಚಾರ ಮಾಡಿವೆ. ಶನಿವಾರ ರಾತ್ರಿ (ಸೆ.13) ಎಂ.ಎಸ್.ದ್ಯಾವೇಗೌಡ ವೃತ್ತಕ್ಕೆ ಬಂದು ವಾಪಾಸ್ ತೆರಳಿವೆ. ತಾಲ್ಲೂಕಿನಲ್ಲಿ ಕಳೆದ ಮೂರು ವರ್ಷಗಳಿಂದ ಕಾಡಾನೆ ಚಲನ ವಲನ ಕಂಡು ಬಂದಿದೆ. 2022ರಲ್ಲಿ ಮೊದಲ ಬಾರಿಗೆ ಎಲೆಮಡಲು ಎಸ್ಟೇಟ್‌ನಲ್ಲಿ ಕಾಣಿಸಿಕೊಂಡು ಅಲ್ಲಲ್ಲಿ ಕೃಷಿ ಜಮೀನಿನಲ್ಲಿ ಬೆಳೆ ಹಾನಿ ಮಾಡಿ ಜನರಲ್ಲಿ ಆತಂಕ ಸೃಷ್ಟಿಸಿದ್ದ 12 ವರ್ಷ ವಯಸ್ಸಿನ ಪುಂಡಾನೆ ಸೆರೆ ಹಿಡಿಯಲಾಗಿತ್ತು. 2024ರಲ್ಲಿ ಪಟ್ಟಣ ಸಮೀಪದ ಹಂದಿಗೋಡು ಎಂಬಲ್ಲಿಗೆ ಬಂದಿದ್ದ ಆನೆ ಬಾಳಗಡಿಯಲ್ಲಿರುವ ತಾಲ್ಲೂಕು ಕಚೇರಿ ಸಮೀಪ 200 ಮೀ. ದೂರದಲ್ಲಿ ವಾಪಸ್ ಕಾಡಿನ ಪ್ರದೇಶದಲ್ಲಿ ಎನ್.ಆರ್.ಪುರ ತಾಲ್ಲೂಕಿನ ಮೇಲ್ಪಾಲ್ ಗಡಿಗೇಶ್ವರ ಕಡೆಗೆ ಸಂಚರಿಸಿತ್ತು. 2025ರ ಜುಲೈನಲ್ಲಿ ತಾಲ್ಲೂಕಿನ ಅಂದಗಾರು ಕುಂಚೂರು ಭಾಗಕ್ಕೆ ಬಂದು ಜನವಸತಿ ಪ್ರದೇಶದಲ್ಲಿ ಆತಂಕ ಸೃಷ್ಟಿಸಿದ್ದ ಒಂಟಿ ಸಲಗ ಒಂದು ವಾರದ ಬಳಿಕ ಬಂದ ದಾರಿಯಲ್ಲಿ ಮರಳಿ ಕಳಸಾಪುರ ನೆಕ್ಕರಿಕೆ ಕಾಡಂಚಿನ ಜನವಸತಿ ಪ್ರದೇಶ ಹಾದು ಹುತ್ತಿನಗದ್ದೆ ಮೂಲಕ ಎನ್.ಆರ್.ಪುರ ತಾಲ್ಲೂಕಿನತ್ತ ಹೆಜ್ಜೆ ಹಾಕಿತ್ತು. ಇದೇ ಆಗಸ್ಟ್‌ನಲ್ಲಿ ಶೃಂಗೇರಿ ಕಡೆಯಿಂದ ಬಂದ ಆನೆ ತಾಲ್ಲೂಕಿನ ಶಾನುವಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಕಾಣಿಸಿಕೊಂಡು ಮರೆಯಾಗಿತ್ತು. ಶುಕ್ರವಾರದಂದು ಪಟ್ಟಣ ಸಮೀಪಕ್ಕೆ ಬಂದಿದ್ದ ಎರಡು ಆನೆಗಳು ಶನಿವಾರ ರಾತ್ರಿ ಬೇಲಿಹಳ್ಳಿ ಮೂಲಕ ಪಟ್ಟಣ ಕೇಂದ್ರಕ್ಕೆ ಬಂದು ವಾಪಾಸ್ ತೆರಳಿವೆ. ಇವು ಸಕಲೇಶಪುರ ಕಡೆಯಿಂದ ಶೃಂಗೇರಿ ತಾಲ್ಲೂಕಿಗೆ ಬಂದಿದ್ದ ಆನೆಗಳು ಎಂದು ಹೇಳಲಾಗುತ್ತಿದೆ.

ಇಳೆಕಾನ್ ಐದಳ್ಳಿ ಗ್ರಾಮದಲ್ಲಿ ಸೈರನ್ ಯಂತ್ರ ಅಳವಡಿಕೆ

ಆವತಿ ಮತ್ತು ವಸ್ತಾರೆ ಹೋಬಳಿಗಳ ಗ್ರಾಮೀಣ ಪ್ರದೇಶಗಳಲ್ಲಿ ಬೀಟಮ್ಮ ಭುವನೇಶ್ವರಿ ತಂಡದ ಕಾಡಾನೆ ಗುಂಪುಗಳು ನಿರಂತರವಾಗಿ ಉಪಟಳ ನೀಡುತ್ತಿವೆ. ಭತ್ತ ಕಾಫಿ ತೆಂಗು ಅಡಿಕೆ ಸಾಕಷ್ಟು ಬೆಳೆಹಾನಿ ಸಂಭವಿಸಿತ್ತು. ಅರೇನೂರು ಹಕ್ಕಿಮಕ್ಕಿ ಐದಳ್ಳಿ ನರುಡಿ ಬಸರವಳ್ಳಿ ಬೆರಣಗೋಡು ಮಾಗೋಡು ಕಣತಿ ಮುಂತಾದ ಕಡೆಗಳಲ್ಲಿ ಕೆಲ ಆನೆಗಳು ಗುಂಪಿನಿಂದ ಬೇರ್ಪಟ್ಟು ನಿರಂತರವಾಗಿ ಬೆಳೆ ಹಾನಿ ಮಾಡುತ್ತಿವೆ. 15 ದಿನಗಳಿಂದ ಉಪಟಳ ನೀಡುತ್ತಿದ್ದ ಆನೆಗಳನ್ನು ಕಾಡಿಗೆ ಓಡಿಸಿದ್ದಾರೆ. ಬೆಳೆಹಾನಿ ಪರಿಹಾರದ ವಿತರಣಾ ಪ್ರಕ್ರಿಯೆಗಳನ್ನು ರೈತರಿಗೆ ಶೀಘ್ರ ಮುಗಿಸಿ ಕೊಡುತ್ತಿದ್ದು ಎಚ್ಚರಿಕೆಗಾಗಿ ಸೈರನ್ ಅಳವಡಿಕೆ ಮಾಡಿದ್ದಾರೆ. ಇದರಿಂದ ಕೊಂಚ ಸಮಾಧಾನ ತಂದಿದೆ ಎಂದು ಅರೇನೂರು ಸುಪ್ರೀತ್ ನರುಡಿ ರಚನ್ ಐದಳ್ಳಿ ಸಿಂಧುಕುಮಾರ್ ಹೇಳಿದರು. ಅರಣ್ಯ ಸಿಬ್ಬಂದಿ ಆನೆ ಕಾರ್ಯಪಡೆ ಮತ್ತು ಸ್ಥಳೀಯ ಗ್ರಾಮಸ್ಥರ ನೆರವಿನೊಂದಿಗೆ ಉಪಟಳ ನೀಡುತ್ತಿದ್ದ ಒಂಟಿ ಸಲಗವನ್ನು ಹಾಂದಿಯ ಬೇರುಗಂಡಿ ಮಠದ ಬಳಿ ಸೆರೆಹಿಡಿಯಲಾಗಿದೆ. ಬಸರವಳ್ಳಿ ಬೈಗೂರು ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಿದ್ದ ಆನೆಗಳನ್ನು ಬಸವನಕೋಟೆ ಸಾರಗೋಡು ಬಾಸ್ತಿ ಅರಣ್ಯ ವಲಯಕ್ಕೆ ಯಶಸ್ವಿಯಾಗಿ ಓಡಿಸಲಾಗಿದ್ದು ವಾಪಸ್ ಬಂದರೆ ಸೆರೆ ಹಿಡಿಯಲು ಅನುಮತಿ ಕೋರಕಾಗಿದೆ‌. ಕಾಡಾನೆಗಳು ಹೆಚ್ಚಾಗಿ ಸಂಚರಿಸುವ ಇಳೆಕಾನ್ ಐದಳ್ಳಿ ಗ್ರಾಮದಲ್ಲಿ ಸುರಕ್ಷತೆಗಾಗಿ ಸೈರನ್ ಅಳವಡಿಸಿದ್ದು ಇನ್ನೆರಡು ಗ್ರಾಮಗಳಲ್ಲಿ ಸೈರನ್ ಯಂತ್ರ ಅಳವಡಿಸಲು ಇಲಾಖೆಗೆ ಮನವಿ ಮಾಡಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಹರೀಶ್ ತಿಳಿಸಿದರು.

ತರೀಕೆರೆ: ಆನೆ- ಮಾನವ ಸಂಘರ್ಷಕ್ಕೆ ಕೊನೆಯಿಲ್ಲ

ತಾಲ್ಲೂಕಿನ ಲಿಂಗದಹಳ್ಳಿ ಕಸಬಾ ಲಕ್ಕವಳ್ಳಿ ಮತ್ತು ಅಮೃತಾಪುರ ಹೋಬಳಿಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಆನೆ ಮತ್ತು ಮಾನವ ಸಂಘರ್ಷ ಹೆಚ್ಚಾಗುತ್ತಿದೆ. ಲಿಂಗದಹಳ್ಳಿ ಹೋಬಳಿಯ ತಣಿಗೇಬೈಲು ನಂದಿಬಟ್ಟಲು ಜೈಪುರ ಸಿದ್ದರಹಳ್ಳಿ ಮಲ್ಲಿಗೇನಹಳ್ಳಿ ತ್ಯಾಗದಬಾಗಿ ಕಸಬಾ ಹೋಬಳಿಯ ಬೈರಾಪುರ ಅತ್ತಿಗನಾಳು ಗುಡ್ಡದ ಬಸವನಹಳ್ಳಿ ಸೀತಾಪುರಪುರ ಕಾವಲು ಲಕ್ಕವಳ್ಳಿ ಹೋಬಳಿಯ ಗುಡ್ಡದಬೀರನಹಳ್ಳಿ ಬರಗೇನಹಳ್ಳಿ ಗುರುಪುರ ಅಮೃತಾಪುರ ಹೋಬಳಿಯ ಋಷಿಪುರ ಎ. ರಾಮನಹಳ್ಳಿ ಬಿ. ರಾಮನಹಳ್ಳಿ ಮೊದಲಾದ ಪ್ರದೇಶಗಳಲ್ಲಿ ಆನೆಗಳ ಹಾವಳಿ ಹೆಚ್ಚಿದೆ. ವರ್ಷದಿಂದ ವರ್ಷಕ್ಕೆ ಆನೆಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದರಿಂದ ರೈತರು ಬೆಳೆದ ವಿವಿಧ ಮಳೆಯಾಶ‍್ರಿತ ಬೆಳೆಗಳನ್ನು ಮತ್ತು ಅಡಿಕೆ ತೆಂಗು ಬಾಳೆ ಮತ್ತು ತೋಟದ ಕೊಳವೆಬಾವಿಗೆ ಅಳವಡಿಸಿರುವ ಪಂಪ್‍ಸೆಟ್‍ಗಳನ್ನು ನಾಶ ಮಾಡಿ ನಷ್ಟ ಉಂಟು ಮಾಡುತ್ತಿವೆ. ಇದಲ್ಲದೆ ಆನೆಗಳ ದಾಳಿಯಿಂದ ಪ್ರತಿವರ್ಷ ಜನರು ಬಲಿಯಾಗುತ್ತಿದ್ದಾರೆ. ಅದೇ ರೀತಿ ರೈತರ ತೋಟ ಹೊಲಗದ್ದೆಗಳಿಗೆ ಅಳವಡಿಸಿರುವ ವಿದ್ಯುತ್‍ ತಂತಿಗಳನ್ನು ತುಳಿದು ಆನೆಗಳು ಸಹ ಬಲಿಯಾಗುತ್ತಿವೆ.

ಮುಂದುವರೆದ ಆನೆಗಳ ಉಪಟಳ: ಹಾನಿ

ತಾಲ್ಲೂಕಿನ ವ್ಯಾಪ್ತಿಯಲ್ಲಿ ಈ ಹಿಂದೆ ಕಾಡಾನೆಗಳ ಉಪಟಳ ಕೇವಲ ಕಾಡಂಚಿನ ಕೆಲವೇ ಗ್ರಾಮಗಳಿತ್ತು. ಆದರೆ ಎರಡು ವರ್ಷಗಳಿಂದ ಈಚೆಗೆ ಕಾಡಾನೆಗಳು ಬರದೆ ಇರುವ ಗ್ರಾಮಗಳ ವ್ಯಾಪ್ತಿಯಲ್ಲೂ ಉಪಟಳ ಹೆಚ್ಚಾಗಿದೆ. ಕಾಡಾನೆಗಳ ಉಪಟಳದಿಂದ ತಾಲ್ಲೂಕಿನ ಮಡಬೂರು ಮುತ್ತಿನಕೊಪ್ಪ ಸಾತ್ಕೋಳಿ ದೊಡ್ಡಿನತಲೆ ಮಾಕೋಡು ಗೇರುಬೈಲು ಸೂಸಲವಾನಿ ಚೆನಮಣಿ ಮಳಲಿ ಬಣಗಿ ಆರಂಬಳ್ಳಿ ದ್ವಾರಮಕ್ಕಿ ರಾವೂರು ಲಿಂಗಾಪುರ ಆಡುವಳ್ಳಿ ಕರ್ಕೇಶ್ವರ ಕಾನೂರು ಸೀತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ರೈತರು ಬೆಳೆದ ಅಡಿಕೆ ಬಾಳೆ ಬೆಳೆ ನಾಶವಾಗಿವೆ. ಸೀತೂರು ಹಾಗೂ ಮಡಬೂರು ಗ್ರಾಮದ ವ್ಯಾಪ್ತಿಯಲ್ಲಿ ಇಬ್ಬರು ಆನೆ ದಾಳಿಗೆ ಬಲಿಯಾಗಿದ್ದಾರೆ. ಉಪಟಳ ನೀಡುತ್ತಿದ್ದ ಒಂದು ಕಾಡಾನೆಯನ್ನು ಸೆರೆ ಹಿಡಿದ್ದರೂ ಸಹ ಹಲವು ಆನೆಗಳು ತಾಲ್ಲೂಕಿನ ವ್ಯಾಪ್ತಿಯಲ್ಲಿ ಬೀಡು ಬಿಟ್ಟಿದ್ದು ಗ್ರಾಮದ ಜನರು ಆತಂಕದಲ್ಲಿಯೇ ಬದುಕುವಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.