ಆಲ್ದೂರು: ‘ಈ ಕ್ಷೇತ್ರದ ಶಾಸಕರು ಜನಸಾಮಾನ್ಯರ ಕಷ್ಟ ಆಲಿಸುವುದನ್ನು ಬಿಟ್ಟು ಕಾಣೆಯಾಗಿದ್ದಾರೆ. ಚುನಾಯಿತ ಪ್ರತಿನಿಧಿ ಸಾರ್ವಜನಿಕರಿಗೆ ಸಮಸ್ಯೆ ಉಂಟಾದಾಗ ಕ್ಷೇತ್ರದಲ್ಲಿದ್ದು ನಷ್ಟ ಉಂಟಾದ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ಆಗ್ರಹಿಸಿದರು.
ಆವತಿ ಹೋಬಳಿಯ ಐದಳ್ಳಿ, ಅರೆನೂರು, ಬಸರವಳ್ಳಿ, ಕಾಫಿ ತೋಟಗಳಲ್ಲಿ ಕಾಡಾನೆ ಬೆಳೆ ಹಾನಿ ಮಾಡಿರುವ ಪ್ರದೇಶಗಳಿಗೆ ಭೇಟಿ ನೀಟಿ ಅವರು ಮಾತನಾಡಿದರು.
ಸುಮಾರು ಎರಡು ತಿಂಗಳಿನಿಂದ ಮೂರು ಆನೆಗಳು ತೋಟದಲ್ಲಿ ಬೀಡು ಬಿಟ್ಟು ಬೆಳೆ ಹಾನಿ ಮಾಡುತ್ತಿವೆ. ವಿಧಾನ ಮಂಡಲದ ಅಧಿವೇಶನದಲ್ಲೂ ವನ್ಯಜೀವಿಗಳ ಹಾವಳಿ ಕುರಿತು ಧ್ವನಿ ಎತ್ತಿಲ್ಲ. ಪ್ರಾಣ ಹಾನಿಯಾದಾಗ ಮಾತ್ರ ಆನೆಗಳನ್ನು ಸ್ಥಳಾಂತರಿಸುವುದಾಗಿ ಅರಣ್ಯ ಇಲಾಖೆಯವರು ಹೇಳುತ್ತಾರೆ ಎಂದು ದೂರಿದರು.
ಚಿಕ್ಕಮಗಳೂರು ಉಪ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಬಾಬು ಅವರಿಗೆ ದೂರವಾಣಿ ಕರೆ ಮಾಡಿ, ಆನೆಗಳನ್ನು ಸ್ಥಳಾಂತರಿಸುವಂತೆ ಆಗ್ರಹಿಸಿದರು.
ಆಲ್ದೂರು ಮಂಡಲ ಬಿಜೆಪಿ ಅಧ್ಯಕ್ಷ ರವಿ ಬಸರವಳ್ಳಿ ಮಾತನಾಡಿ, ಆನೆಗಳನ್ನು ಶಾಶ್ವತವಾಗಿ ಕಾಡಿಗೆ ಓಡಿಸಬೇಕು. ಇಲ್ಲದೆ ಇದ್ದರೆ ಸೆರೆ ಹಿಡಿದು ಸ್ಥಳಾಂತರಿಸಬೇಕು. ಸ್ಪಂದಿಸದೆ ಇದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದರು.
ಆವತಿ ಹೋಬಳಿ ಬಿಜೆಪಿ ಘಟಕದ ಅಧ್ಯಕ್ಷ ಕೆರೆಮಕ್ಕಿ ಮಹೇಶ್, ಮಾನವ– ವನ್ಯಜೀವಿ ಸಂಘರ್ಷ ತಡೆಯಲು ಬೈಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಂಗರವಳ್ಳಿ ಗ್ರಾಮದಲ್ಲಿ ಆ.28ರಂದು ಹೋಬಳಿ ಮಟ್ಟದ ರೈತ ಸಮಾವೇಶ ಆಯೋಜಿಸಲಾಗಿದೆ. ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸಲು ಒಮ್ಮತದ ತೀರ್ಮಾನಕ್ಕೆ ಬರಲಾಗುವುದು ಎಂದರು.
ಗ್ರಾಮಸ್ಥರಾದ ಸಿಂಧು ಕುಮಾರ್, ರಚನ್, ಕೃಷ್ಣೇಗೌಡ, ಸುದೇಶ್, ಮಂಜುನಾಥ್, ಲೋಕೇಶ್, ಮದನ್, ದಯಾನಂದ್ ಜತೆಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.