ಶೃಂಗೇರಿ: ‘ಬೇಗಾರ್ ಗ್ರಾ.ಪಂ. ವ್ಯಾಪ್ತಿಯ ಕೆ.ಮಸಿಗೆ ಗ್ರಾಮದ ಕುದುರೆಮುಖ ರಾಷ್ಟ್ರೀಯ ಉದ್ಯಾನದ ಅಂಚಿನಲ್ಲಿರುವ ತಾರೋಳ್ಳಿಕೊಡಿಗೆಯಲ್ಲಿ ಕಳೆದ 10 ವರ್ಷಗಳಿಂದ ಕಾಡಾನೆಗಳು ಸಂಚರಿಸುತ್ತಿದ್ದು, ಇದರಿಂದ ಈ ಭಾಗದ ರೈತರು ಆತಂಕದಲ್ಲಿದ್ದಾರೆ. ಆದ್ದರಿಂದ ಅವುಗಳನ್ನು ತಕ್ಷಣವೇ ಕುಮ್ಕಿ ಆನೆ ಹಾಗೂ ಶಾರ್ಪ್‌ಶೂಟರ್‌ಗಳ ಸಹಾಯದಿಂದ ಹಿಡಿಸಬೇಕು’ ಎಂದು ಬೇಗಾರ್ ಗ್ರಾ.ಪಂ.ಉಪಾಧ್ಯಕ್ಷ ಅಣ್ಕುಳಿ ಲಕ್ಷ್ಮೀಶ ಒತ್ತಾಯಿಸಿದರು.
ಶೃಂಗೇರಿ ಅರಣ್ಯ ಇಲಾಖೆ ಮತ್ತು ಕೊಪ್ಪ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ತಂಡ ಕುದುರೆಮುಖ ರಾಷ್ಟ್ರೀಯ ಉದ್ಯಾನದ ಅಂಚಿನಲ್ಲಿರುವ ತಾರೋಳ್ಳಿಕೊಡಿಗೆ ಭೇಟಿ ನೀಡಿ, ಗಿರಿಜನರ ಕುಂದುಕೊರತೆಯನ್ನು ಆಲಿಸುವ ಸಂದರ್ಭದಲ್ಲಿ ಅವರು ಮಾತನಾಡಿದರು.
‘ಈ ಭಾಗದಲ್ಲಿ ಹೆಚ್ಚಾಗಿ ಕಾರ್ಮಿಕರು, ಅತಿಸಣ್ಣ ರೈತರೇ ವಾಸಿಸುತ್ತಿದ್ದು, ಕಾಡಾನೆಗಳ ಹಾವಳಿಯಿಂದ ಭಯದ ವಾತಾವರಣದಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಕಾಡಾನೆಗಳನ್ನು ಸೇರೆ ಹಿಡಿಯಬೇಕು’ ಎಂದು ಆಗ್ರಹಿಸಿದರು.
ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಭಾಸ್ಕರ್ ನಾಯ್ಕ ಮಾತನಾಡಿ, ‘ಅರಣ್ಯ ಅಂಚಿನಲ್ಲಿ ವಾಸಿಸುವ ಗಿರಿಜನರು ಸಂವಿಧಾನದಿಂದ ನೀಡಲ್ಪಟ್ಟ ಮೂಲಭೂತ ಹಕ್ಕುಗಳಿಂದ ವಂಚಿತರಾಗಿದ್ದಾರೆ. ಇದಕ್ಕೆ ಪ್ರಮುಖ ಕಾರಣವೆಂದರೆ ಸರ್ಕಾರ ಮತ್ತು ಆಡಳಿತ ವ್ಯವಸ್ಥೆ. ಪರಿಣಾಮ ಇವರಿಗೆ ಶಿಕ್ಷಣದ ಹಕ್ಕು ಪೂರ್ಣ ಪ್ರಮಾಣದಲ್ಲಿ ಲಭ್ಯವಿಲ್ಲ. ದೂರದ ಪ್ರದೇಶಗಳಲ್ಲಿ ಶಾಲೆಗಳಿರುವುದರಿಂದ ಮತ್ತು ಶಿಕ್ಷಕರ ಕೊರತೆ, ಹಾಗೆಯೇ ಸ್ಥಳೀಯ ಭಾಷೆಯ ಬೋಧನೆ ಕೊರತೆಯಿಂದ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಿದ್ದಾರೆ’ ಎಂದರು.
ಸ್ಥಳೀಯ ವಿವಾಸಿ ಸುಬ್ರಹ್ಮಣ್ಯ ಮಾತನಾಡಿ, ‘ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ನಮ್ಮಂಥವರಿಗೆ ಹಕ್ಕುಪತ್ರಗಳ ಕೊರತೆ ಪ್ರಮುಖ ಸಮಸ್ಯೆಯಾಗಿದೆ. ಏಕೆಂದರೆ ನಾವು ವಾಸಿಸುವ ಭೂಮಿಗೆ ಕಾನೂನು ಬದ್ಧ ದಾಖಲೆಗಳು ಅಥವಾ ಹಕ್ಕುಪತ್ರಗಳು ಇರುವುದಿಲ್ಲ. ಇದು ನಮ್ಮನ್ನು ಭೂಮಿಯ ಮಾಲೀಕತ್ವ, ಕೃಷಿ ಮತ್ತು ವಸತಿಯಂತಹ ಹಕ್ಕುಗಳಿಂದ ವಂಚಿತರನ್ನಾಗಿ ಮಾಡಿದೆ. ಹಕ್ಕುಪತ್ರಗಳಿಲ್ಲದೆ ನಮಗೆ ಸರ್ಕಾರದ ಕಲ್ಯಾಣ ಯೋಜನೆ, ಕೃಷಿ ಸಾಲ ಮತ್ತು ಇತರ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಅರಣ್ಯ ಇಲಾಖೆಯ ನಿಯಮಗಳಿಂದ ಸಾಂಪ್ರದಾಯಿಕ ಕೃಷಿ ಪದ್ಧತಿ ಮತ್ತು ಜೀವನೋಪಾಯದ ಮಾರ್ಗಗಳಿಗೆ ಅಡ್ಡಿಯುಂಟಾಗಿದೆ. ಇದು ನಮ್ಮ ಆರ್ಥಿಕ ಪರಿಸ್ಥಿತಿ ಮತ್ತಷ್ಟು ದುರ್ಬಲಗೊಳಿಸಿದೆ’ ಎಂದು ಅಳಲು ತೋಡಿಕೊಂಡರು.
ವಲಯ ಅರಣ್ಯಾಧಿಕಾರಿ ಮಧುಕರ್, ಕೆರೆಕಟ್ಟೆ ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಅನಿಲ್ ಕುಮಾರ್, ಅರಣ್ಯ ಇಲಾಖೆಯ ಶೃತಿ, ಸುನಿಲ್, ಗ್ರಾಮ ಪಂಚಾಯಿತಿ ಸದಸ್ಯರಾದ ಕೇಶವ, ಸ್ಥಳೀಯ ನಿವಾಸಿಗಳಾದ ರವೀಂದ್ರ, ಶ್ರೀನಿವಾಸ, ರೇವಣ್ಣ, ರಾಮಪ್ಪ ಮತ್ತು 24 ಕುಟುಂಬದ ಸದಸ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.