ADVERTISEMENT

ಮಕ್ಕಳಿಗೆ ಅನುಭವಾತ್ಮಕ ಶಿಕ್ಷಣವೂ ಅಗತ್ಯ: ಶಬಾನ ಅಂಜುಮ್

ಸೂಸಲವಾನಿ: ಶಾಲಾವರಣದಲ್ಲಿ ಮಕ್ಕಳೇ ಬೆಳೆದ ಭತ್ತದ ಬೆಳೆ ಕಟಾವು

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 6:14 IST
Last Updated 18 ಡಿಸೆಂಬರ್ 2025, 6:14 IST
ನರಸಿಂಹರಾಜಪುರ ತಾಲ್ಲೂಕು ಸೂಸಲವಾನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಬೆಳೆದಿದ್ದ ಸೋನಾ ಮಸೂರಿ ಭತ್ತದ ಬೆಳೆಯನ್ನು ಬುಧವಾರ ಅತಿಥಿಗಳು ಮತ್ತು ಮಕ್ಕಳು ಕಟಾವು ಮಾಡಿದರು
ನರಸಿಂಹರಾಜಪುರ ತಾಲ್ಲೂಕು ಸೂಸಲವಾನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಬೆಳೆದಿದ್ದ ಸೋನಾ ಮಸೂರಿ ಭತ್ತದ ಬೆಳೆಯನ್ನು ಬುಧವಾರ ಅತಿಥಿಗಳು ಮತ್ತು ಮಕ್ಕಳು ಕಟಾವು ಮಾಡಿದರು   

ಸೂಸಲವಾನಿ (ನರಸಿಂಹರಾಜಪುರ): ಮಕ್ಕಳಿಗೆ ಪಠ್ಯ ಶಿಕ್ಷಣದ ಜತೆ ಅನುಭವಾತ್ಮಕ ಶಿಕ್ಷಣವೂ ಅಗತ್ಯವಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಬನಾ ಅಂಜುಂ ತಿಳಿಸಿದರು.

ತಾಲ್ಲೂಕಿನ ಕಡಹಿನಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೂಸಲವಾನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಮಕ್ಕಳು ಶಾಲಾ ಆವರಣದಲ್ಲಿ ಬೆಳೆಸಿದ್ದ ಸೋನಾ ಮಸೂರಿ ಭತ್ತದ ಗದ್ದೆಯ ಕಟಾವು, ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ 29 ಮಕ್ಕಳಿಗೆ ಕನ್ನಡ ಶಾಲೆಯ ರೈತ ಮಿತ್ರ ಬಿರುದು ಹಾಗೂ ಮಕ್ಕಳಿಗೆ ಅಭಿನಂದನಾ ಪತ್ರ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಶಾಲಾ ಆವರಣದಲ್ಲಿ ಮಕ್ಕಳು, ಪೋಷಕರು ಹಾಗೂ ಎಸ್‌ಡಿಎಂಸಿ ಸದಸ್ಯರ ಸಹಕಾರದಿಂದ ಭತ್ತದ ಬೆಳೆ ಬೆಳೆದಿರುವುದು ಅರ್ಥಪೂರ್ಣವಾಗಿದೆ. ಇದರಿಂದ ಮಕ್ಕಳಿಗೆ ಭತ್ತದ ಕೃಷಿ ಬಗ್ಗೆ ಪೂರ್ಣ ಪರಿಚಯವಾಗಲಿದೆ. ಸರ್ಕಾರಿ ಶಾಲೆಗಳು ಗ್ರಾಮದ ಎಲ್ಲರ ಸೊತ್ತಾಗಿದೆ ಎಂದರು.

ADVERTISEMENT

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಂಚಾಲಕ ಎಸ್.ಎಸ್.ಸಂತೋಷ್ ಕುಮಾರ್ ಮಾತನಾಡಿ, ಅನ್ನ ಹಾಗೂ ಅಕ್ಷರ ಜೀವನಕ್ಕೆ ಅತಿಮುಖ್ಯ. ಮಕ್ಕಳ ಜೀವನ ಪರಿಪೂರ್ಣವಾಗಬೇಕಾದರೆ ನಾಲ್ಕು ಗೋಡೆಗಳ ಒಳಗಿನ ಶಿಕ್ಷಣದ ಜತೆಗೆ ಎಲ್ಲಾ ಕ್ಷೇತ್ರಗಳ ಪರಿಚಯ ಇರಬೇಕು. ಇತ್ತೀಚಿನ ವರ್ಷಗಳಲ್ಲಿ ಭತ್ತದ ಬೆಳೆ ಮರೆಯಾಗುತ್ತಿರುವ ಸಂದರ್ಭದಲ್ಲಿ ಮಕ್ಕಳ ಸೋನಾ ಮಸೂರಿ ಭತ್ತದ ಬೆಳೆ ಬೆಳೆದಿರುವುದು ಶಿಕ್ಷಕರ, ಮಕ್ಕಳ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ. ಸರ್ಕಾರಿ ಶಾಲೆಗಳಲ್ಲಿ ನೆಲದ ಮಣ್ಣಿನ ಸೊಗಡಿನ ಜತೆಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ ಎಂದರು.

ಕಡಹಿನಬೈಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುನೀಲ್ ಕುಮಾರ್ ಮಾತನಾಡಿ, ರಾಜ್ಯದ ಇತಿಹಾಸದಲ್ಲೇ ಸರ್ಕಾರಿ ಶಾಲೆಯೊಂದರಲ್ಲಿ ಮಕ್ಕಳೇ ಭತ್ತದ ಬೆಳೆ ಬೆಳೆದು ಇತಿಹಾಸ ಸೃಷ್ಟಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಇದನ್ನು ಗಮನಿಸಿ ಮಕ್ಕಳಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಗದ್ದೆ ಕಟಾವು ದಿನವೇ ಮಕ್ಕಳಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಸೂಸಲವಾನಿ ಶಾಲೆಗೆ ಸರ್ಕಾರದಿಂದ ₹11 ಲಕ್ಷ ಅನುದಾನ ಬಂದಿದ್ದು ಇದಲ್ಲಿ ₹6 ಲಕ್ಷ ಸಭಾಂಗಣಕ್ಕೆ, ₹5 ಲಕ್ಷ ಕೊಠಡಿಯ ಮೇಲ್ಚಾವಣಿಗೆ ಉಪಯೋಗಿಸಲಾಗಿದೆ ಎಂದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಎಚ್.ಪೂರ್ಣೇಶ್ ಮಾತನಾಡಿ, ಈ ದೇಶದ ರೈತರು, ಗಡಿ ಕಾಯುವ ಯೋಧರು ದೇಶದ ಆಸ್ತಿಯಾಗಿದ್ದಾರೆ. ಸೂಸಲವಾನಿ ಸರ್ಕಾರಿ ಶಾಲೆಯಲ್ಲಿ ಮಕ್ಕಳು ಭತ್ತ ಬೆಳೆದಿರುವುದನ್ನು ಕನ್ನಡ ಸಾಹಿತ್ಯ ಪರಿಷತ್ ಗುರುತಿಸಿ ಮಕ್ಕಳಿಗೆ ಬಿರುದು ನೀಡಿ ಅಭಿನಂದಿಸಿದೆ. ಕನ್ನಡ ಶಾಲೆಗಳನ್ನು ಉಳಿಸಬೇಕಾಗಿದೆ ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ನಾಗೇಶ್ ಅಧ್ಯಕ್ಷತೆ ವಹಿಸಿದ್ದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಿಲ್ಲಿ ಮಾತುಕುಟ್ಟಿ, ಸದಸ್ಯರಾದ ಚಂದ್ರಶೇಖರ್, ಎ.ಬಿ.ಮಂಜುನಾಥ್, ಪೂರ್ಣಿಮ ಸಂತೋಷ್, ವಾಣಿ ನರೇಂದ್ರ, ಶೈಲಾ ಮಹೇಶ್, ಅಶ್ವಿನಿ, ತಾಲ್ಲೂಕು ಕರವೇ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಶ್ರೀನಿವಾಸ್, ಬಡ್ತಿ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಅಶೋಕ್, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಂಜುಂಡಪ್ಪ, ಪಿಡಿಒ.ವಿಂದ್ಯಾ, ಎಸ್‌ಡಿಎಂಸಿ ಉಪಾಧ್ಯಕ್ಷ ದೇವಪ್ಪ, ಸಾಹಿತ್ಯ ಪರಿಷತ್‌ನ ಉದಯ ಗಿಲ್ಲಿ, ಶಾಲಾ ಮುಖ್ಯಶಿಕ್ಷಕ ಎಸ್.ರಾಜಪ್ಪ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲ ಅಜ್ಜಪ್ಪ, ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ನಂದಿನಿ ಆಲಂದೂರು, ಸಹಾಯಕ ಕೃಷಿ ನಿರ್ದೇಶಕ ಮಹೇಶ್, ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಕಾಶ್, ಪ್ರಮೀಳಾ ಹಾಜರಿದ್ದರು. 

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶಾಲೆಯ 29 ಮಕ್ಕಳಿಗೆ ಕನ್ನಡ ಶಾಲೆ ರೈತ ಮಿತ್ರ ಮಕ್ಕಳು ಬಿರುದು ನೀಡಿ ಅಭಿನಂದನಾ ಪತ್ರ ನೀಡಲಾಯಿತು. ಪ್ರಗತಿಪರ ಕೃಷಿಕರಾದ ಬಿ.ಶಾಂತಕುಮಾರಿ, ಸುನಿತಾ ಜೋಶಿ, ಶಾಲಾ ಮುಖ್ಯಶಿಕ್ಷಕ ಎಸ್.ರಾಜಪ್ಪ, ಬಿಇಒ ಶಬಾನಾ ಅಂಜುಮ್ ಅವರನ್ನು ಸನ್ಮಾನಿಸಲಾಯಿತು.

ಸುಜನ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕರವೇ ಮಹಿಳಾ ಘಟಕದಿಂದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿಯರಾದ ದ್ರವ್ಯ, ಸಮೃದ್ದಿ, ಪ್ರತೀಕ್ಷಾ ಅವರನ್ನು ಗೌರವಿಸಲಾಯಿತು.

‘ಸೀನಶೆಟ್ಟರು ನಮ್ಮ ಟೀಚರ್’

ಪಾಠ ಭತ್ತ ಬೆಳೆಯಲು ಪ್ರೇರಣೆ ‘7ನೇ ತರಗತಿಯ ಪಠ್ಯದಲ್ಲಿರುವ ‘ಸೀನಶೆಟ್ಟರು ನಮ್ಮ ಟೀಚರ್’ ಪಾಠದಲ್ಲಿ ಭತ್ತದ ಗದ್ದೆ ಸಸಿ ನಾಟಿ ಮಾಡುವುದು ಸಸಿ ಕೀಳುವದರ ಬಗ್ಗೆ ವಿವರಣೆ ಇದೆ. ಇದನ್ನೇ ಸ್ಪೂರ್ತಿಯಾಗಿಟ್ಟುಕೊಂಡು 2016ರಿಂದಲೂ ಸೂಸಲವಾನಿ ಸರ್ಕಾರಿ ಶಾಲೆಯಲ್ಲಿ ಅನುಭವಾತ್ಮಕ ಕಲಿಕೆಯ ಅಂಗವಾಗಿ ಸ್ವಲ್ಪ ಜಾಗದಲ್ಲಿ ಭತ್ತದ ಬೆಳೆ ಬೆಳೆಯಲಾಗುತ್ತಿದೆ’ ಮುಖ್ಯಶಿಕ್ಷಕ ಎಸ್.ರಾಜಪ್ಪ ತಿಳಿಸಿದರು. ‘ಕಳೆದ ವರ್ಷದಿಂದ ಅಂದಾಜು 10 ಗುಂಟೆ ಜಾಗದಲ್ಲಿ ಸೋನಾ ಮಸೂರಿ ತಳಿಯ ಭತ್ತದ ಕೃಷಿ ಆರಂಭಿಸಲಾಗಿದ್ದು ಅಕ್ಕಿಯನ್ನು ಮಕ್ಕಳ ಊಟಕ್ಕೆ ಬಳಸಲಾಗಿದೆ. ಹುಲ್ಲನ್ನು ಮಾರಿ ಶಾಲೆಗೆ ಕೃಷಿ ಪರಿಕರ ಖರೀದಿಸಲಾಗಿದೆ. ಭತ್ತದ ಬೆಳೆಗೆ ಕೊಟ್ಟಿಗೆ ಗೊಬ್ಬರವನ್ನು ಪೋಷಕರು ನೀಡಿ ಸಹಕಾರ ನೀಡಿದ್ದಾರೆ. ರಾಸಾಯನಿಕ ಗೊಬ್ಬರವನ್ನು ವೈಯಕ್ತಿಕವಾಗಿ ನಾನು ನೀಡಿದ್ದೇನೆ. ನಾಟಿ ಕಾರ್ಯ ಗದ್ದೆ ಕೊಯ್ಲಿಗೆ ಮಕ್ಕಳೊಂದಿಗೆ ಪೋಷಕರು ಸಹಕಾರ ನೀಡುತ್ತಾರೆ’ ಎಂದು ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.