ತರೀಕೆರೆ: ಮೇ ಮತ್ತು ಜೂನ್ ತಿಂಗಳಲ್ಲಿ ಉತ್ತಮ ಮಳೆ ಲಭಿಸಿದ್ದರಿಂದ ಮಾರುಕಟ್ಟೆಗೆ ಸ್ಥಳೀಯ ತರಕಾರಿ ಆವಕ ನಿಧಾನವಾಗಿ ಏರಿಕೆಯಾಗುತ್ತಿದ್ದು, ಬೆಲೆಯಲ್ಲಿ ಇಳಿಕೆ ಕಂಡುಬರುತ್ತಿದೆ. ಹಿಂದಿನ ವಾರಕ್ಕೆ ಹೋಲಿಸಿದರೆ ಸೊಪ್ಪು, ತರಕಾರಿ ಬೆಲೆ ಸ್ವಲ್ಪ ಕಡಿಮೆಯಾಗಿದ್ದು, ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ.
ತರೀಕೆರೆ ತಾಲ್ಲೂಕು ವ್ಯಾಪ್ತಿಯಲ್ಲಿ ತರಕಾರಿ ಬೆಳೆ ಕಡಿಮೆ. ಚಿಕ್ಕಮಗಳೂರು ಮತ್ತು ಕಡೂರು ಭಾಗದಿಂದ ತರಕಾರಿ ಪಟ್ಟಣದ ಮಾರುಕಟ್ಟೆಗೆ ಬರುತ್ತದೆ. ಸಾಮಾನ್ಯವಾಗಿ ಬದನೆಕಾಯಿ ಬೆಲೆ ಕಡಿಮೆ ಇರುತ್ತಿತ್ತು, ಆದರೆ, ಸದ್ಯ ಬದನೆಗೆ ಕೆ.ಜಿಗೆ ₹50 ದರ ಇದೆ. ಉಳಿದ ತರಕಾರಿಗಳು ಗ್ರಾಹಕರ ಕೈಗೆಟುಕುವ ದರದಲ್ಲಿವೆ.
ನಿರಂತರ ಮಳೆಯಿಂದಾಗಿ ಮಾರುಕಟ್ಟೆಗೆ ಬಂದು ತರಕಾರಿ ಖರೀದಿಸುತ್ತಿರುವರ ಸಂಖ್ಯೆ ಕಡಿಮೆಯಾಗಿದೆ. ಮಾರುಕಟ್ಟೆ ಬಳಿ ಪೈಪ್‍ಲೈನ್ ಕಾಮಗಾರಿಗಾಗಿ ಮಣ್ಣು ಅಗೆದು ಹಾಕಲಾಗಿದ್ದು, ರಸ್ತೆಯ ಎರಡೂ ಬದಿಗಳಲ್ಲಿ ಕೆಸರು ಗದ್ದೆಯಾಗಿ ತಿರುಗಾಡಲು ಸಮಸ್ಯೆಯಾಗಿದೆ. ಇದರಿಂದ ಗ್ರಾಹಕರು ಮಾರುಕಟ್ಟೆಗೆ ಬಂದು ತರಕಾರಿಗಳನ್ನು ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ವ್ಯಾಪಾರಿಗಳು ದೂರಿದರು.
‘ಮನೆ ಬಾಗಿಲಿಗೆ ಬರುವ ತಳ್ಳುಗಾಡಿ, ಮತ್ತಿತರ ಸಣ್ಣ-ಪುಟ್ಟ ವಾಹನಗಳಲ್ಲಿ ತರಕಾರಿ ಮಾರುತ್ತಿರುವರ ಬಳಿ ತರಕಾರಿ ಖರೀದಿಸುತ್ತೇವೆ. ಟೊಮೊಟೊ, ಈರುಳ್ಳಿ, ಆಲೂಗಡ್ಡೆ ದರ ಕೆ.ಜಿಗೆ ₹30ರ ಒಳಗಿದೆ. ಹಸಿಮೆಣಸಿನಕಾಯಿ, ಬೆಂಡೆಕಾಯಿ, ಕ್ಯಾರೆಟ್ ಕೆ.ಜಿಗೆ ₹40ರಷ್ಟಿದೆ. ಕೊತ್ತಂಬರಿ ಸೇರಿದಂತೆ ಸೊಪ್ಪುಗಳ ದರ ಇಳಿಕೆಯಾಗಿದೆ’ ಎಂದು ತರಕಾರಿ ಖರೀದಿಸುತ್ತಿದ್ದ ಗ್ರಾಹಕರೊಬ್ಬರು ಹೇಳಿದರು.
ಬೆಳ್ಳುಳ್ಳಿ ಹಸಿ ಶುಂಠಿ ತುಟ್ಟಿ ‘ಬೀನ್ಸ್ ಹಾಗಲಕಾಯಿ ಹೀರೇಕಾಯಿ ಹೂಕೋಸಿನ ಬೆಲೆ ಇಳಿದಿದೆ. ಬೆಳ್ಳುಳ್ಳಿ ಕೆ.ಜಿಗೆ 165 ಮತ್ತು ಹಸಿ ಶುಂಠಿ ದರ ₹140 ಇದ್ದು ಬೆಲೆಯಲ್ಲಿ ದೊಡ್ಡ ಮಟ್ಟದ ಇಳಿಕೆ ಆಗಿಲ್ಲ’ ಎಂದು ತರಕಾರಿ ವ್ಯಾಪಾರಿಯೊಬ್ಬರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.