ADVERTISEMENT

ಕೃಷಿ ಪಂಪ್‌ಸೆಟ್‌: ಹಗಲಲ್ಲಿ ತ್ರೀಫೇಸ್ ನೀಡುವಂತೆ ಮೆಸ್ಕಾಂಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 5:17 IST
Last Updated 20 ಡಿಸೆಂಬರ್ 2025, 5:17 IST
ತರೀಕೆರೆಯಲ್ಲಿ ಮೆಸ್ಕಾಂನ ಜನಸಂಪರ್ಕ ಸಭೆಯಲ್ಲಿ ಅಧೀಕ್ಷಕ ಎಂಜಿನಿಯರ್ ಮಂಜುನಾಥ್, ಕಾರ್ಯನಿರ್ವಾಹಕ ಎಂಜಿನಿಯರ್ ರವಿಕಿರಣ್, ಎಂಜಿನಿಯರ್ ಮಂಜುನಾಥ್, ಸಹಾಯಕ ಎಂಜಿನಿಯರ್ ಅಜಯ್ ಭಾಗವಹಿಸಿದ್ದರು
ತರೀಕೆರೆಯಲ್ಲಿ ಮೆಸ್ಕಾಂನ ಜನಸಂಪರ್ಕ ಸಭೆಯಲ್ಲಿ ಅಧೀಕ್ಷಕ ಎಂಜಿನಿಯರ್ ಮಂಜುನಾಥ್, ಕಾರ್ಯನಿರ್ವಾಹಕ ಎಂಜಿನಿಯರ್ ರವಿಕಿರಣ್, ಎಂಜಿನಿಯರ್ ಮಂಜುನಾಥ್, ಸಹಾಯಕ ಎಂಜಿನಿಯರ್ ಅಜಯ್ ಭಾಗವಹಿಸಿದ್ದರು   

ತರೀಕೆರೆ: ತಾಲ್ಲೂಕಿನಲ್ಲಿ ರಾತ್ರಿ ವೇಳೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚುತ್ತಿರುವುದರಿಂದ ರೈತರು ನೀರು ಹಾಯಿಸಲು ತೋಟಗಳಿಗೆ ಹೋಗಲು ಭಯಪಡುತ್ತಿದ್ದಾರೆ. ಹಾಗಾಗಿ ಮೆಸ್ಕಾಂ ಅಧಿಕಾರಿಗಳು ಕೃಷಿ ಪಂಪ್‌ಸೆಟ್‌ಗಳಿಗೆ ಹಗಲಿನಲ್ಲಿ ತ್ರೀಫೇಸ್ ವಿದ್ಯುತ್‌ ನೀಡಬೇಕು ಎಂದು ಭಾರತೀಯ ಕಿಸಾನ್ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪರಮೇಶ್ವರಪ್ಪ ಕೆ. ಒತ್ತಾಯಿಸಿದರು.

ಪಟ್ಟಣದ ಮೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಕಚೇರಿಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.

ತಾಲೂಕಿನಲ್ಲಿ ಇತ್ತೀಚೆಗೆ ಕಾಡು ಪ್ರಾಣಿಗಳ ಹಾವಳಿ ವಿಪರೀತವಾಗಿದ್ದು, ಸಮೀಪದ ಕಾಡಿನಿಂದ ಆನೆ, ಚಿರತೆ, ಕಾಡುಹಂದಿ, ಕರಡಿಗಳು ಹಗಲು ಮತ್ತು ರಾತ್ರಿ ವೇಳೆಯಲ್ಲಿ ರೈತರ ತೋಟ, ಹೊಲ ಗದ್ದೆಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿವೆ. ಇದರಿಂದ ರಾತ್ರಿ ಸಮಯದಲ್ಲಿ ರೈತರು ಕೃಷಿ ಕಾರ್ಯಕ್ಕೆ ಹೋಗಲು ಭಯಪಡುತ್ತಿದ್ದಾರೆ. ಮೆಸ್ಕಾಂನವರು ರಾತ್ರಿಗಿಂತ ಹಗಲಿನಲ್ಲಿ ನಿರಂತರವಾಗಿ 7 ಗಂಟೆ ತಪ್ಪದೆ ತ್ರಿಫೇಸ್ ವಿದ್ಯುತ್ ಸರಬರಾಜು ಮಾಡಬೇಕೆಂದು ಆಗ್ರಹಿಸಿದರು.

ADVERTISEMENT

ಗುರುಪುರದ ಬಾಲು ಮಾತನಾಡಿ, ಗುರುಪುರ ಗ್ರಾಮದಲ್ಲಿ ಬೆಳಕು ಯೋಜನೆಯಡಿ ವಿದ್ಯುತ್ ಸಂಪರ್ಕಕ್ಕೆ 3 ವರ್ಷಗಳ ಹಿಂದೆಯೇ ಆಯ್ಕೆಯಾಗಿದ್ದ ಐದು ಮನೆಗಳಿಗೆ ಎರಡು ತಿಂಗಳ ಹಿಂದೆ ವಿದ್ಯುತ್‌ ಸಂಪರ್ಕ ಕಲ್ಪಿಸಿ, 3 ವರ್ಷದ ವಿದ್ಯುತ್ ಬಿಲ್‌ ನೀಡಿದ್ದಾರೆ. ಇಲಾಖೆ ಈ ತಪ್ಪನ್ನು ಸರಿಪಡಿಸಬೇಕು. ಸರ್ಕಾರ ಎಸ್.ಸಿ.ಪಿ. ಮತ್ತು ಟಿ.ಎಸ್.ಪಿ. ಯೋಜನೆಯಡಿ ಫಲಾನುಭವಿಗಳಿಗೆ ವಿದ್ಯುತ್ ಸಮರ್ಪಕ ಕಲ್ಪಿಸಲು ಒತ್ತಾಯಿಸಿದರು.

ಸುಣ್ಣದಹಳ್ಳಿ ಭಾರತೀಯ ಕಿಸಾನ್ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಪಿ. ಚಂದಪ್ಪ ಮಾತನಾಡಿ, ಸುಟ್ಟುಹೋದ ಪರಿವರ್ತಕಗಳನ್ನು ಇಲಾಖೆ ನಿಯಮಾನುಸಾರ 72 ಗಂಟೆ ಒಳಗೆ ಬದಲಾಯಿಸಿಕೊಡಬೇಕು ಎಂದರು.

ವಕೀಲ ಕೃಷ್ಣಮೂರ್ತಿ ಮಾತನಾಡಿ, ತ್ರಿಫೇಸ್ ವಿದ್ಯುತನ್ನು ನಿರಂತರವಾಗಿ ರೈತರಿಗೆ ಇಲಾಖೆ ಸರಬರಾಜು ಮಾಡುತ್ತಿಲ್ಲ. ಈ ಬಗ್ಗೆ ಅನೇಕ ಬಾರಿ ದೂರಿದರೂ ಸರಿಪಡಿಸುತ್ತಿಲ್ಲ. ಕೂಡಲೇ ಸಮರ್ಪಕ ವಿದ್ಯುತ್ ಸರಬರಾಜು ಮಾಡಬೇಕೆಂದು ಆಗ್ರಹಿಸಿದರು.

ಸುಣ್ಣದಹಳ್ಳಿ ದಯಾನಂದ್‌ ಮಾತನಾಡಿ, ಜಂಗಲ್ ತೆರವುಗೊಳಿಸಬೇಕೆಂದು ಒತ್ತಾಯಿಸಿದರು. ರೈತರಾದ ಹಾದಿಕೆರೆ ಷಡಾಕ್ಷರಪ್ಪ, ಸುರೇಶಚಾರ್, ಎನ್.ಎಂ. ರುದ್ರಯ್ಯ, ತಾಲ್ಲೂಕು ಘಟಕದ ಕಾರ್ಯದರ್ಶಿ ದಕ್ಷಿಣಮೂರ್ತಿ, ಗ್ರಾಹಕರು, ರೈತರು, ಭಾರತೀಯ ಕಿಸಾಸ್ ಸಂಘದ ಸಭೆಯಲ್ಲಿ ಚರ್ಚಿಸಿದರು.

ಮೆಸ್ಕಾಂ ಅಧೀಕ್ಷಕ ಎಂಜಿನಿಯರ್‌ ಮಂಜುನಾಥ್ ಮಾತನಾಡಿ, ನೂತನವಾಗಿ ನಿರ್ಮಾಣವಾಗಿರುವ ನಂದಿಹೊಸಳ್ಳಿ 66/11 ಕೆ.ವಿ. ಕೇಂದ್ರದಿಂದ 7 ಹೊಸ, 11 ಕೆ.ವಿ. ಎರಡು ಮಾರ್ಗಗಳನ್ನು ರಚಿಸುವ ಬಗ್ಗೆ ₹326 ಲಕ್ಷಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಶಿವಪುರ ಕೇಂದ್ರದಿಂದ 11 ಕೆ.ವಿ. ಫೀಡ‌ರ್ ರಚಿಸುವ ಬಗ್ಗೆ ₹96.5 ಲಕ್ಷ ಆಡಳಿತಾತ್ಮಕ ಅನುಮೋದನೆ ಮತ್ತು ಲಕ್ಕವಳ್ಳಿ ವಿ.ವಿ. ಕೇಂದ್ರದಿಂದ ಹೊಸ 11 ಕೆ.ವಿ. ಮಾರ್ಗಗಳ ರಚನೆ ಮತ್ತು ದೇವಿಪುರ ವಿ.ವಿ. ಕೇಂದ್ರದಿಂದ ಹೊಸ ಫೀಡರ್‌ ರಚನೆ ಸೇರಿ ₹600 ಲಕ್ಷದ ವಿಸ್ತೃತ ಯೋಜನಾ ವರದಿ ಸಲ್ಲಿಕೆಯಾಗಿದೆ ಎಂದು ತಿಳಿಸಿದರು.

ಮೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್‌ ರವಿ ಕಿರಣ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಮಂಜುನಾಥ್, ಸಹಾಯಕ ಎಂಜಿನಿಯರ್‌ ಅಜಯ್, ಶಾಖಾಧಿಕಾರಿಗಳಾದ ಗುರುಪಾದಪ್ಪ, ತಿಪ್ಪೇಶಪ್ಪ, ರಘುನಂದನ್, ಮೋಹನ್, ರಾಮು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.