
ಗದ್ದೆಮನೆ (ನರಸಿಂಹರಾಜಪುರ): ರೈತರ ಸಮಸ್ಯೆ ಪರಿಹಾರಕ್ಕಾಗಿ ಕೊಪ್ಪ, ನರಸಿಂಹರಾಜಪುರ, ಶೃಂಗೇರಿ ತಾಲ್ಲೂಕು ಸೇರಿ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ ರಚನೆ ಮಾಡಲಾಗಿದೆ ಎಂದು ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ನೂತನ ಅಧ್ಯಕ್ಷ ವಕೀಲ ಗದ್ದೇಮನೆ ವಿಶ್ವನಾಥ್ ಹೇಳಿದರು.
ತಾಲ್ಲೂಕಿನ ಗದ್ದೇಮನೆಯಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶೃಂಗೇರಿ ಕ್ಷೇತ್ರದ 3 ತಾಲ್ಲೂಕುಗಳ ರೈತ ಪ್ರತಿನಿಧಿಗಳ ಪೂರ್ವಭಾವಿ ಸಭೆ ನಡೆಸಲಾಗಿದೆ. ರೈತರ ಸಮಸ್ಯೆಗಳ ಪರಿಹಾರಕ್ಕೆ ಕಾನೂನು ಬದ್ಧ ಹೋರಾಟ ಮಾಡಬೇಕು ಎಂಬ ಅಭಿಪ್ರಾಯ ಬಂದಿದೆ. ಕ್ಷೇತ್ರ ಮಟ್ಟದ ರೈತರ ಒಕ್ಕೂಟ ಅಗತ್ಯವಾಗಿದೆ ಎಂಬ ರೈತರ ಅಭಿಪ್ರಾಯದಂತೆ ನೂತನವಾಗಿ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ ಪ್ರಾರಂಭಿಸಲಾಗಿದೆ. ಶೃಂಗೇರಿ ಕ್ಷೇತ್ರದಲ್ಲಿ 254 ಗ್ರಾಮ ಬರಲಿದ್ದು, ಪ್ರತಿ ಗ್ರಾಮದಲ್ಲೂ ಕ್ಷೇತ್ರ ರೈತ ಒಕ್ಕೂಟಕ್ಕೆ ಒಬ್ಬ ಸದಸ್ಯರಿರುತ್ತಾರೆ. 8 ಹೋಬಳಿ ಇದ್ದು ಪ್ರತಿ ಹೋಬಳಿಗೂ ಒಬ್ಬ ಉಪಾಧ್ಯಕ್ಷರು, ಒಬ್ಬ ಸಹ ಕಾರ್ಯದರ್ಶಿ ಇರುತ್ತಾರೆ. ಬಹುತೇಕ ರೈತರ ಸಮಸ್ಯೆಯಲ್ಲಿ ಇದುವರೆಗೆ ಕಾನೂನು ಬದ್ದ ಹೋರಾಟ ಮಾಡಲು ಸಾದ್ಯವಾಗುತ್ತಿರಲಿಲ್ಲ. ಆದ್ದರಿಂದ ಮುಂದೆ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದಿಂದ ಒಬ್ಬ ವಕೀಲರನ್ನು ನೇಮಕ ಮಾಡುತ್ತೇವೆ. ಆ ವಕೀಲರಿಗೆ ಒಕ್ಕೂಟವೇ ಶುಲ್ಕ ನೀಡಲಿದೆ. ವಕೀಲರ ಓಡಾಟ, ಇತರೆ ಖರ್ಚನ್ನು ಒಕ್ಕೂಟವೇ ನೀಡುತ್ತದೆ. ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ರಾಜಕೀಯದಿಂದ ಹೊರತಾದ ಸಂಘಟನೆಯಾಗಿದೆ ಎಂದರು.
ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಗೌರವಾಧ್ಯಕ್ಷ ಶೆಟ್ಟಿಗದ್ದೆ ರಾಮಸ್ವಾಮಿ ಮಾತನಾಡಿ, ರೈತರ ಸಮಸ್ಯೆಗಳ ಹೋರಾಟಕ್ಕೆ ಕಾನೂನಿನ ಬಲ ಇರಲಿಲ್ಲ. ಇದಕ್ಕಾಗಿ ಮುಂದಿನ ದಿನಗಳಲ್ಲಿ ಕಾನೂನಾತ್ಮಕ ಹೋರಾಟ ಮಾಡಲಾಗುವುದು. ಈಗಾಗಲೇ ಶೃಂಗೇರಿ ಕ್ಷೇತ್ರದಲ್ಲಿ ಬಗರ್ ಹುಕಂ ಜಮೀನಿನ ಸಮಸ್ಯೆ ಇದೆ. ಫಾರಂ ನಂಬರ್ 50, 53, 57ರಲ್ಲಿ ರೈತರು ಅರ್ಜಿ ಸಲ್ಲಿಸಿದ್ದಾರೆ. ಕಂದಾಯ ಭೂಮಿ ಅರಣ್ಯವಾಗುತ್ತಿದೆ. ಇದಕ್ಕೆ ಕಾನೂನಾತ್ಮಕ ಪರಿಹಾರ ಕಂಡು ಕೊಳ್ಳಲು ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ ರಚಿಸಲಾಗಿದೆ ಎಂದರು.
ಮಲೆನಾಡು ರೈತ ನಾಗರೀಕ ಹಿತ ರಕ್ಷಣಾ ಸಮಿತಿಯ ಹಿರಿಯ ಸದಸ್ಯ ತುಪ್ಪೂರು ಮಂಜುನಾಥ್ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.