ನರಸಿಂಹರಾಜಪುರ: ತಾಲ್ಲೂಕಿನ ವ್ಯಾಪ್ತಿಯಲ್ಲಿ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಅಗ್ನಿಶಾಮಕ ಇಲಾಖೆಯ ಸ್ವಂತ ಕಟ್ಟಡ ನಿರ್ಮಾಣವಾಗಿದ್ದರೂ ಇದುವರೆಗೂ ಉದ್ಘಾಟನೆ ಭಾಗ್ಯಕಂಡಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಈ ಹಿಂದೆ ಮಲೆನಾಡು ಭಾಗದ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬೆಂಕಿ ಅವಘಡ, ಪ್ರಕೃತಿ ವಿಕೋಪ, ಮತ್ತಿತರ ಅನಾಹುತಗಳು ಸಂಭವಿಸಿದಾಗ 55 ಕಿಲೋ ಮೀಟರ್ ದೂರದ ಶಿವಮೊಗ್ಗ ಅಥವಾ ಭದ್ರಾವತಿಯ ಅಗ್ನಿಶಾಮಕ ಠಾಣೆಯನ್ನು ಅವಲಂಬಿಸಬೇಕಾಗಿತ್ತು. ಈ ಹಿನ್ನಲೆಯಲ್ಲಿ ತಾಲ್ಲೂಕಿನ ಜನರ ಬಹುದಿನದ ಬೇಡಿಕೆಗೆ ಸ್ಪಂದಿಸಿದ ಸರ್ಕಾರ 2011ರಲ್ಲಿ ಅಗ್ನಿಶಾಮಕ ಠಾಣೆಯನ್ನು ಮಂಜೂರು ಮಾಡಲಾಗಿತ್ತು. ಕಾಯಂ ಕಟ್ಟಡ ಕೊರತೆಯ ಕಾರಣ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಯಾರ್ಡ್‌ನಲ್ಲಿ ತಾತ್ಕಾಲಿಕವಾಗಿ ಅಗ್ನಿಶಾಮಕ ಠಾಣೆ ಆರಂಭಿಸಲಾಗಿತ್ತು.
ಹಿಂದೆಯೇ ಅಗ್ನಿಶಾಮಕ ಠಾಣೆಗೆ ನಾಗಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಸಿಂಸೆ ಗ್ರಾಮದಲ್ಲಿ 2 ಎಕರೆ ಜಮೀನು ಗುರುತಿಸಲಾಗಿತ್ತು. ನೂತನ ಕಟ್ಟಡ ನಿರ್ಮಾಣಕ್ಕೆ ₹ 3 ಕೋಟಿ ಅನುದಾನ ಬಿಡುಗಡೆ ಮಾಡಿ 2024ರ ಫೆಬ್ರುವರಿ 18ರಂದು ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಪ್ರಸ್ತುತ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದ್ದು ಉದ್ಘಾಟನೆಗಾಗಿ ಕಾಯುತ್ತಿದೆ.
‘ಅಗ್ನಿಶಾಮಕ ಠಾಣೆಯ ಕಟ್ಟಡದ ಕಾಮಗಾರಿ ಸಂಪೂರ್ಣಗೊಂಡಿಲ್ಲ. ಒಳಭಾಗದಲ್ಲಿ ವಿಶ್ರಾಂತಿ ಕೊಠಡಿ ಸೇರಿ ಹಲವು ಕೆಲಸಗಳು ಬಾಕಿ ಉಳಿದಿವೆ. ಗುತ್ತಿಗೆದಾರರು ಕಟ್ಟಡವನ್ನು ಇಲಾಖೆಗೆ ಹಸ್ತಾಂತರಿಸಿಲ್ಲ. ಕಾಮಗಾರಿ ಪೂರ್ಣಗೊಂಡ ಕೊಡಲೇ ಮೇಲಧಿಕಾರಿಗಳ ಗಮನಕ್ಕೆ ತಂದು ಉದ್ಘಾಟನೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಅಗ್ನಿಶಾಮಕ ಠಾಣೆಯ ಅಧಿಕಾರಿ ದೇವೇಂದ್ರನಾಯಕ್ ‘ಪ್ರಜಾವಾಣಿ’ ಗೆ ತಿಳಿಸಿದರು.
‘ನೂತನ ಅಗ್ನಿಶಾಮಕ ಠಾಣೆಗೆ ಹೊಸ ವಾಹನಗಳನ್ನು ನೀಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ’ ಎಂದು ಶಾಸಕ ಟಿ.ಡಿ.ರಾಜೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.
ದೊಡ್ಡ ವಾಹನಗಳ ಕೊರತೆ
ತಾಲ್ಲೂಕು ಅಗ್ನಿಶಾಮಕ ಠಾಣೆಯಲ್ಲಿ ದೊಡ್ಡ ವಾಹನದ ಕೊರತೆಯಿದೆ. ಈ ಹಿಂದೆ ಎರಡು ದೊಡ್ಡ ವಾಹನಗಳನ್ನು ನೀಡಲಾಗಿತ್ತು. ಇದರಲ್ಲಿ ಒಂದನ್ನು 30 ವರ್ಷ ಮೀರಿರುವ ಕಾರಣಕ್ಕೆ ಗುಜರಿಗೆ ಹಾಕಲಾಗಿದೆ. ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ನಿರ್ದೇಶನದಂತೆ 15 ವರ್ಷ ಮೀರಿದ ಇನ್ನೊಂದು ವಾಹನವನ್ನು ಗುಜರಿಗೆ ಹಾಕಲಾಗಿದೆ. ಸದ್ಯ 500 ಲೀಟರ್ ಸಾಮರ್ಥ್ಯದ ಚಿಕ್ಕ ವಾಹನ ನೀಡಲಾಗಿದೆ. ತೀವ್ರ ತರಹದ ಅಗ್ನಿ ಅನಾಹುತ ಸಂಭವಿಸಿದರೆ ಈ ವಾಹನದಲ್ಲಿ ನೀರನ್ನು ಬಳಸಿ ಬೆಂಕಿ ನಂದಿಸಲು ಸಾಧ್ಯವಾಗುವುದಿಲ್ಲ. ದೊಡ್ಡ ವಾಹನ ಕೊಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
ಅಗ್ನಿಶಾಮಕ ಠಾಣೆ ಉದ್ಘಾಟನೆಗೆ ಗೃಹ ಸಚಿವ ಜಿ.ಪರಮೇಶ್ವರ್ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರ ಬಳಿ ಸಮಯ ಕೇಳಲಾಗುವುದು. ಒಂದು ವೇಳೆ ಅವರು ಬರಲು ಸಾಧ್ಯವಾಗದಿದ್ದರೆ ಅನುಮತಿ ಪಡೆದು ಶೀಘ್ರದಲ್ಲೇ ಲೋಕಾರ್ಪಣೆ ಮಾಡಲಾಗುವುದು.-ಟಿ.ಡಿ.ರಾಜೇಗೌಡ, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.