ADVERTISEMENT

ಚಿಕ್ಕಮಗಳೂರು | ಮಳೆ: ನೆಲಕಚ್ಚಿದ ಹೂವಿನ ವ್ಯಾಪಾರ

ಸೇವಂತಿಗೆ ದರ ಕಡಿಮೆ: ಮಾರುಕಟ್ಟೆಗೆ ಬಾರದ ಕನಕಾಂಬರ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 15:22 IST
Last Updated 17 ಅಕ್ಟೋಬರ್ 2024, 15:22 IST
ಚಿಕ್ಕಮಗಳೂರಿನ ಬಸವನಹಳ್ಳಿ ರಸ್ತೆಯ ಹೂವಿನ ಅಂಗಡಿ
ಚಿಕ್ಕಮಗಳೂರಿನ ಬಸವನಹಳ್ಳಿ ರಸ್ತೆಯ ಹೂವಿನ ಅಂಗಡಿ   

ಚಿಕ್ಕಮಗಳೂರು: ಆಯುಧ ಪೂಜೆ ಮತ್ತು ವಿಜಯದಶಮಿ ಮುಗಿದ ಕೂಡಲೇ ಮಳೆ ಆರಂಭವಾಗಿದ್ದು, ಹೂವಿನ ವ್ಯಾಪಾರ ಸಂಪೂರ್ಣ ನೆಲಕಚ್ಚಿದೆ. ಮಳೆಯ ನಡುವೆ ಹೂವಿಗೆ ಬೇಡಿಕೆ ಕಡಿಮೆಯಾಗಿದ್ದು, ಬೆಂಗಳೂರಿನಿಂದ ಪೂರೈಕೆ ಕೂಡ ನಿಂತೇ ಹೋಗಿದೆ.

ನವರಾತ್ರಿ ವೇಳೆ ಹೂವಿನ ದರ ಗಗನಮುಖಿಯಾಗಿತ್ತು. ಸಾಮಾನ್ಯವಾಗಿ ₹50 ದರದಲ್ಲಿ ಮಾರಾಟವಾಗುವ ಸುಗಂಧರಾಜ ಹೂವಿನ ಹಾರ, ಹಬ್ಬದ ವೇಳೆ ₹400 ತನಕ ಏರಿಕೆಯಾಗಿತ್ತು. ಈಗ ಮತ್ತೆ ಸಾಮಾನ್ಯ ದರಕ್ಕೆ ಇಳಿಕೆಯಾಗಿದೆ. ನಾಲ್ಕು ದಿನಗಳಿಂದ ಮಳೆ ಸುರಿಯುತ್ತಿರುವುದರಿಂದ ಹೂವು ಕೇಳುವವರೇ ಇಲ್ಲವಾಗಿದ್ದಾರೆ.

ಮಳೆ ಕಾರಣಕ್ಕೆ ಬೆಂಗಳೂರಿನಿಂದ ಸೇವಂತಿಗೆ ಹೂವು ತರಿಸುವುದನ್ನೇ ಸ್ಥಳೀಯ ವ್ಯಾಪಾರಿಗಳು ನಿಲ್ಲಿಸಿದ್ದಾರೆ. ತಲಾ 30ರಿಂದ 40 ಕೆ.ಜಿ ತೂಕದ ಬ್ಯಾಗ್‌ಗಳಲ್ಲಿ ಪ್ರತಿದಿನ ತಮ್ಮ ಬೇಡಿಕೆಗೆ ತಕ್ಕಂತೆ ತರಿಸುತ್ತಿದ್ದ ವ್ಯಾಪಾರಿಗಳು ನಾಲ್ಕು ದಿನದಿಂದ ನಿಲ್ಲಿಸಿದ್ದಾರೆ. ಬೆಂಗಳೂರು ಸುತ್ತಮುತ್ತ ಭಾರಿ ಮಳೆ ಸುರಿಯುತ್ತಿದ್ದು, ಅದಲ್ಲಿಂದ ಕಳುಹಿಸುವ ಹೂವು ಚಿಕ್ಕಮಗಳೂರು ಸೇರುವಷ್ಟರಲ್ಲಿ ಪೂರ್ತಿ ಹಾಳಾಗಿರುತ್ತದೆ. ಆದ್ದರಿಂದ ಹೂವು ತರಿಸುತ್ತಿಲ್ಲ ಎಂದು ವ್ಯಾಪಾರಿಗಳು ಹೇಳುತ್ತಾರೆ.

ADVERTISEMENT

ತುಮಕೂರಿನಿಂದ ಕಡೂರಿಗೆ ಬರುವ ಸೇವಂತಿಗೆ ಹೂವುನ್ನು ಚಿಕ್ಕಮಗಳೂರಿಗೆ ತರಿಸಿ ಮಾರಾಟ ಮಾಡುತ್ತಿದ್ದಾರೆ. ಪ್ರತಿ ಮಾರಿಗೆ ₹60–₹80 ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ದುಂಡು ಮಲ್ಲಿಗೆ ಅಥವಾ ಮೈಸೂರು ಮಲ್ಲಿಗೆ ಹೂವಿನ ದರ ಮಾತ್ರ ಕಡಿಮೆಯಾಗಿಲ್ಲ. ₹80–₹100 ದರದಲ್ಲಿ ಮಾರಾಟವಾಗುತ್ತಿದೆ. 

ಸಭೆ– ಸಮಾರಂಭ, ಪೂಜೆ–ಪುನಸ್ಕಾರಗಳು ಈಗ ಕಡಿಮೆಯಾಗಿವೆ. ಇನ್ನೂ ಮಳೆ ಕಾರಣಕ್ಕೆ ಕನಕಾಂಬರ ಹೂವು ಕೂಡ ಮಾರುಕಟ್ಟೆಗೆ ಬರುತ್ತಿಲ್ಲ. ಬೇಡಿಕೆ ಕೂಡ ಇಲ್ಲದಿರುವುದರಿಂದ ತರಿಸುವ ಗೋಜಿಗೆ ಹೋಗುತ್ತಿಲ್ಲ. ಕಾರ್ತಿಕ ಮಾಸ ಆರಂಭವಾದರೆ ಪೂಜೆ ಮತ್ತು ಸಮಾರಂಭಗಳು ಹೆಚ್ಚಾಗಲಿವೆ. ಆಗ ಮತ್ತೆ ಹೂವಿಗೆ ಬೇಡಿಕೆ ಬರಲಿದೆ ಎಂದು ಹೂವಿನ ವ್ಯಾಪಾರಿ ರವಿ ಹೇಳಿದರು.

ಚಂಡುಹೂವು ಕೇಳೋರಿಲ್ಲ

ಚಂಡುಹೂವು ಕೇಳುವವರೇ ಇಲ್ಲವಾಗಿದ್ದು ಕೆ.ಜಿಗೆ ₹20 ದರ ಎಂದರೂ ವ್ಯಾಪಾರವಾಗುತ್ತಿಲ್ಲ. ವಿಜಯದಶಮಿ ಹಬ್ಬದ ವೇಳೆ ಕೆ.ಜಿಗೆ ₹100 ತನಕ ಇದ್ದ ಬಿಡಿ ಚಂಡುಹೂವಿನ ದರ ಈಗ ಕಡಿಮೆಯಾಗಿದೆ. ಈ ಹೂವು ಬೆಳೆದಿರುವ ರೈತರ ಸ್ಥಿತಿ‌ ಹೇಳತೀರದಾಗಿದೆ. ಮಳೆ ಸಂಪೂರ್ಣ ಸ್ಥಗಿತಗೊಂಡರೆ ದೀಪಾವಳಿ ಸಂದರ್ಭದಲ್ಲಿ ಕೊಂಚ ಬೆಲೆ ಸಿಗಬಹುದು ಎಂದು ವ್ಯಾಪಾರಿಗಳು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.