ಚಿಕ್ಕಮಗಳೂರು: ರಾಜ್ಯದಲ್ಲಿ ಈ ವರ್ಷ ಹೊಸದಾಗಿ 5 ಸಾವಿರ ಕಿರು ಆಹಾರ ಸಂಸ್ಕರಣಾ ಘಟಕಗಳನ್ನು ಕಾರ್ಯರೂಪಕ್ಕೆ ತರುವ ಗುರಿ ಹೊಂದಲಾಗಿದೆ. ಇದು ನಿರುದ್ಯೋಗಿಗಳಿಗೆ ನೆರವಾಗಲಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ನಜೀರ್ ಸಾಬ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ, ಕೆಫೆಟ್ ಆಶ್ರಯದಲ್ಲಿ ಏರ್ಪಡಿಸಿದ್ದ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ(ಪಿಎಂಎಫ್‌ಎಂಇ) ಅರಿವು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಈ ಯೋಜನೆ 2020-21ರಲ್ಲಿ ಜಾರಿಯಾಗಿದ್ದು, 5 ವರ್ಷಗಳಲ್ಲಿ ಆರು ಸಾವಿರ ಘಟಕಗಳು ಕಾರ್ಯರೂಪಕ್ಕೆ ಬಂದಿದೆ. ಈ ವರ್ಷವೇ 5 ಸಾವಿರ ಘಟಕಗಳನ್ನು ತೆರೆಯಲು ಹೊರಟಿರುವುದು ರಾಜ್ಯ ಸರ್ಕಾರ ಸಾಧನೆ ಎಂದರು.
ಕೆಫೆಟ್ ಸಂಸ್ಥೆ ಯುವಕರನ್ನು ಉದ್ಯಮಿಗಳನ್ನಾಗಿ ಮಾಡಲು ಹೊರಟಿದೆ. ಪಿಎಂಎಫ್‌ಎಂಇ ಯೋಜನೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದ ಯೋಜನೆಯಾಗಿದೆ. ದೇಶದೆಲ್ಲೆಡೆ ಕೇಂದ್ರ ಸರ್ಕಾರ ಶೇ 60ರಷ್ಟು ಮತ್ತು ರಾಜ್ಯ ಸರ್ಕಾರ ಶೇ 40ರಷ್ಟು ಅನುದಾನ ಭರಿಸುತ್ತಿದೆ. ಆದರೆ, ಕರ್ನಾಟಕದಲ್ಲಿ ಮಾತ್ರ ಶೇ 60ರಷ್ಟು ಅನುದಾನವನ್ನು ರಾಜ್ಯ ಸರ್ಕಾರ ಭರಿಸಿದರೆ, ಕೇಂದ್ರ ಸರ್ಕಾರ ಶೇ 40ರಷ್ಟು ಭರಿಸುತ್ತಿದೆ ಎಂದರು.
ಪಿಎಂಎಫ್‌ಎಂಇ ಯೋಜನೆಯಡಿ ಬ್ಯಾಂಕ್‌ಗಳು ಆರ್ಥಿಕ ನೆರವು ನೀಡಲು ಫಲಾನುಭವಿಗಳ ಸಿಬಿಲ್ ಸ್ಕೋರ್, ಭದ್ರತೆ ಕೇಳುವಂತಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ಗಮನ ಹರಿಸಬೇಕು. ಬ್ಯಾಂಕ್ ಅಧಿಕಾರಿಗಳ ಸಭೆ ನಡೆಸಿ ಸೂಚನೆ ನೀಡಬೇಕು ಎಂದು ತಿಳಿಸಿದರು.
ಕಬ್ಬು ಕಟಾವು ಯಂತ್ರ ಖರೀದಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ₹50 ಲಕ್ಷ ಸಹಾಯಧನ, ಉಳಿದವರಿಗೆ ₹40 ಲಕ್ಷ ಸಹಾಯಧನ ನೀಡಲಾಗುತ್ತಿದೆ. 344 ಯಂತ್ರಗಳ ಖರೀದಿಗೆ ಹಣ ನೀಡಲಾಗಿದೆ. ಕೃಷಿ ಇಲಾಖೆಯಿಂದ ₹1 ಸಾವಿರ ಕೋಟಿ ಮೊತ್ತದ ಸೌಲಭ್ಯ ನೀಡಲಾಗಿದೆ ಎಂದು ತಿಳಿಸಿದರು.
ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ‘ಕೃಷಿ ನಂಬಿ ಜೀವನ ನಡೆಸುವುದು ಸಾಧ್ಯವಿಲ್ಲ, ಹವಾಮಾನ ವೈಪರೀತ್ಯ ಸೇರಿ ಇತರೆ ಕಾರಣಗಳಿಂದ ರೈತರು ಬೇಸತ್ತಿದ್ದಾರೆ. ಬೆಳೆಗಳಿಗೆ ಉತ್ತಮ ಮಾರುಕಟ್ಟೆ ಮತ್ತು ಮೌಲ್ಯವರ್ಧನೆ ದೊರೆತರೆ ಕೃಷಿ ಕ್ಷೇತ್ರದಲ್ಲಿ ಯಶಸ್ವಿಯಾಗಲು ಸಾಧ್ಯವಿದೆ’ ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ, ‘ಕೃಷಿ ಲಾಭದಾಯಕ ಎಂಬುದನ್ನು ಮುಂದಿನ ಪೀಳಿಗೆಗೆ ತೋರಿಸಿಕೊಡಬೇಕು. ಕೃಷಿ ಮರೆತರೆ ದೇಶ ಉಳಿಯುವುದಿಲ್ಲ. ಸರ್ಕಾರದ ಈ ಯೋಜನೆಯನ್ನು ಯುವ ಜನ ಬಳಕೆ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.
ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ‘ರೈತರಿಗೆ ಪಕ್ಷ ಮತ್ತು ಜಾತಿಯಿಲ್ಲ. ರೈತರು ಬೆಳೆದ ಬೆಳೆ, ಮಕ್ಕಳಿಗೆ ಶಿಕ್ಷಣ, ಆರೋಗ್ಯ, ನೀರಾವರಿ ಕಲ್ಪಿಸುವುದು ಜನಪ್ರತಿನಿಧಿಗಳ ಜವಾಬ್ದಾರಿ. ಪಿಎಂಎಫ್‌ಎಂಇ ಯೋಜನೆಯಡಿ ರಾಜ್ಯ ಸರ್ಕಾರ ₹9 ಲಕ್ಷ, ಕೇಂದ್ರ ಸರ್ಕಾರ ₹6 ಲಕ್ಷ ಸೇರಿ ಒಟ್ಟು ₹15 ಲಕ್ಷ ನೀಡುತ್ತಿದೆ’ ಎಂದರು.
ಕೆಫೆಟ್ ನಿಗಮದ ಅಧ್ಯಕ್ಷ ಬಿ.ಎಚ್.ಹರೀಶ್, ಭದ್ರಾ ಕಾಡಾ ನಿಗಮದ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಕಾರದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಸಿ. ಶಿವಾನಂದಸ್ವಾಮಿ, ನಗರಸಭೆ ಅಧ್ಯಕ್ಷೆ ಬಿ.ಶೀಲಾ ದಿನೇಶ್, ಉಪಾಧ್ಯಕ್ಷೆ ಲಲಿತಾ, ಕೃಷಿಕ ಸಮಾಜದ ಅಧ್ಯಕ್ಷ ಡಿ.ಎಲ್.ಅಶೋಕ, ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್, ಜಿ.ಪಂ. ಸಿಇಒ ಎಚ್.ಎಸ್.ಕೀರ್ತನಾ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸುಜಾತಾ, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಪೂರ್ಣಿಮಾ ಇದ್ದರು.
‘ಸರ್ಕಾರದ ಸಾಧನೆ ವಿಪಕ್ಷ ಸಹಿಸುತ್ತಿಲ್ಲ’
ಗ್ಯಾರಂಟಿ ಯೋಜನೆ ಜಾರಿಯಾದ ಬಳಿಕ ಈವರೆಗೆ ₹90 ಸಾವಿರ ಕೋಟಿಯನ್ನು ಜನರಿಗೆ ತಲುಪಿಸಲಾಗಿದೆ. ಆದರೂ ಅಭಿವೃದ್ಧಿ ಯೋಜನೆ ಇತರ ಸಾಮಾಜಿಕ ಭದ್ರತಾ ಯೋಜನೆಗಳನ್ನು ನಿಲ್ಲಿಸಿಲ್ಲ ಎಂದು ಎನ್.ಚಲುವರಾಯಸ್ವಾಮಿ ಹೇಳಿದರು. ಬಿಜೆಪಿಗೆ ಸರ್ಕಾರದ ಸಾಧನೆ ಸಹಿಸಲು ಆಗುತ್ತಿಲ್ಲ. ಸರ್ಕಾರದ ನ್ಯೂನತೆ ಹುಡುಕಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ರಾಜ್ಯ ಸರ್ಕಾರ ಜನರ ಪರ ಕೆಲಸ ಮಾಡುತ್ತಿದೆ. ಯೋಜನೆಗಳ ದುರುಪಯೋಗಕ್ಕೆ ಅವಕಾಶ ನೀಡಬಾರದು ತಪ್ಪಿದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.