ಚಿಕ್ಕಮಗಳೂರು: ಬಗರ್ ಹುಕುಂ ಸಾಗುವಳಿ, ಪೋಡಿ, ನಿವೇಶನ ಹಕ್ಕುಪತ್ರ ಕಂದಾಯ ಇಲಾಖೆ ಸಿದ್ಧವಿದ್ದರೂ ಅರಣ್ಯ ಇಲಾಖೆ ಅಭಿಪ್ರಾಯ ಪಡೆಯುವುದು ಸಾಮಾನ್ಯ ಜನರಿಗೆ ದೊಡ್ಡ ಕೆಲಸವಾಗಿದೆ. ಚಿಕ್ಕಮಗಳೂರು ತಾಲ್ಲೂಕೊಂದರಲ್ಲೇ 516 ಪೋಡಿ ಅರ್ಜಿಗಳು, 1,048 ನಿವೇಶನ ಹಕ್ಕುಪತ್ರಗಳು ಅರಣ್ಯ ಇಲಾಖೆಗೆ ಎನ್‌ಒಸಿಗೆ ಕಾದಿವೆ.
ಪೋಡಿ ಮುಕ್ತ ಯೋಜನೆಯಡಿ ಪೋಡಿಯಾಗದ ಜಮೀನುಗಳನ್ನು ಸರ್ವೆ ನಂಬರ್‌ಗಳನ್ನು ಗುರುತಿಸುವ ಕೆಲಸವನ್ನು ಕಂದಾಯ ಇಲಾಖೆ ಮಾಡುತ್ತಿದೆ. ಪೋಡಿಯಾಗದ ಒಂದು ಸರ್ವೆ ನಂಬರ್‌ನಲ್ಲಿ ಕನಿಷ್ಠ 5ರಿಂದ ಗರಿಷ್ಠ 100ರ ತನಕ ಭೂಮಾಲೀಕರಿದ್ದಾರೆ. ಪೋಡಿ ಮಾಡಿ ಎಲ್ಲಾ ರೈತರ ಜಮೀನಿಗೆ ಪ್ರತ್ಯೇಕ ಸರ್ವೆ ನಂಬರ್ ನೀಡಲು ಮುಂದಾಗಿದೆ.
ಸಾಗುವಳಿ ಚೀಟಿ, ಆಕಾರ ಬಂದ್, ನಕ್ಷೆ ಸಹಿತ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿರುವ ಕಂದಾಯ ಇಲಾಖೆ ಅಧಿಕಾರಿಗಳು ಪೋಡಿ ಮಾಡುವ ಮುನ್ನ ಅರಣ್ಯ ಇಲಾಖೆಯ ಅಭಿಪ್ರಾಯ ಪಡೆಯುತ್ತಿದ್ದಾರೆ.
ಅರಣ್ಯ ಇಲಾಖೆಯ ಪ್ರಸ್ತಾವಿತ ಅರಣ್ಯ(ಸೆಕ್ಷನ್–4), ಪರಿಭಾವಿತ ಅರಣ್ಯದಲ್ಲಿ(ಡೀಮ್ಡ್ ಅರಣ್ಯ) ಸಾಗುವಳಿ ಮಾಡಿದ್ದರೆ ಪೋಡಿ ಮಾಡಿಕೊಡಲು ಅವಕಾಶ ಇರುವುದಿಲ್ಲ. ಅರಣ್ಯ ಜಾಗ ಪೋಡಿ ಮಾಡಿದರೆ ಮುಂದಿನ ದಿನಗಳಲ್ಲಿ ಅಧಿಕಾರಿಗಳು ಅರಣ್ಯ ಕಾಯ್ದೆಯಡಿ ಮೊಕದ್ದಮೆ ಎದುರಿಸಬೇಕಾಗುತ್ತದೆ. ಆದ್ದರಿಂದ ಎಲ್ಲಾ ಪೋಡಿ ಕಡತಗಳನ್ನೂ ಅರಣ್ಯ ಇಲಾಖೆಗೆ ಕಳುಹಿಸಿ ನಿರಾಕ್ಷೇಪಣಾ ಪತ್ರ(ಎನ್‌ಒಸಿ) ಪಡೆಯುತ್ತಿದ್ದಾರೆ.
ಚಿಕ್ಕಮಗಳೂರು ತಾಲ್ಲೂಕಿನಲ್ಲಿ ಹೀಗೆ ಪೋಡಿಗೆ ಸಿದ್ಧವಾಗಿರುವ 516 ಸರ್ವೆ ನಂಬರಿನ ದಾಖಲೆಗಳನ್ನು ಅರಣ್ಯ ಇಲಾಖೆಗೆ ಕಂದಾಯ ಇಲಾಖೆ ಅಧಿಕಾರಿಗಳು ಸಲ್ಲಿಸಿದ್ದಾರೆ. 516 ಸರ್ವೆ ನಂಬರ್ ಎಂದರೆ ಕನಿಷ್ಠ 3 ಸಾವಿರ ರೈತರ ಜಮೀನಿದೆ. ಈ ಪೈಕಿ ಒಂದೇ ಒಂದು ಸರ್ವೆ ನಂಬರಿನ ಕಡತವೂ ವಾಪಸ್ ಬಂದಿಲ್ಲ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಇದೇ ರೀತಿ ಬಗರ್ ಹುಕುಂ ಅರ್ಜಿಗಳಲ್ಲಿ ಅರ್ಹ 29 ಅರ್ಜಿದಾರರಿಗೆ ಜಮೀನು ಮಂಜೂರು ಮಾಡುವ ಮುನ್ನ ಅರಣ್ಯ ಇಲಾಖೆ ಅಭಿಪ್ರಾಯ ಕೋರಲಾಗಿದೆ. ಈ ಪೈಕಿ 15 ಅರ್ಜಿಗಳಿಗೆ ಸಂಬಂಧಿಸಿದಂತೆ ಜಂಟಿ ಸರ್ವೆ ಆಗಬೇಕಿದ್ದು, 4 ಅರ್ಜಿಗಳನ್ನು ತಿರಸ್ಕಾರ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಜಂಟಿ ಸರ್ವೆ ಯಾವಾಗ ನಡೆಯಲಿದೆ, ಭೂಮಂಜೂರಾತಿ ಯಾವಾಗ ಎಂಬುದು ಯಾರಿಗೂ ಗೊತ್ತಿಲ್ಲ ಎಂಬಂತಾಗಿದೆ ಎಂದು ರೈತರು ಬೇಸರ ವ್ಯಕ್ತಪಡಿಸುತ್ತಾರೆ.
ಕಾನೂನಿನಲ್ಲಿ ಇರುವ ಅವಕಾಶ ಬಳಸಿಕೊಂಡು ಜನರ ಬದುಕಿಗೆ ರಕ್ಷಣೆ ಕೊಡುವ ಕೆಲಸ ಪ್ರಮುಖವಾದದು. ಅಧಿಕಾರಿಗಳು ಈ ಕೆಲಸಗಳನ್ನು ಮೊದಲ ಆದ್ಯತೆಯಾಗಿ ಮಾಡಬೇಕು.– ಎಸ್.ವಿಜಯಕುಮಾರ್, ಜಿಲ್ಲಾ ನಾಗರಿಕ ಮತ್ತು ರೈತ ಹೋರಾಟ ಸಮಿತಿ ಅಧ್ಯಕ್ಷ
ಅನುಮತಿಗೆ ಕಾದಿರುವ 1048 ನಿವೇಶನ
ಹಕ್ಕುಪತ್ರ ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡು ನಮೂನೆ– 94(ಸಿ) ಅಡಿ ಅರ್ಜಿ ಸಲ್ಲಿಸಿ ನಿವೇಶನ ಕೋರಿರುವ ಅರ್ಜಿಗಳ ಪೈಕಿ ಚಿಕ್ಕಮಗಳೂರು ತಾಲ್ಲೂಕಿನಲ್ಲಿ 1048 ಜನರಿಗೆ ಹಕ್ಕುಪತ್ರಗಳು ಸಿದ್ಧ ಇವೆ. ಆದರೆ ಅರಣ್ಯ ಇಲಾಖೆಯ ಅನುಮತಿಗೆ ಕಾದಿವೆ. ಜಾಗರ ಮತ್ತು ವಸ್ತಾರೆ ಹೋಬಳಿಯ ಮಲೆನಾಡು ಭಾಗದಲ್ಲಿ ಹೆಚ್ಚು ಜನ ನಿವೇಶನ ಹಕ್ಕುಪತ್ರಕ್ಕೆ ಕಾದಿದ್ದಾರೆ.
ರಿಭಾವಿತ ಅರಣ್ಯ ಅಥವಾ ಸೆಕ್ಷನ್ –4 ಜಾರಿಗೊಳಿಸಿರುವ ಜಾಗವಾದರೆ ಹಕ್ಕುಪತ್ರ ನೀಡಲು ಅವಕಾಶ ಇಲ್ಲ. ಆದ್ದರಿಂದ ಅರಣ್ಯ ಇಲಾಖೆಯಿಂದ ಅಭಿಪ್ರಾಯ ಕೋರಲಾಗಿದೆ ಎಂದು ಅಧಿಕಾರಿಯೊಬ್ಬರು ವಿವರಿಸಿದರು. ‘ನಿವೇಶನಗಳಿಗೆ ಸಂಬಂಧಿಸಿದ ಅಕ್ಷಾಂಶ ಮತ್ತು ರೇಖಾಂಶ ಸಹಿತ ಎಲ್ಲಾ ಮಾಹಿತಿ ಸಲ್ಲಿಸಲಾಗಿದೆ. ಮೇಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ ಎಂದು ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸುತ್ತಿದ್ದಾರೆ. ಹಕ್ಕುಪತ್ರ ಕೋರಿ ಜನ ನಮ್ಮ ಕಚೇರಿ ಎಡತಾಕುತ್ತಿದ್ದಾರೆ’ ಎಂದು ಹೇಳಿದರು.
6300 ಸರ್ವೆ ನಂಬರ್ ಸ್ವಯಂ ಪೋಡಿ
ಅನೇಕ ವರ್ಷಗಳಿಂದ ದರಖಾಸ್ತು ಜಮೀನು ಪೋಡಿಗೆ ರೈತರು ಕಾದಿದ್ದರು. ಸರ್ಕಾರದಿಂದಲೇ ಈ ಪ್ರಕ್ರಿಯೆ ನಡೆಸುವ ಆಂದೋಲನ ಆರಂಭವಾಗಿದೆ. ಜಿಲ್ಲೆಯಲ್ಲಿ ಪೋಡಿಯಾಗದ 6300ಕ್ಕೂ ಹೆಚ್ಚು ಸರ್ವೆ ನಂಬರ್‌ಗಳನ್ನು ಜಿಲ್ಲಾಡಳಿತ ಗುರುತಿಸಿದೆ. 50–60 ವರ್ಷಗಳ ಹಿಂದೆಯೇ ದರಖಾಸ್ತು ಜಮೀನು ಮಂಜೂರಾಗಿದ್ದರೂ ಪೋಡಿಯಾಗಿಲ್ಲ.
ಈಗ ಕಂದಾಯ ಇಲಾಖೆ ಸಿಬ್ಬಂದಿಯೇ ಸ್ವಯಂ ಈ ಕಾರ್ಯ ಕೈಗೆತ್ತಿಕೊಳ್ಳುತ್ತಿದ್ದಾರೆ. ಅರಣ್ಯ ಇಲಾಖೆ ಸಹಕಾರ ನೀಡಿದರೆ ಆದಷ್ಟು ಬೇಗ ಈ ಕಾರ್ಯ ಪೂರ್ಣಗವಾಗಲಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.