ಚಿಕ್ಕಮಗಳೂರು: ಕೃಷಿ ಭೂಮಿ, ಜನವಸತಿ ಪ್ರದೇಶವನ್ನು ಅರಣ್ಯ ಅಥವಾ ಪರಿಭಾವಿತ ಅರಣ್ಯ ವ್ಯಾಪ್ತಿಗೆ ಸೇರಿಸದಂತೆ ಆಗ್ರಹಿಸಿ ನಾಗರಿಕರ ಮತ್ತು ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ಜನ ಜಾಗೃತಿ ಜಾಥಾ ಸೋಮವಾರ ಶಿರವಾಸೆ ಗ್ರಾಮದಲ್ಲಿ ನಡೆಯಿತು.
ಶಿರವಾಸೆ, ಗಾಳಿಗುಡ್ಡೆ, ಕಳವಾಸೆ, ಕೊಂಕಳಮನೆ, ಸಿದ್ದಾಪುರ ಗ್ರಾಮ ವ್ಯಾಪ್ತಿಯ ನೂರಾರು ರೈತರು ಸಂತೆ ಮೈದಾನದಿಂದ ಗ್ರಾಮ ಪಂಚಾಯಿತಿ ತನಕ ಜಾಥಾ ನಡೆಸಿದರು.
ಬಳಿಕ ನಡೆದ ಸಮಾವೇಶದಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಎಸ್.ವಿಜಯಕುಮಾರ್, ‘ಗ್ರಾಮಸ್ಥರು ಬೀದಿಗಿಳಿದು ಹೋರಾಟ ರೂಪಿಸಿದರೆ ಮಾತ್ರ ಅಸ್ಥಿತ್ವ ಉಳಿದುಕೊಳ್ಳಲಿದೆ’ ಎಂದರು.
ಅರಣ್ಯ ಮತ್ತು ಕಂದಾಯ ಇಲಾಖೆಯಿಂದ ರೈತ ಅನುಭವಿಸುತ್ತಿರುವ ತೊಂದರೆ ಸ್ವಾತಂತ್ರ್ಯ ಪೂರ್ವದಿಂದ ನಿರಂತರವಾಗಿವೆ. ಈ ಬಗ್ಗೆ ಯಾವುದೇ ಸರ್ಕಾರ ತಲೆಕೆಡಿಸಿಕೊಂಡಿಲ್ಲ. ಪರಸ್ಪರ ಕೆಸರೆರಚಾಟದಲ್ಲಿ ತೊಡಗಿಕೊಂಡಿವೆ ಎಂದು ದೂರಿದರು.
ಅರಣ್ಯ ಪ್ರದೇಶದಲ್ಲಿ ಪರಿಸರಕ್ಕೆ ಹಾನಿಯಾಗದಂತೆ ಅಲ್ಪ ಪ್ರಮಾಣದ ಒತ್ತುವರಿ ಮಾಡಿ ಜೀವನ ಕಟ್ಟಿ ಕೊಂಡಿರುವ ನಿವಾಸಿಗಳನ್ನು ಸ್ಥಳಾಂತರಿಸಲು ನಕಲಿ ಪರಿಸರವಾದಿಗಳು ಪ್ರಯತ್ನಿಸುತ್ತಿದ್ದಾರೆ. ಪರಿಭಾವಿತ ಅರಣ್ಯ, ಹುಲಿ ಸಂರಕ್ಷಿತ ಯೋಜನೆ ಹೆಸರಿನಲ್ಲಿ ಮುಳ್ಳಯ್ಯನಗಿರಿ ತಪ್ಪಲಿನ ಪ್ರದೇಶದ ಜನರ ಬದುಕು ಕಸಿದುಕೊಳ್ಳಲು ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಪರಿಭಾವಿತ ಅರಣ್ಯದಲ್ಲಿ ಸಾವಿರಾರು ಕುಟುಂಬಗಳಿದ್ದು, ಸೂಕ್ತ ರೀತಿಯಲ್ಲಿ ಸರ್ವೆ ನಡೆಸಿ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಆದರೂ ಜಿಲ್ಲಾಡಳಿತ ಮೌನ ವಹಿಸಿದೆ. ಸಬೂಬು ಹೇಳಿಕೊಂಡು ಕಾಲಹರಣ ಮಾಡುತ್ತಿದೆ ಎಂದರು.
ನಮೂನೆ 53, 57, 94 –ಸಿ ಅಡಿಯಲ್ಲಿ ಸಲ್ಲಿಸಿರುವ ಅರ್ಜಿಗಳು ವಿಲೇವಾರಿಯಾಗುತ್ತಿಲ್ಲ. ಇ-ಖಾತೆ ಮತ್ತು ಪೋಡಿಯಾಗುತ್ತಿಲ್ಲ. ನಿವೇಶನ ರಹಿತರಿಗೆ ನಿವೇಶನಗಳು ಮಂಜೂರಾಗಿಲ್ಲ. ವಸತಿ ರಹಿತರಿಗೆ ನಿವೇಶನ ಇಲ್ಲವಾಗಿದೆ ಎಂದು ಹೇಳಿದರು.
ಹೋರಾಟಗಾರ ಜಾರ್ಜ್ ಆಸ್ಟಿನ್ ಮಾತನಾಡಿ, ‘ಮನೆ ಮತ್ತು ಕೃಷಿ ಭೂಮಿ ಉಳಿಸಿಕೊಳ್ಳಲು ನಿವಾಸಿಗಳು ಶತಮಾನದಿಂದಲೇ ಹತ್ತಾರು ಹೋರಾಟ ನಡೆಸುತ್ತಿದ್ದಾರೆ. ಅರಣ್ಯ ಇಲಾಖೆ ಕಿರುಕುಳದಿಂದ ಜನರ ನೆಮ್ಮದಿಯೇ ಹಾಳಾಗಿದೆ’ ಎಂದರು.
ಅರಣ್ಯದಲ್ಲಿ ಬದುಕು ಕಟ್ಟಿಕೊಂಡಿರುವ ಜನ ಕಾಡಿನ ವಿರೋಧಿಗಳಲ್ಲ. ಪರಿಸರವನ್ನು ರಕ್ಷಿಸಲು ಕಾಫಿ ಸಸಿಗಳನ್ನು ಪೋಷಿಸಲಾಗುತ್ತಿದೆ ಎಂದು ಹೇಳಿದರು.
ಶಿರವಾಸೆ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿ.ಆರ್.ರಘುನಾಥ್ ಮಾತನಾಡಿ, ‘ಪರಿಭಾವಿತ ಅರಣ್ಯ ಸಮಸ್ಯೆ ಕುರಿತು ವಿಶೇಷ ಗ್ರಾಮಸಭೆ ಆಯೋಜಿಸಲಾಗಿದೆ. ಸಭೆಯಲ್ಲಿ ನಿವಾಸಿಗಳು ತಮ್ಮ ಅನಿಸಿಕೆ ಹಾಗೂ ಮೂಲ ದಾಖಲೆ ಸಮೇತ ಸಲ್ಲಿಸಿದರೆ ಎಲ್ಲವವನ್ನೂ ಒಟ್ಟುಗೂಡಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ರವಾನಿಸಲಾಗುವುದು’ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಫಿಬೆಳೆಗಾರ ಕೆ.ಆರ್.ಚಂದ್ರೇಗೌಡ ವಹಿಸಿದ್ದರು. ಹೋರಾಟ ಸಮಿತಿ ಪ್ರಧಾನ ಸಂಚಾಲಕ ಕೆ.ಕೆ.ರಘು, ಸಹಕಾರ ಸಂಘದ ಅಧ್ಯಕ್ಷ ಎಚ್.ಎಸ್.ಮಲ್ಲೇಶ್, ವಿವೇಕಾನಂದ ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ ಎಸ್.ಎಂ.ದೇವಣ್ಣಗೌಡ, ಶಿರವಾಸೆ ಕಸಾಪ ಅಧ್ಯಕ್ಷ ವಾಸು ಪೂಜಾರಿ, ಮುಖಂಡರಾದ ಪ್ರಸನ್ನ, ವೆಂಕಟೇಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.