ADVERTISEMENT

ಚಿಕ್ಕಮಗಳೂರು | ಗಣೇಶ ಸಂಭ್ರಮ: ಭಿನ್ನ, ವಿಭಿನ್ನ

ಜಿಲ್ಲೆಯ ವಿವಿಧೆಡೆ ವಿಶಿಷ್ಟ ಪರಿಕಲ್ಪನೆಯಲ್ಲಿ ಗಣಪರಿ ಹಬ್ಬ ಆಚರಣೆ, ವೈವಿಧ್ಯಯ ಮನರಂಜನೆಯ ಕಾರ್ಯಕ್ರಮ ಆಯೋಜನೆ

ವಿಜಯಕುಮಾರ್ ಎಸ್.ಕೆ.
Published 25 ಆಗಸ್ಟ್ 2025, 6:15 IST
Last Updated 25 ಆಗಸ್ಟ್ 2025, 6:15 IST
ಬೀರೂರಿನಲ್ಲಿ ಗಣಪತಿ ಮೂರ್ತಿಗೆ ಅಂತಿಮ ರೂಪ ನೀಡುತ್ತಿರುವ ಮಹಿಳೆ
ಬೀರೂರಿನಲ್ಲಿ ಗಣಪತಿ ಮೂರ್ತಿಗೆ ಅಂತಿಮ ರೂಪ ನೀಡುತ್ತಿರುವ ಮಹಿಳೆ   

ಚಿಕ್ಕಮಗಳೂರು: ಗಣೇಶ ಉತ್ಸವಗಳು ಈಗ ಗಲ್ಲಿ ಗಲ್ಲಿಗಳಲೂ ಕಾಣಿಸುತ್ತಿವೆ. ಊರಿಗೊಂದೇ ಇದ್ದ ಗಣಪತಿ ಪೆಂಡಾಲ್‌ಗಳು ಹಲವು ವರ್ಷಗಳಿಂದ ವೈಭವ ಉಳಿಸಿಕೊಂಡಿವೆ.

1936ರಿಂದ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಗಣೇಶ ಉತ್ಸವ ನಡೆಸಿಕೊಂಡು ಬರಲಾಗಿದೆ. ಅಂದು ಆರಂಭವಾದ ಸಾರ್ವಜನಿಕ ಗಣಪತಿ ಸೇವಾ ಸಮಿತಿ ಈಗ ತನ್ನದೇ ಆದ ಸ್ವಂತ ಕಟ್ಟಡ, ಟ್ರಸ್ಟ್‌ಗಳನ್ನು ಹೊಂದಿದೆ. ಪ್ರತಿವರ್ಷ ಉತ್ಸವವನ್ನು ವೈಭವದಿಂದ ನಡೆಸುತ್ತಿದೆ.

ನಗರದ ಕುಂಬಾರ ಬೀದಿ ಎಂದರೆ ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಮಾತ್ರ ಗಿಜಿಗುಡುತ್ತದೆ. ಇಡೀ ಬೀದಿ ಈಗ ಹಬ್ಬದ ಸಂಭ್ರಮದಲ್ಲಿದೆ. ವಿವಿಧ, ವಿಭಿನ್ನ ರೀತಿಯ ಮೂರ್ತಿಗಳು ಸಿದ್ಧಗೊಂಡಿವೆ. ಇಡೀ ನಗರದ ಹಬ್ಬದ ಸಡಗರದಲ್ಲಿದೆ.

ADVERTISEMENT

ಪೂರಕ ಮಾಹಿತಿ: ಎನ್.ಸೋಮಶೇಖರ್, ಕೆ.ವಿ.ನಾಗರಾಜ್, ರವಿಕುಮಾರ್ ಶೆಟ್ಟಿಹಡ್ಲು, ಕೆ.ನಾಗರಾಜ್, ಸತೀಶ್ ಜೈನ್

ಚಿಕ್ಕಮಗಳೂರಿನಲ್ಲಿ ಗೌರಮ್ಮ ಮೂರ್ತಿಗೆ ಅಂತಿಮ ರೂಪ ನೀಡಿದ ಕಲಾವಿದೆಯರು
ಕೊಪ್ಪದ ಪೌರ ಗಣೇಶೋತ್ಸವ ಸಮಿತಿ 51ನೇ ವರ್ಷದಲ್ಲಿ ಪ್ರತಿಷ್ಠಾಪನೆಗೆ ಸಿದ್ದತೆ ಹಂತದಲ್ಲಿರುವ ಸರ್ಪವೇರಿ ಕುಳಿತ ಗಣೇಶ
ಚಿಕ್ಕಮಗಳೂರಿನ ಕುಂಬಾರ ಬೀದಯಲ್ಲಿ ಗಣಪತಿ ಮೂರ್ತಿಗೆ ಅಂತಿಮ ರೂಪ ನೀಡಿದ ಕಲಾವಿದರು
ನರಸಿಂಹರಾಜಪುರದಲ್ಲಿ ಗಣೇಶ ಮೂರ್ತಿ ತಯಾರಿಕೆ ಅಂತಿಮ ಹಂತದಲ್ಲಿರುವ ಕಲಾವಿದರು
ಬೀರೂರಿನ ಕಲಾವಿದ ಮಲ್ಲಿಕಾರ್ಜುನ ಅರ್ಧನಾರೀಶ್ವರ ಗಣಪತಿಗೆ ಸ್ಪರ್ಶ ನೀಡುತ್ತಿರುವುದು
ಗಣಪತಿ ಉತ್ಸವಕ್ಕೆ ಗ್ರಾಮೀಣ ಭಾಗದಲ್ಲೂ ಕರೆಯೋಲೆ ನೀಡುತ್ತಿರುವ ಸಮಿತಿ ಪದಾಧಿಕಾರಿಗಳು

ಹಳ್ಳಿ–ಹಳ್ಳಿಗಳಲ್ಲಿ ಗಣಪತಿ ಪೆಂಡಾಲ್

ಕಡೂರು: ಗಣೇಶ ಚತುರ್ಥಿ ಸಂಬಂಧ ಕಡೂರು ತಾಲ್ಲೂಕಿನಲ್ಲೂ ಸಂಭ್ರಮ ಜೋರಾಗಿದೆ. ಹಳ್ಳಿ– ಹಳ್ಳಿಗಳಲ್ಲಿ ಗಣಪತಿಗಾಗಿ ಪೆಂಡಾಲ್‌ಗಳು ಸಿದ್ಧವಾಗುತ್ತಿದೆ. ಬೀರೂರು– ಕಡೂರು ಪಟ್ಟಣಗಳಲ್ಲಿ ಗಣಪತಿ ತಯಾರಿಕೆ ವಿಶೇಷವಾಗಿ ನಡೆಯುತ್ತದೆ. ಕಡೂರಿನಲ್ಲಿ ದೊಡ್ಡ ಪಟ್ಟಣಗೆರೆಯ ಹೊಳೆಯಪ್ಪ ಮತ್ತು ಕುಟುಂಬ ಬೀರೂರಿನಲ್ಲಿ ಮಲ್ಲೇದೇವಿರಾಚಾರ್ ಕುಟುಂಬದ ನಟರಾಜ್ ದಂಪತಿ ಕಲಾವಿದ ಮಲ್ಲಿಕಾರ್ಜುನ ಪರಂಪರೆಯಿಂದ ನಡೆದುಕೊಂಡು ಬಂದಿರುವ ದೇವಿರಾಚಾರ್ ಕುಟುಂಬದ ಜನಾರ್ದನ ಪ್ರಮುಖವಾಗಿ ಗಣಪತಿ ತಯಾರಕರಾಗಿ ಗುರುತಿಸಿಕೊಂಡಿದ್ದಾರೆ. ಹೊಳೆಯಪ್ಪ ಕುಟುಂಬದವರು ಮೂರು ದಶಕಗಳಿಂದ ಕಡೂರಿನ ಪ್ರಸನ್ನ ಗಣಪತಿ ಸೇವಾ ಸಮಿತಿಯ ಸಾರ್ವಜನಿಕ ಗಣೇಶೋತ್ಸವಕ್ಕೆ ವಿವಿಧ ಬಗೆಯ ಗಣಪತಿ ಮೂರ್ತಿಗಳನ್ನು ತಯಾರಿಸಿಕೊಡುತ್ತಿದ್ದಾರೆ. ಬೀರು ನಟರಾಜ ದಂಪತಿ ಸುಂದರ ಗಣಪತಿ ಮೂರ್ತಿಗಳನ್ನು ತಯಾರಿಸುವಲ್ಲಿ ಪ್ರಸಿದ್ಧರು. ಸದ್ಯ ಒಂದು ದಶಕದಿಂದ ಬೀರೂರು ಮಿತ್ರ ಸಮಾಜ ಗಣಪತಿ ಸಾರ್ವಜನಿಕ ಗಣೇಶೋತ್ಸವಕ್ಕೆ ಹಾಗೂ ಪಟ್ಟಣದ ವಿವಿಧ ಪೆಂಡಾಲ್‌ಗಳಿಗೆ ಗಣಪತಿ ಮೂರ್ತಿಯನ್ನು ತಯಾರಿಸಿಕೊಡುತ್ತಿರುವ ಮಲ್ಲಿಕಾರ್ಜುನ ಪ್ರಮುಖ ಗಣಪತಿ ತಯಾರಕರಾಗಿ ಗುರುತಿಸಿಕೊಂಡಿದ್ದಾರೆ. ಈ ಬಾರಿ ಅವರ ಸಂಗ್ರಹದಲ್ಲಿ ಅರ್ಧನಾರೀಶ್ವರ ಗಣಪತಿ ಹನುಮ ಮಿತ್ರ ಗಣಪತಿ ಕಾಮಧೇನು ಗಣಪತಿ ವೀಣಾ ಪಾಣಿ ಗಣಪತಿ ಮೊದಲಾದ ಗಣೇಶ ಮೂರ್ತಿಗಳಿಗೆ ಬೇಡಿಕೆ ಇದ್ದು ತಯಾರಿ ಭರದಿಂದ ಸಾಗಿದೆ. ಚಿಕ್ಕಮಗಳೂರು ಸಮೀಪದ ಮತ್ತಾವರ ಕೆರೆಯಿಂದ ಮಣ್ಣು ತಂದು ಅದನ್ನು ಎರಡು ತಿಂಗಳು ಹದಗೊಳಿಸಿ ನಂತರ ಹತ್ತಿ ಮಿಶ್ರಣ ಮಾಡಿ ಮೂರ್ತಿ ತಯಾರಿಕೆಗೆ ಚಾಲನೆ ನೀಡುತ್ತಾರೆ. ಅಲಂಕಾರಕ್ಕಾಗಿ ಬಟ್ಟೆಯ ಕುಸುರಿ ವಸ್ತ್ರಗಳು ಪಂಚೆಗಾಗಿ ವಸ್ತ್ರವನ್ನೇ ಅಳವಡಿಸಿ ಬಣ್ಣ ಬಳಸುವ ಶ್ರಮಕ್ಕೆ ನಿಯಂತ್ರಣ ಹಾಕಿಕೊಂಡಿದ್ದಾರೆ.

51 ವರ್ಷಗಳ ಇತಿಹಾಸ

‌ಕೊಪ್ಪ: ಪಟ್ಟಣದ ಪೌರ ಗಣೇಶೋತ್ಸವ ಸಮಿತಿ ವತಿಯಿಂದ ಈ ಬಾರಿ 51ನೇ ವರ್ಷದ ಗಣಪತಿ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ. 11 ದಿನಗಳ ಪರ್ಯಂತ ಪೂಜಿಸಿ ವಿಸರ್ಜಿಸಲಾಗುತ್ತದೆ. ಪಟ್ಟಣ ಪಂಚಾಯಿತಿ ಅಧ್ಯಕ್ಷರು ಯಾರು ಇರುತ್ತಾರೋ ಅವರು ಸಮಿತಿ ಅಧ್ಯಕ್ಷರು. ಈ ಹಿಂದೆ ಕ್ರಿಶ್ಚಿಯನ್ ಸಮುದಾಯದ ವ್ಯಕ್ತಿ ಅಧ್ಯಕ್ಷರಾಗಿದ್ದರು. ಮಾರ್ಕೆಟ್ ರಸ್ತೆಯಲ್ಲಿ ಗಣೇಶ ಚತುರ್ಥಿ ದಿನ ಪ್ರತಿಷ್ಠಾಪಿಸುವ ಮೂರ್ತಿಯು ನವರಾತ್ರಿ ಕಡೆಯ ದಿನದವರೆಗೆ ಇರುತ್ತದೆ. ನವರಾತ್ರಿಯಂದು ಪ್ರತಿಷ್ಠಾಪಿಸುವ ದುರ್ಗಾದೇವಿ ಜತೆಗೆ ವಿಜಯ ದಶಮಿಯಂದು ಗಣೇಶ ಮತ್ತು ದುರ್ಗಾ ದೇವಿ ವಿಸರ್ಜನೆ ನಡೆಯುತ್ತದೆ. ಇಲ್ಲಿ ಹಿಂದೂ– ಮುಸ್ಲಿಂ ಒಗ್ಗೂಡಿ ಸೌಹಾರ್ದ ಗಣೇಶ ಉತ್ಸವ ಆರಂಭಿಸಲಾಯಿತು. ತಾಲ್ಲೂಕಿನ ಅದ್ದಡ ಗ್ರಾಮದ ಸಿಗದಾಳಿನಲ್ಲಿ ವಿದ್ಯಾ ಗಣಪತಿ ಸೇವಾ ಸಮಿತಿ ವತಿಯಿಂದ 65ನೇ ವರ್ಷದ ಗಣಪತಿ ಮಹೋತ್ಸವ ನಡೆಯುತ್ತಿದೆ. ಇಲ್ಲಿ ಎಲ್ಲ ಸಮುದಾಯದವರು ಒಗ್ಗೂಡಿ ಗಣಪತಿ ಪ್ರತಿಷ್ಠಾಪಿಸಿ 5 ದಿನ ವಿಜೃಂಭಣೆಯ ಉತ್ಸವ ನಡೆಸುವುದು ವಿಶೇಷವಾಗಿದೆ. ತಾಲ್ಲೂಕಿನ ಕಮ್ಮರಡಿಯಲ್ಲಿ ವಿದ್ಯಾಗಣಪತಿ ಸೇವಾ ಸಂಘ ವತಿಯಿಂದ ಈ ಬಾರಿ 68ನೇ ಗಣೇಶೋತ್ಸವ ಆಚರಿಸಲಾಗುತ್ತಿದೆ. ಸಿಗಂಧೂರು ದೇವಸ್ಥಾನದ ಸೇತುವೆ ಮಾದರಿ ನಿರ್ಮಿಸಲಾಗುತ್ತಿದೆ. ಮೆರವಣಿಗೆ ಸಂದರ್ಭದಲ್ಲಿ ಮಸೀದಿ ಬಳಿ ಮುಸಲ್ಮಾನರು ಪಾನಕ ವಿತರಿಸುತ್ತಾರೆ. ಹಿಂದೂ ಸಮುದಾಯದ ಖುಷಿಯಲ್ಲಿ ಮುಸ್ಲಿಂ ಸಮುದಾಯವೂ ಪಾಲ್ಗೊಳ್ಳುವುದು ಇಲ್ಲಿನ ವಿಶೇಷ. ಪಟ್ಟಣದ ಮೇಲಿನಪೇಟೆಯಲ್ಲಿ ವಿನಾಯಕ ಭಕ್ತ ವೃಂದ ಆಯೋಜಿಸುವ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಪ್ರತಿ ವರ್ಷ ಒಂದೊಂದು ಆಶಯದಲ್ಲಿ ಇರುತ್ತದೆ. ಕಳೆದ ಬಾರಿ ಚಂದ್ರಯಾನ-3 ಉಪಗ್ರಹ ನೌಕೆ ಮಾದರಿ ಉತ್ಸವದಲ್ಲಿ ಗಮನ ಸೆಳೆದಿತ್ತು.

ಕುತೂಹಲ ಮೂಡಿಸಿದ ಸಾರ್ವಜನಿಕ ಗಣಪತಿ

ಮೂಡಿಗೆರೆ: ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಪ್ರತಿಷ್ಠಾಪಿಸುವ ಸಾರ್ವಜನಿಕ ಮಹಾಗಣಪತಿಯು ಹಲವು ಕಾರಣಗಳಿಂದ ಈ ಬಾರಿ ಕುತೂಹಲ ಮೂಡಿಸಿದೆ. ನಾಲ್ಕು ದಶಕಗಳ ಇತಿಹಾಸ ಹೊಂದಿರುವ ಸಾರ್ವಜನಿಕ ಮಹಾ ಗಣಪತಿ ಈ ಬಾರಿ ಸಾರ್ವಜನಿಕ ಹಿಂದೂ ಮಹಾಗಣಪತಿ ಎಂಬ ನಾಮಾಂಕಿತವನ್ನು ಪಡೆದುಕೊಂಡಿದೆ. ಹಿಂದೂ ಕಾರ್ಯಕರ್ತರು ಒಂದಾಗಿ ಪ್ರತಿಷ್ಠಾಪಿಸುವ ಗಣಪತಿ ಆಚರಣೆಗೆ ಈಗಾಗಲೇ ಲಾಂಛನ ಬಿಡುಗಡೆಗೊಂಡು ಒಂದಷ್ಟು ಗೊಂದಲಗಳನ್ನು ಸೃಷ್ಟಿಸಿದೆ. ಸ್ವಯಂ ಪ್ರೇರಿತರಾಗಿ ಗಣಪತಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದೆ.

ಐತಿಹಾಸಿಕ ತರೀಕರೆ ಗಣಪತಿ

ತರೀಕೆರೆ: ಪಟ್ಟಣದ ಕೇಂದ್ರ ಭಾಗದ ಬಿ.ಎಚ್.ರಸ್ತೆಯಲ್ಲಿರುವ ಪ್ರಸನ್ನ ಗಣಪತಿ ಸೇವಾ ಸಮಿತಿಯ ಗಣಪತಿ ಪೆಂಡಾಲ್ ಒಂದು ಕಾಲದಲ್ಲಿ ತಾಲ್ಲೂಕಿನ ಭಾವೈಕ್ಯದ ಕೇಂದ್ರವಾಗಿತ್ತು. ಗೌರಿ-ಗಣೇಶ ಹಬ್ಬ ಬಂತೆಂದರೆ ಧರ್ಮಾತೀತ ಮತ್ತು ಜಾತ್ಯತೀತವಾಗಿ ತಿಂಗಳುಗಟ್ಟಲೆ ನಡೆಯುವ ಈ ಗಣೇಶೋತ್ಸವವು ತಾಲ್ಲೂಕಿನ ಜನತೆಗೆ ಸಂಭ್ರಮ ಉಂಟುಮಾಡುತ್ತಿದ್ದವು. 1956ರಲ್ಲಿ ಹಂಜಿ ಶಿವಣ್ಣ ಅವರ ಅಧ್ಯಕ್ಷತೆಯಲ್ಲಿ ಪ್ರಾರಂಭವಾದ ಈ ಗಣೇಶೋತ್ಸವವು ಇತ್ತೀಚಿನ ದಿನಗಳವರೆಗೂ ವಿಜೃಂಭಣೆಯಿಂದ ನಡೆಯುತ್ತಿತ್ತು. ಆಧುನಿಕ ತಂತ್ರಜ್ಞಾನ ಮತ್ತು ಒತ್ತಡದ ಜೀವನ ಶೈಲಿಯಿಂದಾಗಿ ದಿನದಿಂದ ದಿನಕ್ಕೆ ಜನ ಸಂದಣಿ ಕ್ಷೀಣಿಸುತ್ತಿದೆ. ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವ ಸ್ಥಳ ವಿಶಾಲವಾಗಿದ್ದು ಸಾವಿರಾರು ಭಕ್ತರು ಏಕಕಾಲದಲ್ಲಿ ಒಂದೆಡೆ ಸೇರಬಹುದಾಗಿದೆ. ಇಂಥ ಸ್ಥಳವನ್ನು ತರೀಕೆರೆ ಟಿ.ಆರ್.ಸಿದ್ದಪ್ಪ ಮತ್ತು ಮಕ್ಕಳು ನೇರಲಕೆರೆಯ ಕಾಡಯ್ಯನ ಚಿಕ್ಕಣ್ಣ ಮತ್ತು ಮಕ್ಕಳು ಗೇರಮರಡಿಯ ಪಟೇಲ್‍ ಸಿದ್ರಾಮಪ್ಪ ಮತ್ತು ಮಕ್ಕಳು ಹಾಗೂ ತರೀಕೆರೆ ದಿ ಟೌನ್ ಜನರಲ್ ಕೊ-ಆಪರೇಟಿವ್ ಸೊಸೈಟಿಯವರು ಸೇರಿ ಈ ನಿವೇಶನವನ್ನು ದಾನ ನೀಡಿದ್ದಾರೆ. ಸಗನಪ್ಪ ಅವರ ಅಧ್ಯಕ್ಷತೆಯಲ್ಲಿ ಸುದೀರ್ಘವಾಗಿ ಸೇವೆ ಸಲ್ಲಿಸುವಾಗ ಉತ್ತಮವಾಗಿ ಸಮಿತಿ ಅಭಿವೃದ್ಧಿ ಕಂಡಿದ್ದು ಈಗ ಟಿ.ಆರ್.ಇಂದ್ರಯ್ಯ ಉತ್ಸವ ಮುಂದುವರಿಸುತ್ತಿದ್ದಾರೆ.

64ನೇ ವರ್ಷದ ಗಣೇಶೋತ್ಸವ

ಬಾಳೆಹೊನ್ನೂರು: ಇಲ್ಲಿನ ಕಲಾರಂಗ ಕ್ರೀಡಾಂಗಣದಲ್ಲಿ ವಿದ್ಯಾಗಣಪತಿ ಸೇವಾ ಸಮಿತಿ ವತಿಯಿಂದ ಪ್ರತಿವರ್ಷ ಬೃಹತ್ ಗಾತ್ರದ ವಿಭಿನ್ನ ಗಣೇಶನನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಈ ಉತ್ಸವ 63 ವರ್ಷದಿಂದ ನಡೆದುಕೊಂಡು ಬರುತ್ತಿದೆ. ಈ ಬಾರಿ 64ನೇ ವರ್ಷಕ್ಕೆ ಕಾಲಿಟ್ಟಿದೆ. ಪ್ರತಿವರ್ಷ 14 ಅಥವಾ 16 ದಿನಗಳ ಕಾಲ ಗಣಪತಿಯನ್ನು ಕೂರಿಸಿ ನಿತ್ಯ ಸಂಜೆ ವಿವಿಧ ಕಾರ್ಯಕ್ರಮ ಆಯೋಜಿಸುವುದು ವಾಡಿಕೆ. ವಿಸರ್ಜನಾ ಮೆರವಣಿಗೆಯಲ್ಲಿ ಪ್ರತಿವರ್ಷ ರಾಜ್ಯ ಹೊರರಾಜ್ಯದ ಕಲಾ ತಂಡಗಳನ್ನು ಕರೆಸಿ ಮನರಂಜಿಸಲಾಗುತ್ತದೆ. ಜಿಲ್ಲೆಯಲ್ಲೇ ಅತಿದೊಡ್ಡ ವಿಸರ್ಜನಾ ಮೆರವಣಿಗೆ ಇದಾಗಿದ್ದು ಜಿಲ್ಲೆ ಹೊರಜಿಲ್ಲೆಯ ಹಲವು ಭಾಗಗಳಿಂದ 15 ಸಾವಿರಕ್ಕೂ ಅಧಿಕ ಕಲಾಸಕ್ತರು ಭಕ್ತರು ಬರುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.