ADVERTISEMENT

ಮೂಡಿಗೆರೆ | ಗಣೇಶೋತ್ಸವ, ಈದ್ ಮಿಲಾದ್‌ಗೆ ಅನುಮತಿ ಕಡ್ಡಾಯ: ರಾಜಶೇಖರ್

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 4:58 IST
Last Updated 21 ಆಗಸ್ಟ್ 2025, 4:58 IST
ಮೂಡಿಗೆರೆಯಲ್ಲಿ ನಡೆದ ಗಣೇಶೋತ್ಸವ, ಈದ್ ಮಿಲಾದ್ ಶಾಂತಿ ಸಭೆಯಲ್ಲಿ ತಹಶೀಲ್ದಾರ್ ಅಶ್ವಿನಿ ಮಾತನಾಡಿದರು
ಮೂಡಿಗೆರೆಯಲ್ಲಿ ನಡೆದ ಗಣೇಶೋತ್ಸವ, ಈದ್ ಮಿಲಾದ್ ಶಾಂತಿ ಸಭೆಯಲ್ಲಿ ತಹಶೀಲ್ದಾರ್ ಅಶ್ವಿನಿ ಮಾತನಾಡಿದರು   

ಮೂಡಿಗೆರೆ: ‘ಗಣೇಶೋತ್ಸವ, ಈದ್ ಮಿಲಾದ್ ಆಚರಣೆಗೆ ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕು’ ಎಂದು ಪೊಲೀಸ್ ಸರ್ಕಲ್ ಇನ್‌ಸ್ಪೆಕ್ಟರ್ ರಾಜಶೇಖರ್ ಹೇಳಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿಯ ಪಂಡಿತ್ ದೀನ್ ದಯಾಳ್ ಸಭಾಂಗಣದಲ್ಲಿ ನಡೆದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.

‘ನಿಯಮಾನುಸಾರ ಆಯೋಜಕರು ಗಣೇಶ ಪ್ರತಿಷ್ಠಾಪನೆ ಮಾಡಬೇಕು. ಗಣಪತಿ ಪ್ರತಿಷ್ಠಾಪನೆಯಿಂದ ವಿಸರ್ಜನೆವರಿಗೂ ಯಾವುದೇ ಗೊಂದಲ ಆಗದ ರೀತಿಯಲ್ಲಿ ಗಮನಿಸಬೇಕಾದದ್ದು, ಆಯೋಜಕರ ಕರ್ತವ್ಯ. ಎಲ್ಲೇ ಗಣಪತಿ ಪ್ರತಿಷ್ಠಾಪನೆ ಮಾಡುವುದಾದರೂ ಮೊದಲೇ ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಯಿಂದ ಅನುಮತಿ ಪಡೆಯಬೇಕಾಗಿದೆ. ಮುಂಜಾಗ್ರತಾ ಕ್ರಮವಾಗಿ ಸಿ.ಸಿ ಟಿವಿ ಕ್ಯಾಮೆರಾ ಅಳವಡಿಸಬೇಕು. ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೂ ಧ್ವನಿವರ್ಧಕ ಬಳಸಬಾರದು. ವಿಸರ್ಜನಾ ಮೆರವಣಿಗೆಯ ಸಂದರ್ಭದಲ್ಲಿ ವಿದ್ಯುತ್ ತಂತಿ ಕೆಳ ಭಾಗದಲ್ಲಿ ಹಾದು ಹೋಗಿದ್ದರೆ, ಮುಂಚಿತವಾಗಿ ಮೆಸ್ಕಾಂ ಇಲಾಖೆಯ ಗಮನಕ್ಕೆ ತಿಳಿಸಿ ಸರಿಪಡಿಸಬೇಕು. ಗಣಪತಿ ಪ್ರತಿಷ್ಠಾಪನೆಯ ಪ್ರಾರಂಭದ ದಿನದಿಂದ 24ಗಂಟೆಯೂ ಆ ಸ್ಥಳದಲ್ಲಿ ಸಮಿತಿಯಿಂದಲೇ ವ್ಯಕ್ತಿಗಳನ್ನು ನೇಮಿಸಬೇಕು’ ಎಂದು ತಿಳಿಸಿದರು.

ADVERTISEMENT

ತಹಶೀಲ್ದಾರ್ ಅಶ್ವಿನಿ ಮಾತನಾಡಿ, ‘ಗಣಪತಿ ಹಬ್ಬ ಎಲ್ಲರೂ ಸೇರಿ ಮಾಡುವಂಥದ್ದು. ಹಾಗಾಗಿ ಎಲ್ಲೂ ಗೊಂದಲಗಳು ಆಗದಂತೆ ಆಯೋಜಕರೇ ಕ್ರಮ ಕೈಗೊಳ್ಳಬೇಕು. ಈದ್ ಮಿಲಾದ್ ಸಹ ಅದೇ ಸಂದರ್ಭದಲ್ಲಿ ಇರುವುದರಿಂದ ಗೊಂದಲಗಳು ಆಗದಂತೆ ಮೊದಲೇ ಬಂಟಿಂಗ್ಸ್, ಬ್ಯಾನರ್ ಹಾಕಲು ಅಧಿಕೃತ ದಿನಾಂಕ ನೀಡಿ ಅನುಮತಿ ಪಡೆಯಬೇಕು’ ಎಂದರು.

ಹಿಂದೂ ಮಹಾಗಣಪತಿ ಸಮಿತಿ ಅಧ್ಯಕ್ಷ ಅನುಕುಮಾರ್ ಮಾತನಾಡಿ, ‘ಪ್ರತಿ ವರ್ಷದಂತೆ ಈ ವರ್ಷವೂ ಯಾವುದೇ ಗೊಂದಲಗಳಿಲ್ಲದೆ ಗಣಪತಿ ಉತ್ಸವ ನೆರವೇರಲು ಇಲಾಖೆಗಳಿಂದ ಸಹಕಾರ ಬೇಕಾಗುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮ ವರ್ಷಕ್ಕೆ ಒಮ್ಮೆ ನಡೆಯುವುದು ಹಾಗಾಗಿ ಹೆಚ್ಚು ಒತ್ತಡ ಹಾಕಬಾರದು. ಇಯರ್ ಎಂಡ್ ಪಾರ್ಟಿ ಮಾಡುವ ಸಂದರ್ಭದಲ್ಲಿ ನಡುರಾತ್ರಿಯಲ್ಲಿ ರಸ್ತೆ ಮಧ್ಯ ಡಿ.ಜೆ ಹಾಕಿ ಕುಡಿದು ಕುಣಿದು ಕುಪ್ಪಳಿಸುತ್ತಾರೆ. ಅದನ್ನು ಪ್ರಶ್ನೆ ಮಾಡದ ಸರ್ಕಾರ ಗಣಪತಿ ಉತ್ಸವದಲ್ಲಿ ಡಿ.ಜೆ ಬಳಸಲು ಅವಕಾಶ ಇಲ್ಲ ಎಂದು ಹೇಳುವುದು ಸರಿಯಲ್ಲ. ಹಾಗಾಗಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ನಿರ್ಬಂಧ ಹೇರಬಾರದು’ ಎಂದು ಒತ್ತಾಯಿಸಿದರು.

ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ದಯಾವತಿ, ಪಿಎಸ್ಐ ಶ್ರೀನಾಥ್ ರೆಡ್ಡಿ, ದಿಲೀಪ್, ಹರ್ಷಕುಮಾರ್, ಗಣಪತಿ ಸಮಿತಿಯ ಜೆ.ಎಸ್. ರಘು, ಪ್ರವೀಣ್, ಭರತ್ ಕನ್ನಹಳ್ಳಿ, ಶಿವಣ್ಣ ಹೆಸ್ಗಲ್, ಅನಿಲ್ ಛತ್ರಮೈದಾನ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.