ADVERTISEMENT

ಮೂಡಿಗೆರೆ: ಗೌರಿಪೂಜೆ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2025, 3:54 IST
Last Updated 27 ಆಗಸ್ಟ್ 2025, 3:54 IST
ಮೂಡಿಗೆರೆ ತಾಲ್ಲೂಕಿನ ಹಾರ್ಮಕ್ಕಿಯಲ್ಲಿ ಮಹಿಳೆಯರು ಸಾಮೂಹಿಕವಾಗಿ ಗೌರಿಪೂಜೆ ನಡೆಸಿ ಮನೆತುಂಬಿಕೊಂಡರು
ಮೂಡಿಗೆರೆ ತಾಲ್ಲೂಕಿನ ಹಾರ್ಮಕ್ಕಿಯಲ್ಲಿ ಮಹಿಳೆಯರು ಸಾಮೂಹಿಕವಾಗಿ ಗೌರಿಪೂಜೆ ನಡೆಸಿ ಮನೆತುಂಬಿಕೊಂಡರು   

ಮೂಡಿಗೆರೆ: ತಾಲ್ಲೂಕಿನಾದ್ಯಂತ ಮಂಗಳವಾರ ಸ್ವರ್ಣಗೌರಿ ವೃತದ ಅಂಗವಾಗಿ ಗೌರಿ ಪೂಜೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ನಸುಕಿನಲ್ಲಿಯೇ ಮಡಿಯುಟ್ಟ ಮಹಿಳೆಯರು, ಹೆಣ್ಣು ಮಕ್ಕಳು ಹಳ್ಳ, ಕೆರೆ, ಬಾವಿಗಳಿಗೆ ತೆರಳಿ ಗಂಗೆ ಪೂಜೆ ನಡೆಸಿ, ಕಳಶ ಪ್ರತಿಷ್ಠಾಪಿಸಿ ಗೌರಿಗೆ ಪೂಜೆ ಸಲ್ಲಿಸಿದರು. ಸೂರ್ಯೋದಯದ ಒಳಗೆ ಗೌರಿಯನ್ನು ಮನೆ ತುಂಬಿಸಿಕೊಳ್ಳುವ ಸಂಪ್ರದಾಯವನ್ನು ಆಚರಿಸಿದರು.

ಮನೆಯ ಮುಖ್ಯದ್ವಾರಕ್ಕೆ ಹೂವಿನ ಅಲಂಕಾರ ಮಾಡಿ, ಕಳಸ ಗ್ರಾಮ ಪೂಜಿಸಿ, ಹಣ್ಣು, ಕಾಯಿ ಸಹಿತ ಪೂಜೆ ಸಲ್ಲಿಸಿ ವಸಲು ಪೂಜೆ ನೆರವೇರಿಸಲಾಯಿತು. ಬಳಿಕ ಮನೆದೇವರಿಗೆ ಪೂಜೆ ನಡೆಸಿ, ಚಿಗಳಿ, ಟಮಟ ಸಹಿತ ವಿಶೇಷ ಸಿಹಿ ಖಾದ್ಯಗಳನ್ನು ತಯಾರಿಸಿ ನೈವೇದ್ಯ ಸಮರ್ಪಿಸಿ, ನೆರೆಹೊರೆಯವರಿಗೆ ಹಂಚಲಾಯಿತು.

ADVERTISEMENT

ಎರಡು ತಿಂಗಳಿನಿಂದ ಎಡೆಬಿಡದೇ ಸುರಿದ ಮಳೆಯು ವಾರದಿಂದ ಬಿಡುವು ನೀಡಿದ್ದು, ಹಬ್ಬದ ಸಂಭ್ರಮ ಇಮ್ಮಡಿಯಾಗಿದೆ. ಬೇರೆ ಊರುಗಳಲ್ಲಿ ನೆಲೆಸಿರುವ ಸ್ಥಳೀಯರು ಹಬ್ಬಕ್ಕಾಗಿ ಗ್ರಾಮಗಳಿಗೆ ಬರುತ್ತಿದ್ದು, ಬೆಂಗಳೂರು, ಮಂಗಳೂರು, ಮೈಸೂರು, ಶಿವಮೊಗ್ಗದಿಂದ ಬರುವ ಬಸ್‌ಗಳು ಪ್ರಯಾಣಿಕರಿಂದ‌‌ ತುಂಬಿ ಹೋಗಿದ್ದವು. ಬಾಗಿನ ಕೊಡುವುದು ಗೌರಿ ಹಬ್ಬದ ವಿಶೇಷತೆಯಾಗಿದ್ದು, ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳು ಮರಬಾಗಿನ ತೆಗೆದು‌ಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಗಣೇಶ ಚತುರ್ಥಿಗಾಗಿ ಖರೀದಿ ಜೋರಾಗಿದ್ದು, ಬೆಲೆ ಏರಿಕೆಯ ನಡುವೆಯೇ ಗ್ರಾಹಕರು ಹೂವು, ಹಣ್ಣು ಖರೀದಿಸುತ್ತಿದ್ದ ದೃಶ್ಯ ಕಂಡು ಬಂದಿತು.

ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರದ ದೇವನಗೂಲ್ ಗ್ರಾಮದಲ್ಲಿ ಮಹಿಳೆಯರು ಗೌರಿ ಪೂಜೆ ಸಲ್ಲಿಸಿ‌ ಗೌರಿಯನ್ನು ಮನೆಗೆ ಕರೆದೊಯ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.