ADVERTISEMENT

ನಕಲಿ ನೋಟು ಪ್ರಕರಣ: ಆರೋಪಿಗಳ ಕೈಯಲ್ಲಿತ್ತು ₹1 ಕೋಟಿ ಮೌಲ್ಯದ ರತ್ನದ ಗುಂಡು!

ವಿವಿಧ ಜಿಲ್ಲೆಗಳಲ್ಲಿ ನಕಲಿ ನೋಟು ಚಲಾವಣೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2021, 3:05 IST
Last Updated 24 ಆಗಸ್ಟ್ 2021, 3:05 IST
ವಶಪಡಿಸಿಕೊಂಡಿರುವ ರತ್ನದ ಗುಂಡು
ವಶಪಡಿಸಿಕೊಂಡಿರುವ ರತ್ನದ ಗುಂಡು   

ಚಿಕ್ಕಮಗಳೂರು: ನಕಲಿ ನೋಟು ಚಲಾವಣೆ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿ, ಅವರಿಂದ ರತ್ನದ ಗುಂಡೊಂದನ್ನು (ಅಂದಾಜು ₹ 50 ಲಕ್ಷದಿಂದ ₹1 ಕೋಟಿ ಮೌಲ್ಯ) ವಶಪಡಿಸಿಕೊಳ್ಳಲಾಗಿದೆ.

ನಗರದ ಸೈಬರ್‌ ಠಾಣೆಯ ಇನ್‌ಸ್ಪೆಕ್ಟರ್‌ ಎ.ಕೆ. ರಕ್ಷಿತ್‌ ಮತ್ತು ತಂಡದವರು ಕಾರ್ಯಾಚರಣೆ ನಡೆಸಿ ಮಂಗಳೂರಿನಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. 510.60 ಕ್ಯಾರೆಟ್‌ ಪ್ರಮಾಣೀಕೃತ ಪುರಾತನ (ಕ್ಯಾಟ್‌–ಐ) ರತ್ನದಗುಂಡನ್ನು ವಶಪಡಿಸಿಕೊಂಡಿದ್ದಾರೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಆಲ್ದೂರು ಠಾಣೆಯ ಪೊಲೀಸರು ನಕಲಿ ನೋಟು ಚಲಾವಣೆ ಜಾಲವೊಂದನ್ನು ಭೇದಿಸಿದ್ದರು. ಜಾಲದ ಕೆಲ ಆರೋಪಿಗಳನ್ನು ಬಂಧಿಸಿದ್ದರು. ನಕಲಿ ನೋಟುಗಳು, ವಾಹನ, ಪರಿಕರಗಳನ್ನು ವಶಪಡಿಸಿಕೊಂಡಿದ್ದರು. ಜಾಲದ ಇನ್ನೂ ಕೆಲ ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದರು. ಉಲ್ಲಾಳ ಠಾಣೆಯಲ್ಲೂ ಪ್ರಕರಣ ದಾಖಲಾಗಿತ್ತು.

ADVERTISEMENT

ತಲೆಮರೆಸಿಕೊಂಡಿದ್ದ ಇಬ್ಬರು ಪ್ರಮುಖ ಆರೋಪಿಗಳನ್ನು ಈಗ ಬಂಧಿಸಲಾಗಿದೆ. 2019ರಲ್ಲಿ ಈ ಆರೋಪಿಗಳು ಖರೀದಿ ನೆಪದಲ್ಲಿ ವ್ಯಕ್ತಿಯೊಬ್ಬನಿಂದ ರತ್ನದ ಗುಂಡು ಲಪಟಾಯಿಸಿದ್ದರು. ಶಿವಮೊಗ್ಗದ ದೊಡ್ಡಪೇಟೆಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈಗ ಬಂಧಿಸಿರುವ ಇಬ್ಬರು ಆರೋಪಿಗಳ ಪೈಕಿ ಒಬ್ಬನ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಹಲ್ಲೆ ಹಾಗೂ ಕಳ್ಳತನದ ಆರು ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೋರ್ಟ್‌ ಜಾಮೀನುರಹಿತ ವಾರೆಂಟ್‌ ಜಾರಿ ಮಾಡಿದೆ.

ಈ ಆರೋಪಿಯು ನಾಯಿಗಳಿಗೆ ವಿಷ ಹಾಕಿ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ. ಕೇರಳದಲ್ಲಿ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ. ಮೈಸೂರು, ಹಾಸನ ಜಿಲ್ಲೆಗಳಲ್ಲಿ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರಾಯ್‌ ಅವರು ಕಾರ್ಯಾಚರಣೆ ತಂಡಕ್ಕೆ ಬಹುಮಾನ ಘೋಷಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಕ್ಷಯ್‌ ಎಂ.ಹಾಕೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.