ADVERTISEMENT

ಸರ್ಕಾರಿ ಜಾಗ ಅಕ್ರಮ ಮಂಜೂರಾತಿ; ವರದಿ ಸಲ್ಲಿಕೆ

ದಾಖಲೆ ಪರಿಶೀಲಿಸಿ ಎನ್‌.ಆರ್‌.ಪುರ ತಾಲ್ಲೂಕು ತಹಶೀಲ್ದಾರ್‌ ವರದಿ

​ಪ್ರಜಾವಾಣಿ ವಾರ್ತೆ
Published 29 ಜೂನ್ 2022, 2:25 IST
Last Updated 29 ಜೂನ್ 2022, 2:25 IST

ನರಸಿಂಹರಾಜಪುರ: ತಾಲ್ಲೂಕಿನಲ್ಲಿ ಸರ್ಕಾರಿ ಜಾಗವನ್ನು ಅಕ್ರಮವಾಗಿ ಕೆಲವರಿಗೆ ಮಂಜೂರು ಮಾಡಿರುವುದು ಕಂಡುಬಂದಿದೆ ಎಂದು ತಹಶೀಲ್ದಾರ್ ಅವರು ಜಿಲ್ಲಾಧಿಕಾರಿ ಮತ್ತು ತರೀಕೆರೆ ಉಪವಿಭಾಗಾಧಿಕಾರಿಗೆ ವರದಿ ಸಲ್ಲಿಸಿದ್ದಾರೆ. ಜೂನ್‌ 23ರಂದು ಅವರು ವರದಿ ನೀಡಿದ್ದಾರೆ. ವರದಿ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಬಗರ್‌ಹುಕುಂ ಸಮಿತಿ ಅಧ್ಯಕ್ಷರು, ಸದಸ್ಯರು ಮಂಜೂರಾತಿ ಕಡತಗಳನ್ನು ಸಭೆಯಲ್ಲಿ ಮಂಡಿಸದೆ ನೇರವಾಗಿ ಖಾತೆ ಇಂಡೀಕರಣವಾಗಿರುವುದು ಕಂಡುಬಂದಿದೆ. ಸದರಿ ಕಡತ ಪರಿಶೀಲಿಸುವಂತೆ ಸಭಾ ನಡವಳಿಯಲ್ಲಿ ಬರೆಸಿದ್ದಾರೆ. ಕಚೇರಿಯಲ್ಲಿ ಲಭ್ಯ ಇಲ್ಲದ ಕಡತಗಳ ವಿವರ ಪರಿಶೀಲನೆ ಮಾಡಲಾಗಿದ್ದು, ನಾಲ್ವರಿಗೆ ಅಕ್ರಮವಾಗಿ ಖಾತೆ ದಾಖಲಿಸಿರುವುದು ಕಂಡು ಬಂದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಸರ್ಕಾರಿ ಜಾಗ ಮಂಜೂರಾತಿ ದಾಖಲೆಗಳ ಪರಿಶೀಲನೆಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದರು. ಅದರಂತೆ 2017ರಿಂದ ತಾಲ್ಲೂಕಿನ ಸರ್ಕಾರಿ ಜಾಗ ಮಂಜೂರಾಗಿರುವ ವಿವರವನ್ನು ಭೂಮಿ ತಂತ್ರಾಂಶದಲ್ಲಿ ನಮೂದಿಸಿ ಪಹಣಿ ಇಂಡೀಕರಿಸಿರುವ ಬಗ್ಗೆ ಪರಿಶೀಲಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ.

ADVERTISEMENT

ಅರಳೀಕೊಪ್ಪದ ಬಿ.ಎ.ಸತೀಶ ಬಿನ್ ಬಿ.ಆರ್.ಅಣ್ಣಯ್ಯಗೌಡ, ಅದೇ ಗ್ರಾಮದ ಬಿ.ಆರ್.ಅಣ್ಣಯ್ಯ ಗೌಡ ಬಿನ್ ರಾಮೇಗೌಡ, ಶಿರಗಳಲೆ ಗ್ರಾಮದ ಎಸ್.ಸುಬ್ರಹ್ಮಣ್ಯ ಬಿನ್ ಕೆ.ಶ್ಯಾಮಶೆಟ್ಟಿ, ಮಾಗುಂಡಿಯ ದೇವಕಿ ಕೋಂ ಬೂಬಪೂಜಾರಿ ಅವರಿಗೆ ಅಕ್ರಮವಾಗಿ ಜಾಗ ಮಂಜೂರು ಮಾಡಲಾಗಿದೆ. ಕಡತಗಳು ಲಭ್ಯ ಇಲ್ಲ. ಈ ಎಲ್ಲ ಪ್ರಕರಣಗಳಲ್ಲಿಯೂ ಬಗರ್ ಹುಕುಂ ಸಮಿತಿ ನಿರ್ಣಯ ಆಗಿಲ್ಲ ಎಂಬುದು ತಿಳಿದಿದ್ದಾಗಿಯೂ ಸರ್ಕಾರಿ ಜಮೀನನ್ನು ಖಾಸಗಿ ವ್ಯಕ್ತಿಗಳಿಗೆ ಮಂಜೂರು ಮಾಡಿರುವುದು ಕಂಡುಬಂದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಮಂಜೂರಾತಿ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ ಎಂದು ವರದಿಯಲ್ಲಿ ನಮೂದಿಸಿರುವ ಅಧಿಕಾರಿಗಳು, ನೌಕರರು (ಆಗಿನವರು): ಟಿ.ಗೋಪಿನಾಥ್ (ತಹಶೀಲ್ದಾರ್ ನಿವೃತ್ತಿ), ಎಚ್.ಎಂ.ನಾಗರಾಜ್ (ತಹಶೀಲ್ದಾರ್ ನಿವೃತ್ತಿ), ಕೆ.ಆರ್.ರಶ್ಮಿ (ಶಿರಸ್ತೇದಾರ್), ನಾಗೇಂದ್ರ ನಾಯಕ್ (ಶಿರಸ್ತೇದಾರ್), ಅಣ್ಣಪ್ಪ (ವಿಷಯ ನಿರ್ವಾಹಕ, ಬಗರ್ ಹುಕುಂ ಶಾಖೆ), ಪಿ.ಗಣಪತಿ (ವಿಷಯ ನಿರ್ವಾಹಕ ಬಗರ್ ಹುಕುಂ ಶಾಖೆ), ಕೆ.ಎನ್.ನಾಗೇಂದ್ರ (ರಾಜಸ್ವನಿರೀಕ್ಷ, ಬಾಳೆಹೊನ್ನೂರು), ವಿರೂಪಾಕ್ಷ (ರಾಜಸ್ವ ನಿರೀಕ್ಷಕ), ಪ್ರಭುದರ್ಶನ್ (ಗ್ರಾಮಲೆಕ್ಕಾಧಿಕಾರಿ,ಬಾಳೆವೃತ್ತ), ರಜತ್ ಕುಮಾರ್ (ಗ್ರಾಮಲೆಕ್ಕಾಧಿಕಾರಿ ಮಾಗುಂಡಿ ವೃತ್ತ), ತೇಜೇಶ್ವರಾಚಾರ್ (ಗ್ರಾಮಲೆಕ್ಕಿಗ ತಾಲ್ಲೂಕು ಕಚೇರಿ), ಟಿ.ಸಿ.ವೀಣಾ(ಗ್ರಾಮಲೆಕ್ಕಿಗರು, ಭೂಮಿಕೇಂದ್ರ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.