ADVERTISEMENT

ಶಾಲೆಗಳ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ: ಪುರಸಭೆ ಸದಸ್ಯ ಚಂದ್ರಶೇಖರ್

ಕುವೆಂಪು ನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಿಣ್ಣರ ಚಿಲಿಪಿಲಿ, ಪ್ರತಿಭಾ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 6:39 IST
Last Updated 10 ಫೆಬ್ರುವರಿ 2026, 6:39 IST
ಚಿಣ್ಣರ ಚಿಲಿಪಿಲಿ, ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಪುರಸಭೆ ಸದಸ್ಯ ಟಿ.ಆರ್. ಚಂದ್ರಶೇಖರ್ ಉದ್ಘಾಟಿಸಿದರು
ಚಿಣ್ಣರ ಚಿಲಿಪಿಲಿ, ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಪುರಸಭೆ ಸದಸ್ಯ ಟಿ.ಆರ್. ಚಂದ್ರಶೇಖರ್ ಉದ್ಘಾಟಿಸಿದರು   

ತರೀಕೆರೆ: ಸಮಾಜದ ಪ್ರತಿಯೊಬ್ಬರ ಸಹಕಾರದಿಂದ ಸರ್ಕಾರಿ ಶಾಲೆಗಳು ಅಭಿವೃದ್ಧಿ ಪಥದಲ್ಲಿ ಸಾಗಲು ಸಾಧ್ಯವಾಗುತ್ತದೆ ಎಂದು ಪುರಸಭೆ ಸದಸ್ಯ ಚಂದ್ರಶೇಖರ್ ಹೇಳಿದರು.

ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ತಾಲ್ಲೂಕು ಪಂಚಾಯಿತಿ, ಪುರಸಭೆ, ತರೀಕೆರೆ ಕ್ಷೇತ್ರ ಶಿಕ್ಷಣಾಧಿಕಾರಿ, ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿ ಆಶ್ರಯದಲ್ಲಿ ಪಟ್ಟಣದ ಗಾಳಿಹಳ್ಳಿ ಕ್ರಾಸ್‍ನ ಕುವೆಂಪು ನಗರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಚಿಣ್ಣರ ಚಿಲಿಪಿಲಿ, ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಈ ಶಾಲೆಯಲ್ಲಿ ಪಠ್ಯ, ಪಠ್ಯೇತರ ಚಟುವಟಿಕೆಗಳು ಕ್ರೀಯಾಶೀಲವಾಗಿ ನಡೆಯುತ್ತಿವೆ. ಹೀಗಾಗಿ ಈ ಶಾಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚುತ್ತಾ ಬರುತ್ತಿದೆ. ಇದಕ್ಕೆ ಪೂರಕವಾಗಿ ಶಾಲಾಭಿವೃದ್ಧಿ ಸಮಿತಿ, ಶಿಕ್ಷಕರು, ಸಿಬ್ಬಂದಿ ಶ್ರಮದಿಂದ ಇದು ಸಾಧ್ಯವಾಗಿದೆ ಎಂದು ಹೇಳಿದರು.

ADVERTISEMENT

ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಆರ್. ಅನಂತಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ನೀಡದಿದ್ದರೆ ಪೋಷಕರು ಅಂತಹ ಶಾಲೆಗಳಿಗೆ ಮಕ್ಕಳನ್ನು ಸೇರಿಸುವುದಿಲ್ಲ. ಶಾಲೆಯಲ್ಲಿ ಪ್ರತಿಭಾ ಕಾರಂಜಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಮಕ್ಕಳ ಪ್ರತಿಭೆ ಗುರುತಿಸಬಹುದು ಎಂದು ಹೇಳಿದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ನಾಗರಾಜ್ ಮಾತನಾಡಿ, ನಾಲ್ಕನೇ ವರ್ಷದ ಕಾರ್ಯಕ್ರಮ ಪೋಷಕರು, ಶಿಕ್ಷಕರು, ಸಿಬ್ಬಂದಿ ಸಹಕಾರದಿಂದ ಅದ್ದೂರಿಯಾಗಿ ನಡೆಯುತ್ತಿದೆ. ಶಾಲೆಗಳನ್ನು ದೇವಸ್ಥಾನದಂತೆ ನೋಡಬೇಕು. ಮಕ್ಕಳು ದೇವರಿಗೆ ಸಮಾನ ಎಂದು ಹೇಳಿದರು. ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿದ್ದು, ಕೊಠಡಿಗಳ ಕೊರತೆ ಇದೆ. ಹೆಚ್ಚುವರಿ ಕೊಠಡಿ, ಕಾಂಪೌಂಡ್ ಅಗತ್ಯವಿದೆ ಎಂದರು.

ತಾಲ್ಲೂಕು ಪಂಚಾಯಿತಿ ನಿವೃತ್ತ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್. ವಿಶಾಲಾಕ್ಷಮ್ಮ ಮಾತನಾಡಿ, ಸರ್ಕಾರಿ ಶಾಲೆ ಎಂಬ ಕೀಳರಿಮೆ ಬಿಟ್ಟು ಪ್ರತಿಯೊಬ್ಬರು ಸರ್ಕಾರಿ ಶಾಲೆಗಳಿಗೆ ಪೋತ್ಸಾಹಿಸಿ ಮಕ್ಕಳನ್ನು ಸೇರಿಸಬೇಕು ಎಂದರು.

ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಎಂ.ಬಿ. ರಾಮಚಂದ್ರಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಧರಣೇಶ್ ಮಾತನಾಡಿದರು. ದಲಿತ ಸಂಘಟನೆ ಮುಖಂಡ ಎಚ್.ವಿ. ಬಾಲರಾಜ್, ದಾನಿ ಟಿ.ಕೆ. ಕುಮಾರ್, ಶಿಕ್ಷಕರ ಸಂಘದ ನಿರ್ದೇಶಕ ಮಂಜುನಾಥ್, ಮುಖ್ಯಶಿಕ್ಷಕ ತಿಮ್ಮಾರೆಡ್ಡಿ ಭಾಗವಹಿಸಿದ್ದರು.

ಶಿಕ್ಷಕರಾದ ನಾಗರಾಜ್ ನಿರೂಪಿಸಿದರು. ಶಶಿಕಲಾ ಸ್ವಾಗತಿಸಿದರು. ಶ್ರೀನಿವಾಸ್ ವರದಿ ವಾಚಿಸಿದರು. ಪ್ರತಿಭಾ, ಸಾವಿತ್ರಮ್ಮ, ಸೌಭಾಗ್ಯ, ಸ್ವಾತಿ ಅವರು ಪ್ರತಿಭಾ ಪುರಸ್ಕಾರ, ಪೋಷಕರ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯ ನೆರವೇರಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.