ಕುಸಿಯುತ್ತಿದೆ ಅಂತರ್ಜಲ ಮಟ್ಟ (ಪ್ರಾತಿನಿಧಿಕ ಚಿತ್ರ)
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಈ ವರ್ಷ ಸಮೃದ್ಧಿಯಾಗಿ ಮಳೆಯಾಗಿದ್ದರಿಂದ ಬಯಲು ಸೀಮೆಯಲ್ಲಿ ಅಂತರ್ಜಲ ಸಮೃದ್ಧಿಯಾಗಿದೆ. ಆದರೆ, ಕೊಪ್ಪ ಮತ್ತು ಎನ್.ಆರ್.ಪುರ ತಾಲ್ಲೂಕಿನ ಅಂತರ್ಜಲ ಮಟ್ಟ ಕುಸಿತ ಹೆಚ್ಚಾಗಿದೆ.
ಕಳೆದ ವರ್ಷ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕೆ ಸೇರಿತ್ತು. ಅಜ್ಜಂಪುರ ಮತ್ತು ಕಡೂರು ತಾಲ್ಲೂಕಿನಲ್ಲಿ ಅಂತರ್ಜಲ ಪಾತಾಳವನ್ನೇ ಸೇರಿತ್ತು. ಅಜ್ಜಂಪುರ ತಾಲ್ಲೂಕಿನಲ್ಲಿ ಕಳೆದ ವರ್ಷ ಸರಾಸರಿ 14.12 ಮೀಟರ್‌ಗೆ ಕುಸಿದಿಯತ್ತು. ಕಡೂರು ತಾಲ್ಲೂಕಿನಲ್ಲೂ 12.22ಕ್ಕೆ ಇಳಿದಿತ್ತು.
ಈ ವರ್ಷ ಮಳೆ ಧಾರಕಾರವಾಗಿ ಜನವರಿ ತನಕವೂ ಸುರಿದಿದ್ದರಿಂದ ಬಹುತೇಕ ಎಲ್ಲಾ ಕೆರೆಗಳಲ್ಲೂ ನೀರಿದೆ. ಕಳೆದ ವರ್ಷ ಈ ಹೊತ್ತಿಗಾಗಲೇ ಕೆರೆಗಳಲ್ಲಿ ನೀರು ಸಂಪೂರ್ಣ ಖಾಲಿಯಾಗಿತ್ತು. ಕೆರೆಗಳಲ್ಲಿ ಈ ವರ್ಷ ಇನ್ನೂ ನೀರು ಇರುವುದರಿಂದ ಅಂತರ್ಜಲ ಕುಸಿತ ಕಂಡಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.
ಆದರೆ, ಮಲೆನಾಡು ಭಾಗದಲ್ಲಿ ಈ ವರ್ಷ ಅತೀ ಹೆಚ್ಚಿನ ಮಳೆಯಾಗಿದ್ದರೂ ಕೊಪ್ಪ ಮತ್ತು ಎನ್.ಆರ್.ಪುರ ತಾಲ್ಲೂಕಿನಲ್ಲಿ ಅಂತರ್ಜಲ ಮಟ್ಟ ಪಾತಾಳ ಸೇರಿದೆ. ಈ ವರ್ಷ ಮಾತ್ರವಲ್ಲ ಕಳೆದ ಹತ್ತು ವರ್ಷಗಳ ಅಂಕಿ –ಅಂಶ ಗಮನಿಸಿದರೆ ಮಲೆನಾಡು ಭಾಗದಲ್ಲೇ ಅಂತರ್ಜಲ ಮಟ್ಟ ಹೆಚ್ಚಿನದಾಗಿ ಕುಸಿದಿದೆ.
ಅತಿವೃಷ್ಟಿ ಇರಲಿ, ಅನಾವೃಷ್ಟಿ ಇರಲಿ, ಅಂತರ್ಜಲ ಕುಸಿತದಲ್ಲಿ ಕೊಪ್ಪ ತಾಲ್ಲೂಕು ಮೊದಲ ಸ್ಥಾನದಲ್ಲಿಯೇ ಇದೆ. ಕಳೆದ 10 ವರ್ಷಗಳಿಂದಲೂ ಅಂತರ್ಜಲ ಮಟ್ಟ ಕುಸಿತ ಈ ತಾಲ್ಲೂಕಿನಲ್ಲೇ ಹೆಚ್ಚಿದೆ. 2018ರಲ್ಲಿ ತಾಲ್ಲೂಕಿನ ಸರಾಸರಿ ಅಂತರ್ಜಲ ಮಟ್ಟ 19.95 ಮೀಟರ್ ಆಳಕ್ಕೆ ಕುಸಿದಿತ್ತು. ಕಳೆದ ವರ್ಷ ಸರಾಸರಿ 16.97 ಮೀಟರ್ ಇತ್ತು. ಉತ್ತಮವಾಗಿ ಮಳೆಯಾಗಿದ್ದರಿಂದ ಈ ವರ್ಷ ಅತಿವೃಷ್ಟಿಯ ವಾತಾವರಣ ಇತ್ತು. ಆದರೂ 15.98 ಮೀಟರ್‌ಗೆ ಕುಸಿದಿದೆ.
ಎನ್.ಆರ್.ಪುರ ತಾಲ್ಲೂಕು ಕೂಡ ಅಂತರ್ಜಲ ಮಟ್ಟ ಕುಸಿತದಲ್ಲಿ ಎರಡನೇ ಸ್ಥಾನದಲ್ಲಿದೆ. ಬರಗಾಲದ ಸ್ಥಿತಿಯ ನಡುವೆ ಕಳೆದ ವರ್ಷ 13.87 ಮೀಟರ್ ಆಳದಲ್ಲಿದ್ದ ಅಂತರ್ಜಲ ಈ ವರ್ಷವೂ ಬಹುತೇಕ ಅದೇ ಸ್ಥಿತಿಗೆ ತಲುಪಿದೆ. 2025ರ ಜನವರಿ ಅಂತ್ಯದ ವೇಳೆಗೆ 13.36 ಮೀಟರ್‌ನಲ್ಲಿ ಅಂತರ್ಜಲ ಇದೆ. ವರ್ಷದಿಂದ ವರ್ಷಕ್ಕೆ ಈ ಅಂತರ್ಜಲ ಮಟ್ಟ ಕುಸಿತವನ್ನೇ ಕಂಡಿದೆ.
ಕಡೂರಿನಲ್ಲಿ ಅಂತರ್ಜಲ ಮಟ್ಟ ಏರಿಕೆ
ಕಡೂರು, ಅಜ್ಜಂಪುರ ಮತ್ತು ತರೀಕೆರೆ ತಾಲ್ಲೂಕಿನ 10 ವರ್ಷಗಳ ಅಂಕಿ–ಅಂಶ ಗಮನಿಸಿದರೆ ಕುಸಿತ ಮಟ್ಟ ಕಡಿಮೆಯಾಗಿದೆ. 2014ರಲ್ಲಿ ಕಡೂರು ತಾಲ್ಲೂಕಿನ ಸರಾಸರಿ 20.31 ಇದ್ದ ಅಂತರ್ಜಲ 2017ರ ವೇಳೆಗೆ 27.86 ಮೀಟರ್ ಅಳಕ್ಕೆ ಹೋಗಿತ್ತು. ಬಳಿಕ ಏರಿಕೆ ಕಂಡಿದ್ದು, 2022ರಲ್ಲಿ 8.22 ಮೀಟರ್‌ಗೆ ಏರಿಕೆಯಾಗಿತ್ತು. ಬರಗಾಲ ಇದ್ದ ಕಾರಣ 2024ರಲ್ಲಿ 12.22 ಮೀಟರ್ ಇತ್ತು. ಈ ವರ್ಷ 7.94 ಮೀಟರ್ ಆಳದಲ್ಲಿ ಅಂತರ್ಜಲ ಇದೆ.
‘ಬೇಕಾಬಿಟ್ಟಿಯಾಗಿ ಕೊಳವೆ ಬಾವಿ ಕೊರೆಯುವುದಕ್ಕೆ ಈ ತಾಲ್ಲೂಕಿನಲ್ಲಿ ಕಡಿವಾಣ ಹಾಕಲಾಗಿದೆ. ಅಲ್ಲದೇ, ಹನಿ ನೀರಾವರಿ ಮತ್ತು ತುಂತುರು ನೀರಾವರಿಗೆ ಆದ್ಯತೆ ನೀಡಲಾಗಿದೆ. ಇದರಿಂದ ಅಂತರ್ಜಲ ಮಟ್ಟ ಸುಧಾರಣೆಯಾಗಿದೆ’ ಎನ್ನುತ್ತಾರೆ ಅಧಿಕಾರಿಗಳು.
ಅಜ್ಜಂಪುರದಲ್ಲಿ ಅಂತರ್ಜಲ ಸಮೃದ್ಧ
ಅಜ್ಜಂಪುರ ತಾಲ್ಲೂಕಿನಲ್ಲಿ ಕಳೆದ ವರ್ಷ ಅಂತರ್ಜಲ ಮಟ್ಟ ಕುಸಿತದಿಂದ ಜನರ ಪರದಾಡಿದ್ದರು. ಆದರಲ್ಲೂ ಕೊಳವೆಬಾವಿಗಳಲ್ಲಿ ನೀರಿಲ್ಲದೆ ಅಡಿಕೆ ಬೆಳೆಗಾರರು ಕಷ್ಟಕ್ಕೆ ಸಿಲುಕಿದ್ದರು. ತಾಲ್ಲೂಕಿನ ಸರಾಸರಿ ಮಟ್ಟ 14.12 ಮೀಟರ್‌ಗೆ ಇಳಿದಿತ್ತು. ಟ್ಯಾಂಕರ್ ಮೂಲಕ ತೋಟಕ್ಕೆ ನೀರು ಹರಿಸಿ ತೋಟ ಉಳಿಸಿಕೊಳ್ಳಲು ಪರದಾಡಿದ್ದರು.
ಈ ವರ್ಷ 4.84 ಮೀಟರ್‌ನಲ್ಲೇ ಅಂತರ್ಜಲ ಇದೆ. ಇಡೀ ಜಿಲ್ಲೆಯಲ್ಲಿ ಅಜ್ಜಂಪುರ ತಾಲ್ಲೂಕಿನಲ್ಲೇ ಅಂತರ್ಜಲ ಮಟ್ಟ ಈ ವರ್ಷ ಸಮೃದ್ಧವಾಗಿದೆ. ಕೆರೆಗಳಲ್ಲಿ ನೀರು ಇರುವುದು ಇದಕ್ಕೆ ಕಾರಣ ಎನ್ನುತ್ತಾರೆ ಅಧಿಕಾರಿಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.