ADVERTISEMENT

ಆರೋಗ್ಯ ತಪಾಸಣಾ ಶಿಬಿರ, ಹೊಯ್ಸಳ ಯೋಗಕ್ಷೇಮ ವಾಹನ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 7:52 IST
Last Updated 4 ಡಿಸೆಂಬರ್ 2025, 7:52 IST
ಮೂಡಿಗೆರೆ ಹೊಯ್ಸಳ ಆಸ್ಪತ್ರೆ ಹಾಗೂ ರೋಟರಿ ಸಂಸ್ಥೆಯಿಂದ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಉದ್ಘಾಟಿಸಿದರು
ಮೂಡಿಗೆರೆ ಹೊಯ್ಸಳ ಆಸ್ಪತ್ರೆ ಹಾಗೂ ರೋಟರಿ ಸಂಸ್ಥೆಯಿಂದ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಉದ್ಘಾಟಿಸಿದರು   

ಮೂಡಿಗೆರೆ: ಉತ್ತಮ ಆಹಾರ, ನಿಯಮಿತ ವ್ಯಾಯಾಮ ಉತ್ತಮ ಆರೋಗ್ಯದ ಗುಟ್ಟು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.

ಪಟ್ಟಣದ ಹೊಯ್ಸಳ ಆಸ್ಪತ್ರೆ ಹಾಗೂ ರೋಟರಿ ಸಂಸ್ಥೆಯಿಂದ ಬುಧವಾರ ಜೇಸಿ ಭವನದಲ್ಲಿ ನಡೆದ ಆರೋಗ್ಯ ತಪಾಸಣಾ ಉಚಿತ ಶಿಬಿರ, ಹೊಯ್ಸಳ ಯೋಗಕ್ಷೇಮ ವಾಹನ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣ, ಆರೋಗ್ಯ ಸೇರಿದಂತೆ ಬಹುತೇಕ ಕ್ಷೇತ್ರಗಳು ಉದ್ಯಮವಾಗಿ ಬೆಳೆದಿವೆ. ಪ್ರತಿಯೊಬ್ಬರಲ್ಲೂ ವ್ಯಾಪಾರಿ ಮನೋಭಾವ ತುಂಬಿಹೋಗಿರುವುದು ಕಳವಳಕಾರಿಯಾಗಿದೆ. ಇದರ ನಡುವೆ ಹೊಯ್ಸಳ ಆಸ್ಪತ್ರೆ, ಬಡವರು ಮತ್ತು ಮಧ್ಯಮ ವರ್ಗದ ರೋಗಿಗಳ ಆರೋಗ್ಯದ ಬಗ್ಗೆ ಹೆಚ್ಚು ಆಸಕ್ತಿ ವಹಿಸಿ ಚಿಕಿತ್ಸೆ ನೀಡುತ್ತಿರುವುದು ಶ್ಲಾಘನೀಯ ಎಂದರು.

ADVERTISEMENT

ಬೆಳ್ತಂಗಡಿ ತಾಲ್ಲೂಕಿನ ಕಕ್ಕಿಂಜೆ ಗ್ರಾಮದ ಶ್ರೀಕೃಷ್ಣ ಆಸ್ಪತ್ರೆ ನಿರ್ದೇಶಕ ಡಾ. ಮುರುಳಿಕೃಷ್ಣ ಇರ್ವತ್ತಾಯ ಮಾತನಾಡಿ, ಪ್ರತಿಯೊಬ್ಬರಿಗೂ ಆರೋಗ್ಯ ಮುಖ್ಯ. ಹೊಯ್ಸಳ ಆಸ್ಪತ್ರೆಯ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮದಲ್ಲಿ ವಿಷಪೂರಿತ ಹಾವು ಹಾಗೂ ವಿಷಜಂತುಗಳ ಕಚ್ಚಿದಾಗ ಪ್ರಾಥಮಿಕವಾಗಿ ಮಾಡಿಕೊಳ್ಳಬೇಕಾದ ಚಿಕಿತ್ಸೆ ಬಗ್ಗೆ, ಪ್ರಾಥಮಿಕ ಚಿಕಿತ್ಸೆ ನಂತರ ಅನುಸರಿಸಬೇಕಾದ ಮಾರ್ಗಗಳ ಬಗ್ಗೆ ಮಾಹಿತಿ ನೀಡಲಾಗಿದೆ ಎಂದರು.

ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಪತ್ನಿ ಹೊಯ್ಸಳ ಆಸ್ಪತ್ರೆಯ ಆಡಳಿತ ನಿರ್ದೇಶಕಿ ಡಾ. ಅರ್ಪಿತಾ ಸಿಂಹ ಮಾತನಾಡಿ, ಮಲೆನಾಡು ಗುಡ್ಡಗಾಡಿನಿಂದ ಕೂಡಿರುವ ಪ್ರದೇಶ. ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಪ್ರತಿ ಮನೆಯ ಬಾಗಿಲಿಗೆ ವೈದ್ಯಕೀಯ ಸೇವೆ ದೊರೆಯಲಿದೆ. ಸಾರ್ವಜನಿಕರು 8050068994 ಈ ಸಂಖ್ಯೆಗೆ ಕರೆ ಮಾಡಿದಲ್ಲಿ ಹೊಯ್ಸಳ ಆಸ್ಪತ್ರೆಯ ಯೋಗಕ್ಷೇಮ ವಾಹನ ಮನೆ ಬಾಗಿಲಿಗೆ ತೆರಳಿ ರೋಗಿಗಳ ಆರೈಕೆ ಮಾಡುತ್ತದೆ ಎಂದರು.

ಆರೋಗ್ಯ ತಪಾಸಣಾ ಶಿಬಿರದಲ್ಲಿ 176 ಮಂದಿ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದು, 102 ಮಂದಿಗೆ ವಿವಿಧ ರೀತಿಯ ಚಿಕಿತ್ಸೆ ನೀಡಲಾಯಿತು. 125 ಮಂದಿಗೆ ಆಸ್ಪತ್ರೆಯ ಹೆಲ್ತ್ ಕಾರ್ಡ್‌ಗಳನ್ನು ವಿತರಿಸಲಾಯಿತು.

ತಾಲ್ಲೂಕು ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಪ್ರಿಯಾಂಕ, ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ, ರೋಟರಿ ಸಂಸ್ಥೆ ಅಧ್ಯಕ್ಷ ಎಚ್.ಎನ್. ಪ್ರಸಾದ್, ಕಕ್ಕಿಂಜೆ ಶ್ರೀಕೃಷ್ಣ ಆಸ್ಪತ್ರೆಯ ಅಧೀಕ್ಷಕಿ ಡಾ. ವಂದನಾ ಎಂ.ಇರ್ವತ್ತಾಯ, ಡಾ. ರಾಕೇಶ್ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.