ಕಡೂರು: ತಾಲ್ಲೂಕಿನಾದ್ಯಂತ ಗುರುವಾರವೂ ಉತ್ತಮ ಮಳೆಯಾಗಿದೆ.
ತರೀಕೆರೆ ಭಾಗದ ಸಂತವೇರಿ, ಹೊಸಪೇಟೆ ಭಾಗದಲ್ಲಿಯೂ ಉತ್ತಮ ಮಳೆ ಸುರಿದ ಪರಿಣಾಮ ಬಯಲುಸೀಮೆಯ ಜೀವನಾಡಿ ಮದಗದಕೆರೆಗೆ ನೀರಿನ ಹರಿವು ಹೆಚ್ಚಳವಾಗಿದೆ.
ಬಯಲುಸೀಮೆಯ 30ಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸುವ ಮದಗದಕೆರೆಯಲ್ಲಿ ಗುರುವಾರ ಮಧ್ಯಾಹ್ನದವರೆಗೆ 35 ಅಡಿವರೆಗೆ ನೀರು ಸಂಗ್ರಹವಾಗಿದೆ. ಕೆಲವು ದಿನಗಳ ಹಿಂದೆ ದುರಸ್ತಿ ಸಲುವಾಗಿ ಕೆರೆಯ ತೂಬು ಎತ್ತಿದ್ದ ಪರಿಣಾಮ ಕಡೂರು ಹೊರವಲಯದ ಚಿಕ್ಕಂಗಳ ಕೆರೆ, ಬುಕ್ಕಸಾಗರ ಕೆರೆಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಇದರಿಂದ ಈ ಭಾಗದ ರೈತರಿಗೆ ಅನುಕೂಲವಾಗಿದೆ.
ಮದಗದಕೆರೆ ಮೈದುಂಬಿಕೊಂಡರೆ ಅಂತರ್ಜಲ ವೃದ್ಧಿ, ತೋಟಗಾರಿಕೆ ಬೆಳೆಗಳಾದ ತೆಂಗು, ಅಡಿಕೆ, ಸಾಂಪ್ರದಾಯಿಕ ಬೆಳೆಗಳಾದ ರಾಗಿ, ಭತ್ತು, ಕಬ್ಬು, ಜೋಳ, ಆಲೂಗೆಡ್ಡೆ, ತರಕಾರಿ ಬೆಳೆಗೆ ಅನುಕೂಲವಾಗುತ್ತದೆ. 64 ಅಡಿ ಸಾಮರ್ಥ್ಯದ ಈ ಕೆರೆ, ಸಾಮಾನ್ಯವಾಗಿ ಜುಲೈ ಕಡೆಯ ಭಾಗ ಅಥವಾ ಮಧ್ಯಭಾಗದಲ್ಲಿ ತುಂಬಿ ನಂತರ ತನ್ನ ಸರಣಿ ಕೆರೆಗಳಿಗೂ ನೀರು ಹಾಯಿಸುತ್ತದೆ. ಈ ಬಾರಿಯೂ ಜುಲೈ ಮೊದಲ ವಾರದಲ್ಲಿ ಕೆರೆಗೆ ನೀರಿನ ಮೂಲಗಳಾಗಿರುವ ಆವತಿಹಳ್ಳದ ಹಲಸಿನಮರದ ಹಳ್ಳಿ, ಹಳೇ ಸಿದ್ದರಹಳ್ಳಿ ಭಾಗದಲ್ಲಿ ಉತ್ತಮ ಮಳೆ ಸುರಿಯುತ್ತಿದ್ದು ತಾಯಿಹಳ್ಳದ ಮೂಲಕ ಕೆರೆಗೆ ನೀರು ಹರಿದು ಬರುತ್ತಿದೆ. ಮಳೆಯ ಹೀಗೆಯೇ ಮುಂದುವರೆದರೆ ಜುಲೈ ತಿಂಗಳಿನಲ್ಲಿ ಕೆರೆ ತುಂಬಲಿದೆ ಎನ್ನುತ್ತಾರೆ ಸ್ಥಳೀಯರು.
ನರಸಿಂಹರಾಜಪುರದಲ್ಲಿ ಧಾರಾಕಾರ ಮಳೆ: ತಾಲ್ಲೂಕು ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ಧಾರಾಕಾರ ಮಳೆ ಸುರಿಯಿತು.
ಬುಧವಾರ ರಾತ್ರಿ 9ಕ್ಕೆ ಆರಂಭವಾದ ಮಳೆ ಒಂದು ಗಂಟೆಗೂ ಅಧಿಕ ಕಾಲ ಧಾರಾಕಾರವಾಗಿ ಸುರಿದು, ಮುಖ್ಯರಸ್ತೆಯ ತುಂಬಾ ನೀರು ಹರಿಯಿತು. ಗುರುವಾರ ಬೆಳಿಗ್ಗೆಯೂ ಮಳೆ ಮುಂದುವರೆದಿತ್ತು. ಮಧ್ಯಾಹ್ನದ ನಂತರ ಕಡಿಮೆಯಾಗಿದೆ. ಬುಧವಾರದಿಂದ ಗುರುವಾರ ಬೆಳಿಗ್ಗೆವರೆಗೆ ನರಸಿಂಹರಾಜಪುರದಲ್ಲಿ 9.16 ಸೆ.ಮೀ, ಬಾಳೆಹೊನ್ನೂರಿನಲ್ಲಿ 7.7 ಸೆ.ಮೀ ಹಾಗೂ ಮೇಗರಮಕ್ಕಿಯಲ್ಲಿ 5.9 ಸೆ.ಮೀ ಮಳೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.