ADVERTISEMENT

ಚಿಕ್ಕಮಗಳೂರು | ಏಳು ದಿನ ಮಳೆ ಅಬ್ಬರ: ಹಾನಿ ಅಪಾರ

ವಾರದಲ್ಲಿ 33 ಸೆಂಟಿ ಮೀಟರ್ ಮಳೆ: ನಲುಗಿದ ಮಲೆನಾಡು

ವಿಜಯಕುಮಾರ್ ಎಸ್.ಕೆ.
Published 22 ಜುಲೈ 2024, 8:17 IST
Last Updated 22 ಜುಲೈ 2024, 8:17 IST
ಮಳೆ ನೀರಿನಿಂದ ಆವೃತವಾಗಿದ್ದ ಶೃಂಗೇರಿಯ ಭಾರತೀತೀರ್ಥ ರಸ್ತೆ 
ಮಳೆ ನೀರಿನಿಂದ ಆವೃತವಾಗಿದ್ದ ಶೃಂಗೇರಿಯ ಭಾರತೀತೀರ್ಥ ರಸ್ತೆ    

ಚಿಕ್ಕಮಗಳೂರು: ವಾರದಿಂದ ಸುರಿದ ಮಹಾಮಳೆಗೆ ಜಿಲ್ಲೆಯಲ್ಲಿ 190 ಕುಟುಂಬಗಳು ನೆಲೆ ಕಳೆದುಕೊಂಡಿವೆ. 281 ರೈತರ ಬೆಳೆ ಹಾಳಾಗಿದ್ದು, 188 ಕಿಲೋ ಮೀಟರ್ ರಸ್ತೆ ಹಾಳಾಗಿದೆ. 52 ಸೇತುವೆಗಳು ಹಾನಿಗೀಡಾಗಿವೆ.

ಕಳೆದ ಏಳು ದಿನಗಳಲ್ಲಿ ವಾಡಿಕೆಯಂತೆ ಜಿಲ್ಲೆಯ ಸರಾಸರಿ ಮಳೆ 12 ಸೆಂಟಿ ಮೀಟರ್ ಆಗಬೇಕಿತ್ತು. ಆದರೆ, 33 ಸೆಂಟಿ ಮೀಟರ್ ಮಳೆಯಾಗಿದೆ. ಅದರಲ್ಲೂ ಚಿಕ್ಕಮಗಳೂರು, ಶೃಂಗೇರಿ, ಮೂಡಿಗೆರೆ, ಕಳಸ, ಕೊಪ್ಪ, ಎನ್.ಆರ್.ಪುರ ತಾಲ್ಲೂಕನ್ನು ಏಳು ದಿನ ಮಳೆಯಲ್ಲೇ ಮುಳುಗಿಸಿತ್ತು. ಶೃಂಗೇರಿ ತಾಲ್ಲೂಕಿನಲ್ಲಿ ಏಳು ದಿನಗಳಲ್ಲಿ ವಾಡಿಕೆ ಮಳೆ 29 ಸೆಂಟಿ ಮೀಟರ್ ಆಗಬೇಕಿತ್ತು. ಆದರೆ, ಅತೀ ಹೆಚ್ಚು 74 ಸೆಂಟಿ ಮೀಟರ್ ಮಳೆಯಾಗಿದೆ.

ಈ ಮಳೆ ಮಲೆನಾಡನ್ನು ನಡುಗಿಸಿದ್ದು, 9 ಕಡೆಗಳಲ್ಲಿ ಹೆಚ್ಚಿನ ಪ್ರಮಾಣದ ಭೂಕುಸಿತ ಉಂಟಾಗಿದೆ. ಇದಲ್ಲದೇ ಸಣ್ಣ–ಪುಟ್ಟದಾಗಿ ರಸ್ತೆ ಬದಿ ಹಲವು ಕಡೆ ಮಣ್ಣು ಜರಿದಿದೆ. ಮರಗಳು, ವಿದ್ಯುತ್ ಕಂಬಗಳು ಮನೆಗಳ ಮೇಲೆಯೇ ಕುಸಿದು ಬಿದ್ದಿವೆ. ಇದರೊಂದಿಗೆ ಬಿರುಗಾಳಿ ಮತ್ತು ವಿಪರೀತ ಮಳೆಯಿಂದಲೂ ಗೋಡೆಗಳು ಕುಸಿದು ಹಲವರು ಮನೆ ಕಳೆದುಕೊಂಡಿದ್ದಾರೆ.

ADVERTISEMENT

ಜೂನ್‌ 1ರಿಂದ ಈವರೆಗೆ ಒಟ್ಟಾರೆ 190 ಕುಟುಂಬಗಳು ಮನೆ ಕಳೆದುಕೊಂಡು ಬೀದಿಗೆ ಬಿದ್ದಿವೆ. ಚಿಕ್ಕಮಗಳೂರು ತಾಲ್ಲೂಕಿನಲ್ಲೇ ಅತೀ ಹೆಚ್ಚು 44 ಮನೆಗಳಿಗೆ ಹಾನಿಯಾಗಿದ್ದು, ಮೂಡಿಗೆರೆ ತಾಲ್ಲೂಕಿನಲ್ಲಿ 45 ಮತ್ತು ಬಯಲು ಸೀಮೆಯಾದ ಕಡೂರು ತಾಲ್ಲೂಕಿನಲ್ಲೂ 23 ಮನೆಗಳಿಗೆ ಹಾನಿಯಾಗಿದೆ. ಒಟ್ಟು ನಾಲ್ಕು ಹಸುಗಳೂ ಮೃತಪಟ್ಟಿವೆ.

ಇದಲ್ಲದೇ ಏಪ್ರಿಲ್ 1ರಿಂದ ಮೇ 31ರವರೆಗೆ ಮುಂಗಾರು ಪೂರ್ವ ಮಳೆಯಲ್ಲೂ 91 ಮನೆಗಳು ಹಾನಿಗೀಡಾಗಿದ್ದು,  ಮರ ಮತ್ತು ವಿದ್ಯುತ್ ಕಂಬ ಬಿದ್ದು ನಾಲ್ವರು ಮೃತಪಟ್ಟಿದ್ದರು. ಮೂರು ಜಾನುವಾರುಗಳೂ ಬಲಿಯಾಗಿದ್ದವು.  

ಕೊಪ್ಪದ ಕುಂಚೂರು ಘಾಟಿಯಲ್ಲಿ ಧರೆ ಕುಸಿದಿರುವುದು
188 ಕಿಲೋ ಮೀಟರ್ ರಸ್ತೆ ಹಾನಿ
ವಿಪರೀತ ಮಳೆಗೆ ಜಿಲ್ಲೆಯಲ್ಲಿ 188 ಕಿಲೋ ಮೀಟರ್ ರಸ್ತೆ ಹಾಳಾಗಿದೆ. ಅದರಲ್ಲಿ 8 ಕಿಲೋ ಮೀಟರ್ ಲೋಕೋಪಯೋಗಿ ಇಲಾಖೆ ರಸ್ತೆಯಾಗಿದ್ದರೆ 180 ಕಿಲೋ ಮೀಟರ್‌ನಷ್ಟು ಜಿಲ್ಲಾ ಪಂಚಾಯಿತಿ ರಸ್ತೆಗಳು ಹಾಳಾಗಿವೆ. ಶೃಂಗೇರಿ ತಾಲ್ಲೂಕಿನಲ್ಲಿ 90 ಕಿಲೋ ಮೀಟರ್ ಕೊಪ್ಪ ತಾಲ್ಲೂಕಿನಲ್ಲಿ 79 ಕಿಲೋ ಮೀಟರ್ ರಸ್ತೆ ಹಾನಿಗೀಡಾಗಿದೆ. ಮೂರು ನೀರಿನ ಟ್ಯಾಂಕ್‌ಗಳು 9 ಶಾಲಾ ಕಟ್ಟಡಗಳು 8 ಸರ್ಕಾರಿ ಕಟ್ಟಡಗಳಿಗೆ ಹಾನಿಯಾಗಿದೆ. ರಸ್ತೆ ಹಾಳಾಗಿರುವುದರಿಂದ ₹44 ಕೋಟಿ ನಷ್ಟವಾಗಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಮುರಿದ 52 ಸೇತುವೆ
ಭಾರಿ ಮಳೆಯಲ್ಲಿ ಹಳ್ಳ–ಕೊಳ್ಳಗಳು ನದಿಗಳು ಉಕ್ಕಿ ಹರಿದಿದ್ದರಿಂದ 52 ಸೇತುವೆಗಳಿಗೆ ಹಾನಿಯಾಗಿದೆ. ಲೋಕೋಪಯೋಗಿ ಇಲಾಖೆ 36 ಮತ್ತು ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ 16 ಸೇತುವೆಗಳು ಮುರಿದಿದ್ದು ಮೂಡಿಗೆರೆ ತಾಲ್ಲೂಕಿನಲ್ಲೇ ಅತೀ ಹೆಚ್ಚು 19 ಸೇತುವೆಗಳು ಹಾಳಾಗಿವೆ. ಸೇತುವೆ ಹಾನಿಯಿಂದ ₹32.43 ಕೋಟಿಯಷ್ಟು ನಷ್ಟವಾಗಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಮೂರು ಸಾವಿರ ವಿದ್ಯುತ್ ಕಂಬ ಹಾನಿ
ಮಳೆಯ ಆರ್ಭಟಕ್ಕೆ 3538 ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು 70.76 ಕಿಲೋ ಮೀಟರ್‌ನಷ್ಟು ವಿದ್ಯುತ್ ತಂತಿ ಹಾಳಾಗಿದೆ. ಹಲವೆಡೆ ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದಿದ್ದರೆ ಕೆಲವೆಡೆ ಜೋರು ಗಾಳಿಗೆ ವಿದ್ಯುತ್ ಕಂಬಗಳೇ ಕುಸಿದಿವೆ. ಇದರಿಂದಾಗಿ ವಿದ್ಯುತ್ ತಂತಿಗಳು ತುಂಡಾಗಿವೆ. ₹5.5 ಕೋಟಿ ಮೌಲ್ಯದ ವಿದ್ಯುತ್ ಕಂಬ ಮತ್ತು ₹50 ಲಕ್ಷ ಮೌಲ್ಯದ ವಿದ್ಯುತ್ ತಂತಿ ಹಾಳಾಗಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಹಗಲು–ರಾತ್ರಿ ಲೆಕ್ಕಿಸದೆ ಮಳೆಯ ನಡುವೆಯೂ ದುರಸ್ತಿ ಕಾರ್ಯವನ್ನು ಮೆಸ್ಕಾಂ ಸಿಬ್ಬಂದಿ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.