ADVERTISEMENT

ಚತುಷ್ಪಥ ರಸ್ತೆ ಕಾಮಗಾರಿ | ವೃತ್ತ ನಿರ್ಮಾಣ: ಅಪಘಾತದ ಅಪಾಯ

ರಾಘವೇಂದ್ರ ಕೆ.ಎನ್
Published 27 ಏಪ್ರಿಲ್ 2025, 5:24 IST
Last Updated 27 ಏಪ್ರಿಲ್ 2025, 5:24 IST
ಶೃಂಗೇರಿ ತಾಲ್ಲೂಕಿನ ಪಟ್ಟಣದ ವೀರಪ್ಪಗೌಡ ವೃತ್ತದ ಬಳಿ ನಡೆಸಿರುವ ರಸ್ತೆ ಕಾಮಗಾರಿ
ಶೃಂಗೇರಿ ತಾಲ್ಲೂಕಿನ ಪಟ್ಟಣದ ವೀರಪ್ಪಗೌಡ ವೃತ್ತದ ಬಳಿ ನಡೆಸಿರುವ ರಸ್ತೆ ಕಾಮಗಾರಿ   

ಶೃಂಗೇರಿ: ಪಟ್ಟಣದ ಮೂಲಕ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ವೀರಪ್ಪಗೌಡ ವೃತ್ತದ (ಶಂಕರಾಚಾರ್ಯ ವೃತ್ತ) ಬಳಿಯ ರಸ್ತೆ ನಿರ್ಮಾಣ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಅಪಘಾತ ವಲಯವಾಗಿ ಮಾರ್ಪಡುವ ಸಾಧ್ಯತೆಗಳಿಗೆ ಎಂದು ಸ್ಥಳೀಯರು ದೂರಿದ್ದಾರೆ.

ಶೃಂಗೇರಿ- ಆಗುಂಬೆ ಕಡೆಯಿಂದ ಬರುವ ರಾಜ್ಯ ಹೆದ್ದಾರಿ, ಇನ್ನೊಂದು ಭಾಗದಲ್ಲಿ ಶೃಂಗೇರಿ- ಜಯಪುರ ಕಡೆಯಿಂದ ಬರುವ ರಾಜ್ಯ ಹೆದ್ದಾರಿ, ಶಿವಮೊಗ್ಗ-ಮಂಗಳೂರು ಕಡೆಗೆ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆ, ಮಧ್ಯದಲ್ಲಿ ವೀರಪ್ಪಗೌಡ ವೃತ್ತವಿದ್ದು, ವಾಹನ ಸವಾರರಿಗೆ ವೃತ್ತವನ್ನು ಬಳಸಿಹೋಗಲು ತೊಡಕು ಉಂಟಾಗುತ್ತದೆ ಎಂದು ಎಂಬುದು ವಾಹನ ಸವಾರರ ಅಭಿಪ್ರಾಯ.

ಈ ವೃತ್ತದ ಒಂದು ಪಾರ್ಶ್ವದಲ್ಲಿ ನರ್ಸಿಂಗ್ ಶಾಲೆಯಿದ್ದು ಮತ್ತೊಂದು ಪಾರ್ಶ್ವದಲ್ಲಿ ವಸತಿಗೃಹ ಹಾಗೂ ಆದಿಚುಂಚನಗಿರಿ ಮಠಕ್ಕೆ ಹೋಗುವ ಪ್ರವೇಶದ್ವಾರವಿದೆ. ಮತ್ತೊಂದೆಡೆ ಪ್ರವಾಸಿ ಕೇಂದ್ರದ ಸಮುಚ್ಚಯ ಹಾಗೂ ಜಲಮಾಪನ ಕೇಂದ್ರ ಇರುವುದರಿಂದ ನಾಲ್ಕು ದಿಕ್ಕುಗಳಲ್ಲಿ ಬರುವ ವಾಹನ ಸವಾರರಿಗೆ ತೊಂದರೆ ಉಂಟಾಗದಂತೆ ವಿಶಾಲವಾದ ವೃತ್ತ ನಿರ್ಮಿಸಬೇಕು. ವೃತ್ತವು ಶಿವಮೊಗ್ಗ-ಮಂಗಳೂರು ಕಡೆಗೆ ಹೋಗುವ ಚತುಷ್ಪತ ರಸ್ತೆಯ ಮಧ್ಯದಲ್ಲಿಯೇ ನೇರವಾಗಿ ಹಾದುಹೋಗಿದೆ.

ADVERTISEMENT

ರಸ್ತೆಯ ಪಕ್ಕದಲ್ಲಿಯೇ ತಡೆಗೋಡೆ ನಿರ್ಮಿಸಲಾಗಿದೆ. ತಡೆಗೋಡೆ ನಿರ್ಮಿಸಿರುವುದರಿಂದ ಶೃಂಗೇರಿ ಅಥವಾ ಆಗುಂಬೆ ಕಡೆಯಿಂದ ಬರುವ ವಾಹನ ಸವಾರರಿಗೆ ತಡೆಗೋಡೆಯೇ ಅಡ್ಡವಾಗುವುದರಿಂದ ಎದುರಿನಿಂದ ಬರುವ ವಾಹನ ಸವಾರರಿಗೆ ಗಲಿಬಿಲಿಯಾಗಿ ಅಪಘಾತ ಉಂಟಾಗುವ ಸಾಧ್ಯತೆ ಇದೆ. ಈಗಾಗಲೇ ಸಣ್ಣಪುಟ್ಟ ಅಪಘಾತಗಳು ಉಂಟಾಗಿವೆ. ಶೃಂಗೇರಿಗೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಬರುವುದರಿಂದ ವೃತ್ತವನ್ನು ವೈಜ್ಞಾನಿಕವಾಗಿ ನಿರ್ಮಿಸಬೇಕು. ಕೆಲವೆಡೆ ಜಾಗವನ್ನು ಖಾಸಗಿಯವರಿಗೆ ಬಿಟ್ಟು ಅಂಕುಡೊಂಕಾಗಿ ರಸ್ತೆ ನಿರ್ಮಿಸಿರುವ ಬಗ್ಗೆಯೂ ಆಕ್ಷೇಪ ವ್ಯಕ್ತವಾಗಿದೆ. 

ಉಮೇಶ್ ಪುದುವಾಳ್

ವೃತ್ತವನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದೆ. ಶೃಂಗೇರಿ-ಆಗುಂಬೆ ಮಾರ್ಗದಿಂದ ಬರುವ ವಾಹನ ಸವಾರರಿಗೆ ನಿರ್ಮಿಸಿದ ತಡೆಗೋಡೆಯೇ ಅಡ್ಡವಾಗುತ್ತದೆ. ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಗಮನ ಹರಿಸಬೇಕು ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಉಮೇಶ್ ಪುದುವಾಳ್ ಹೇಳಿದರು.

ಪಟ್ಟಣದ ಹೊರವಲಯದಲ್ಲಿ ಈ ಹಿಂದೆ ನಿರ್ಮಾಣ ಮಾಡಿದ್ದ ವೃತ್ತವನ್ನು ಚತುಷ್ಪತ ರಸ್ತೆ ಕಾಮಗಾರಿ ಸಂದರ್ಭದಲ್ಲಿ ತೆಗೆಯಲಾಗಿದೆ. ಶೃಂಗೇರಿಗೆ ಬರುವ ಪ್ರವಾಸಿಗರಿಗೆ ಸ್ವಾಗತ ಕೋರುವ ಈ ವೃತ್ತವು ಸುಸಜ್ಜಿತವಾಗಿ ನಿರ್ಮಾಣ ಮಾಡಬೇಕು ಎಂದು ಪಟ್ಟಣ ಪಂಚಾಯಿತಿ ನಾಮ ನಿರ್ದೇಶಿತ ಸದಸ್ಯ ದಿನೇಶ್ ಶೆಟ್ಟಿ ಒತ್ತಾಯಿಸಿದರು.

ದಿನೇಶ್ ಶೆಟ್ಟಿ

‘ಎಚ್ಚರಿಕೆ ಫಲಕ ಅಳವಡಿಕೆ’

ರಾಷ್ಟ್ರೀಯ ಹೆದ್ದಾರಿ 169ರ ಚತುಷ್ಪಥ ರಸ್ತೆ ಕಾಮಗಾರಿ ಈ ಭಾಗದಲ್ಲಿ ನಿರ್ಮಾಣವಾಗುತ್ತಿದ್ದು ಜಯಪುರ ಮತ್ತು ಆಗುಂಬೆ ರಸ್ತೆ ಎತ್ತರವಾಗಿರುವುದರಿಂದ ಸಮಸ್ಯೆಯಾಗಿದೆ. ಈಗ ಆ ಎತ್ತರಕ್ಕೆ ತಕ್ಕಂತೆ ಸಾಧ್ಯವಾದಷ್ಟು ವೃತ್ತ ನಿರ್ಮಿಸುತ್ತಿದ್ದೇವೆ. ವೃತ್ತದ ಬಳಿ ಅಪಘಾತವಾಗದಂತೆ ರಸ್ತೆಯನ್ನು ‌ನಿರ್ಮಾಣ ಮಾಡುತ್ತೇವೆ ಹಾಗೂ ವೃತ್ತವನ್ನು ಬಳಸಿ ವಾಹನಗಳು ಸಂಚರಿಸುವ ಎಚ್ಚರಿಕೆ ಮಾರ್ಗಸೂಚಿ ಫಲಕಗಳನ್ನು ಅಳವಡಿಸಲಾಗುತ್ತದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ್ ಕೆ.ವಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.