
ಕಳಸ: ದಕ್ಷಿಣ ಕಾಶಿ ಎಂದೇ ಹೆಸರಾಗಿರುವ ಕಳಸ ನಗರದ ಪುರಾಣ ಪ್ರಸಿದ್ಧ ಶ್ರೀಕಳಸೇಶ್ವರ ದೇವಾಲಯದಲ್ಲಿ ಇತಿಹಾಸ ಸಂಶೋಧಕ ಎಚ್.ಆರ್. ಪಾಂಡುರಂಗ ಅವರು, ಅಪ್ರಕಟಿತ ಬೆಳ್ಳಿ ಶಾಸನವನ್ನು ಶೋಧನೆ ಮಾಡಿ ಐತಿಹಾಸಿಕ ಕಳಸ ಸೀಮೆಯ ರಾಜಕೀಯ ಇತಿಹಾಸದ ಮೇಲೆ ಹೊಸಬೆಳಕು ಚೆಲ್ಲಿದ್ದಾರೆ.
ಕಳಸೇಶ್ವರ ದೇವಾಲಯದ ಗಿರಿಜಾಕಲ್ಯಾಣ ಹಾಗೂ ರಥೋತ್ಸವದ ವಿಶೇಷ ಪೂಜಾ ಸಂದರ್ಭಗಳಲ್ಲಿ ಮಾತ್ರ ಬಳಸಲಾಗುವ ಷಡ್ಭುಜಾಕೃತಿಯ ಬೆಳ್ಳಿ ತಟ್ಟೆಯ ಒಳಭಾಗದಲ್ಲಿ ವಿಜಯನಗರೋತ್ತರ ಕಾಲದ ಐದು ಸಾಲಿನ ಕನ್ನಡ ಲಿಪಿಯ ಶಾಸನ ಬರಹ ಕಂಡುಬಂದಿದೆ.
ಬಹುಧಾನ್ಯ ಸಂವತ್ಸರದಲ್ಲಿ ಬೇಲೂರು ಕೃಷ್ಣಪ್ಪ ನಾಯಕರ ಮಗ ವೆಂಕಟಾದ್ರಿ ನಾಯಕರು ಕಳಸದ ಶ್ರೀಕಳಸನಾಥ ದೇವರಿಗೆ ಬೆಳ್ಳಿಯ ಪೂಜಾತಟ್ಟೆಯನ್ನು (ತಬಿಕು) ಶಿವಾರ್ಪಿತವಾಗಿ ಭಕ್ತಿಯಿಂದ ಸಮರ್ಪಿಸಿದರು ಎಂಬ ಉಲ್ಲೇಖದ ಶಾಸನವಿದೆ. ಈ ಬೆಳ್ಳಿ ತಟ್ಟೆಯನ್ನು ಈಗಲೂ ‘ಬೆಳ್ಳಿ ತಬಿಕು’ ಎಂದೇ ಕರೆಯಲಾಗುತ್ತದೆ.
ಈ ಶಾಸನದ ಶೋಧನೆಯಿಂದ, ವಿಜಯನಗರ ಸಾಮ್ರಾಜ್ಯದ ಅಮರ ನಾಯಕರಾಗಿ ಬೇಲೂರಿನಲ್ಲಿ ಆಡಳಿತ ನಡೆಸುತ್ತಿದ್ದ ಬೇಲೂರು ನಾಯಕರು, ಕೆಳದಿ ನಾಯಕರಿಗಿಂತ ಮೊದಲೇ-ಕಳಸ ಸೀಮೆಯಲ್ಲಿ ಆಡಳಿತ ನಡೆಸುತ್ತಿದ್ದರು ಹಾಗೂ ಶ್ರೀಕಳಸನಾಥ ದೇವರ ಪರಮಭಕ್ತರಾಗಿದ್ದರು ಎಂಬ ಐತಿಹಾಸಿಕ ಸತ್ಯಕ್ಕೆ ಸಾಕ್ಷ್ಯ ದೊರೆತಂತಾಗಿದೆ.
ಈ ಬೆಳ್ಳಿ ತಟ್ಟೆ ಶಾಸನವು ಬೇಲೂರು ನಾಯಕ ಮನೆತನದ ದೊರೆ ಎರಡನೇ ವೆಂಕಟಾದ್ರಿ ನಾಯಕನ (ಕ್ರಿ.ಶ.1626-1643) ಆಡಳಿತ ಕಾಲದ ಸರಿ ಸುಮಾರು ಕ್ರಿ.ಶ. 1638ನೇ ತೇದಿಯ ಶಾಸನವಾಗಿರಬಹುದೆಂದು ಸಂಶೋಧಕ ಪಾಂಡುರಂಗ ಅಭಿಪ್ರಾಯಪಟ್ಟಿದ್ದಾರೆ.
ಈ ಮೊದಲು ಹೊರನಾಡು ಮತ್ತು ಸಂಸೆ ಗ್ರಾಮಗಳಲ್ಲಿ ಇದೇ 2ನೇ ವೆಂಕಟಾದ್ರಿ ನಾಯಕನ ಮೊಮ್ಮಗ ಮೂರನೇ ವೆಂಕಟಾದ್ರಿ ನಾಯಕನ ಆಡಳಿತ ಕಾಲದ ಒಂದು ಶಿಲಾಶಾಸನ (10-10-1675) ಹಾಗೂ ಎರಡು ತಾಮ್ರ ಶಾಸನಗಳು (19-11-1675) ದೊರೆತಿರುವುದನ್ನು ಗಮನಿಸಬೇಕಾಗುತ್ತದೆ. ಈ ಶಾಸನದಲ್ಲಿ ಶಕವರ್ಷದ ಉಲ್ಲೇಖ ಇರದಿರುವುದರಿಂದ ನಿಖರ ಕಾಲಮಾನದ ಕುರಿತು ಹೆಚ್ಚಿನ ಸಂಶೋಧನೆ ನಡೆದಿದೆ ಎಂದು ಸಂಶೋಧಕ ಪಾಂಡುರಂಗ ತಿಳಿಸಿದ್ದಾರೆ.
ಈ ಶಾಸನ ಶೋಧನ, ಕ್ಷೇತ್ರ ಕಾರ್ಯ ಸಹಕಾರ ನೀಡಿದ ಕಳಸೇಶ್ವರ ದೇವಾಲಯದ ಅಂದಿನ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎನ್. ಯೋಗೇಶ್, ಅರ್ಚಕ ಗಣೇಶ ಐತಾಳ್, ಉಗ್ರಾಣಿ ದಿ. ಪ್ರಭಾಕರ್, ದೇವಕಾರಿ ಶಿವಪ್ರಸಾದ್ ಹಾಗೂ ಕಳಸೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿದ್ದ ಹಂದಿಗೋಡು ರಾಮಚಂದ್ರ ಹೆಬ್ಬಾರ್ ಅವರಿಗೆ ಮತ್ತು ಶಾಸನ ಅಧ್ಯಯನಕ್ಕೆ ಮಾರ್ಗದರ್ಶನ ಮಾಡಿದ ಬಿ. ರಾಜಶೇಖರಪ್ಪ, ಶಾಸನ ತಜ್ಞರು ಚಿತ್ರದುರ್ಗ ಹಾಗೂ ಎಚ್.ಎಂ. ನಾಗರಾಜ ರಾವ್, ಶಾಸನ ತಜ್ಞರು, ಮೈಸೂರು ಇವರುಗಳಿಗೂ ಪಾಂಡುರಂಗ ಕೃತಜ್ಞತೆ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.