ADVERTISEMENT

ಚಿಕ್ಕಮಗಳೂರು | ಆನೆ ಸಾಫ್ಟ್ ರಿಲೀಸ್: ಹೊಸ ಜಾಗ ಹುಡುಕಾಟ ಆರಂಭಿಸಿದ ಅರಣ್ಯ ಇಲಾಖೆ

ವಿಜಯಕುಮಾರ್ ಎಸ್.ಕೆ.
Published 3 ಮಾರ್ಚ್ 2026, 6:58 IST
Last Updated 3 ಮಾರ್ಚ್ 2026, 6:58 IST
ಮೂಡಿಗೆರೆ ತಾಲ್ಲೂಕಿನ ಕಸ್ಕೆಬೈಲು ಬಳಿ ಇರುವ ಬೀಟಮ್ಮ ಗುಂಪಿನ ಆನೆಗಳು
ಮೂಡಿಗೆರೆ ತಾಲ್ಲೂಕಿನ ಕಸ್ಕೆಬೈಲು ಬಳಿ ಇರುವ ಬೀಟಮ್ಮ ಗುಂಪಿನ ಆನೆಗಳು   

ಚಿಕ್ಕಮಗಳೂರು: ಆನೆ ಮತ್ತು ಮಾನವ ಸಂಘರ್ಷ ಕಡಿಮೆ ಮಾಡಲು ಕಾಡಾನೆ ಸಾಫ್ಟ್‌ ರಿಲೀಸ್ ಕೇಂದ್ರ ತೆರೆಯಲು ಸೂಕ್ತ ಜಾಗ ನಿಗದಿಯೇ ಅರಣ್ಯ ಇಲಾಖೆಗೆ ತಲೆನೋವಾಗಿದ್ದು, ಮತ್ತೊಮ್ಮೆ ಜಾಗ ಹುಡುಕಾಟ ಆರಂಭಿಸಿದೆ.

ಜನ ವಸತಿ ಪ್ರದೇಶದಲ್ಲಿ ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಹಿಡಿದು ಅರಣ್ಯಕ್ಕೆ ಈಗಾಗಲೇ ಬಿಡಲಾಗುತ್ತಿದೆ. ಆದರೆ, ಅವು ಆ ಜಾಗಕ್ಕೆ ಹೊಂದಿಕೊಳ್ಳದೆ ಮರಳಿ ಅದೇ ಜಾಗಕ್ಕೆ ತಲುಪಿರುವುದು, ವಾಪಸ್ ಸಾಗುವ ಮಾರ್ಗದಲ್ಲಿ ಆನೆ–ಮಾನವ ಸಂಘರ್ಷಗಳು ನಡೆದಿರುವ ಸಾಕಷ್ಟು ಉದಾಹರಣೆಗಳಿವೆ.

ಆದ್ದರಿಂದ ಹೊಸ ಜಾಗಕ್ಕೆ ಹೊಂದಿಕೊಂಡ ನಂತರ ಬಿಡುಗಡೆ ಮಾಡುವ ವಿಧಾನವನ್ನು ‘ಸಾಫ್ಟ್‌ ರಿಲೀಸ್‌’ ಎಂದು ಅರಣ್ಯ ಇಲಾಖೆ ಹೇಳುತ್ತಿದೆ. ಮಧ್ಯ ಪ್ರದೇಶದಲ್ಲಿ ಕಾಡುಕೋಣಗಳನ್ನು ಈ ರೀತಿ ಸಾಫ್ಟ್‌ ರಿಲೀಸ್ ಕೇಂದ್ರಗಳಲ್ಲಿ ಕೆಲ ದಿನಗಳ ಕಾಲ ಇರಿಸಿ ಆ ಪರಿಸರಕ್ಕೆ ಹೊಂದಿಕೊಂಡ ನಂತರ ಬಿಡುಗಡೆ ಮಾಡುವ ಪದ್ಧತಿ ಅಳವಡಿಸಿಕೊಳ್ಳಲಾಗಿದೆ. ಇದೇ ಪದ್ಧತಿಯನ್ನು ಆನೆಗಳಿಗೆ ಅಳವಡಿಕೆ ಮಾಡಲು ರಾಜ್ಯದ ಅರಣ್ಯ ಇಲಾಖೆ ಯೋಜನೆ ರೂಪಿಸಿದೆ. ಆನೆಗಳನ್ನು ಪರಿಸರಕ್ಕೆ ಹೊಂದಿಸಿ ನಂತರ ಕಾಡಿಗೆ ಬಿಡುವ ಪದ್ಧತಿ ಹೊಸ ಪ್ರಯೋಗ ಎಂದು ಅಧಿಕಾರಿಗಳು ಹೇಳುತ್ತಾರೆ.

ADVERTISEMENT

ಈ ಯೋಜನೆಗೆ 2025–26ನೇ ಸಾಲಿನ ಬಜೆಟ್‌ನಲ್ಲಿ ₹20 ಕೋಟಿಯನ್ನು ಸರ್ಕಾರ ಘೋಷಣೆ ಮಾಡಿದೆ. ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಹಲವೆಡೆ ಜಾಗವನ್ನೂ ಅರಣ್ಯ ಇಲಾಖೆಯ ಉನ್ನತ ಮಟ್ಟದ ತಜ್ಞರ ತಂಡ 2025ರ ಏಪ್ರಿಲ್‌ನಲ್ಲಿ ಪರಿಶೀಲನೆ ನಡೆಸಿತ್ತು. ನರಸಿಂಹರಾಜಪುರ ತಾಲ್ಲೂಕಿನ ಕೂಸ್ಗಲ್ ಅರಣ್ಯ, ಉಂಬ್ಳೆ ಬೈಲು, ಲಕ್ಕವಳ್ಳಿ, ತಣಿಗೆಬೈಲು ಅರಣ್ಯದಲ್ಲಿ ಕೂಡ ಪರಿಶೀಲನೆ ಮಾಡಿತ್ತು.

ಈಗ ₹53 ಕೋಟಿ ಬಿಡುಗಡೆಯಾಗಿದ್ದು, ಸಮಗ್ರ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲಾಗುತ್ತಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಬಾಳೆಹೊನ್ನೂರಿನಲ್ಲಿ ಶನಿವಾರ ತಿಳಿಸಿದ್ದಾರೆ. ಆದರೆ, ಬೇಕಿರುವ ಜಾಗ ಯಾವುದು ಎಂಬುದು ಇನ್ನೂ ಅಂತಿಮವಾಗಿಲ್ಲ.

ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ 500.16 ಚದರ ಕಿಲೋ ಮೀಟರ್ ಹುಲಿ ಆವಾಸಸ್ಥಾನವಾದರೆ, 571.84 ಚದರ ಕಿಲೋ ಮೀಟರ್ ಬಫರ್ ಪ್ರದೇಶವನ್ನು ಹೊಂದಿದೆ. ಇಲ್ಲಿ 35ಕ್ಕೂ ಹೆಚ್ಚು ಹುಲಿಗಳು, 116 ಚಿರತೆಗಳು, 445 ಆನೆಗಳಿವೆ ಎಂದು ಅರಣ್ಯ ಇಲಾಖೆ ಅಂದಾಜಿಸಿದೆ.

ಹುಲಿ ಬೆಕ್ಕು, ಕೆನ್ನಾಯಿ, ಕೆಂದಳಿಲು, ನರಿ, ಕರಡಿ, ಕಾಡು ಕುರಿ, ಕಾಡು ಹಂದಿ, ಕಡವೆ, ಮುಸಿಯಾ, ಕಾಡು ಪಾಪ, ಹಾರುವ ಓತಿ, ಮುಳ್ಳು ಹಂದಿ, ನೀರು ನಾಯಿ, ಪುನುಗಿನ ಬೆಕ್ಕು, ಮೊಸಳೆ ಸೇರಿ ಅಪಾರ ಪ್ರಮಾಣದ ವನ್ಯಜೀವಿ ಸಂಪತ್ತಿದೆ. ಕಾಡುಕೋಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಅವುಗಳು ಜನವಸತಿಯತ್ತ ಬರುತ್ತಿವೆ. ಆನೆ ಸಾಫ್ಟ್ ರಿಲೀಸ್ ಕೇಂದ್ರಕ್ಕೆ ಜಾಗ ನೀಡಿದರೆ ಹುಲಿಗಳ ಆವಾಸ ಸೇರಿ ಬೇರೆ ಪ್ರಾಣಿಗಳಿಗೆ ತೊಂದರೆಯಾಗಬಹುದು ಎಂದು ಅರಣ್ಯ ಇಲಾಖೆ ಆಲೋಚನೆ ನಡೆಸುತ್ತಿದೆ.

‘ಬೇರೆ ಜಿಲ್ಲೆಗಳ ಅರಣ್ಯಗಳಲ್ಲಿ ಸಾಧ್ಯವೇ ಎಂಬ ಪರಿಶೀಲನೆಯನ್ನು ಇಲಾಖೆ ಮಾಡುತ್ತಿದೆ. ರಾಜ್ಯದ ವಿವಿಧೆಡೆ ಎರಡು–ಮೂರು ಜಾಗದಲ್ಲಿ ಪರಿಶೀಲನೆ ನಡೆಯುತ್ತಿದೆ. ಇನ್ನೂ ಯಾವುದೇ ಜಾಗ ಅಂತಿಮವಾಗಿಲ್ಲ’ ಎಂದು ಅರಣ್ಯ ಇಲಾಖೆ ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಮೂರು ಹಂತದಲ್ಲಿ ಆನೆ ಸಾಫ್ಟ್ ರಿಲೀಸ್

ಆನೆ ಸಾಫ್ಟ್ ರಿಲೀಸ್‌ ಕೇಂದ್ರದಲ್ಲಿ ಮೂರು ಹಂತಗಳಲ್ಲಿ ಆನೆಗಳನ್ನು ನಿಗಾ ವಹಿಸಿ ನಂತರ ಕಾಡಿಗೆ ಬಿಡಲಾಗುತ್ತದೆ. ಮೊದಲ 1 ಚದರ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಪಶು ವೈದ್ಯಕೀಯ ಕ್ಲಿನಿಕ್‌ನಲ್ಲಿ ಒಂದು ವಾರ ಇರಿಸಲಾಗುತ್ತದೆ. ಆ ಪರಿಸರಕ್ಕೆ ಹೊಂದಿಕೊಂಡಿದೆ ಎನಿಸಿದಾಗ 5ರಿಂದ 8 ಚದರ ಕಿಲೋ ಮೀಟರ್ ವ್ಯಾಪ್ತಿಯ ಎರಡನೇ ಭಾಗಕ್ಕೆ ಆನೆಗಳನ್ನು ಬಿಡಲಾಗುತ್ತದೆ. ಅಲ್ಲಿ ಹೊಂದಿಕೊಂಡ ಬಳಿಕ 20 ಚದರ ಕಿಲೋ ಮೀಟರ್ ವ್ಯಾಪ್ತಿಗೆ ಬಿಡಲಾಗುತ್ತದೆ. ಅವುಗಳನ್ನು ಅಲ್ಲೇ ಶಾಶ್ವತವಾಗಿ ಬಂಧಿಯಾಗಿ ಇರಿಸುವುದಿಲ್ಲ. ಅಲ್ಲಿನ ಪರಿಸರಕ್ಕೆ ಸಂಪೂರ್ಣ ಹೊಂದಿಕೊಂಡ ಬಳಿಕ ಕಾಡಿಗೆ ಬಿಡಲಾಗುತ್ತದೆ. ಆದ್ದರಿಂದ ಕಾಡಿಗೆ ಹೊಂದಿಕೊಂಡ ಜಾಗದಲ್ಲೇ ಈ ಸಾಫ್ಟ್ ರಿಲೀಸ್ ಕೇಂದ್ರ ನಿರ್ಮಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಮೂಡಿಗೆರೆ ಕಡೆಗೆ ಬಂದ ಭೀಮ, ಕರಡಿ

ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನಲ್ಲಿದ್ದ 40ಕ್ಕೂ ಹೆಚ್ಚು ಆನೆಗಳು ಮೂಡಿಗೆರೆ ತಾಲ್ಲೂಕಿಗೆ ಪ್ರವೇಶ ಪಡೆದಿವೆ. ಅದರಲ್ಲೂ ಭೀಮ ಕರಡಿ ಕೆ.ಪಿ.ಕಾಲರ್ ಬೀಟಮ್ಮ ಭುವನೇಶ್ವರಿ ಸೇರಿ ಸಾಲು ಸಾಲು ಆನೆಗಳು ಬಂದಿವೆ. ಮೊದಲಿಗೆ ಎರಡು ಆನೆಗಳು ಬಂದಿದ್ದು ಅವು ಚಿಕ್ಕಮಗಳೂರು ನಗರದ ಹೊರ ವಲಯದ ನಲ್ಲೂರು ತನಕ ಬಂದಿವೆ. ಅವುಗಳನ್ನು ಹಿಂಬಾಲಿಸಿ 35 ಆನೆಗಳು ಮೂಡಿಗೆರೆ ಗಡಿ ದಾಟಿದವು. ನಂತರ ಭೀಮ ಕರಡಿ ಕೆ.ಪಿ.ಕಾಲರ್ ಎಂದು ಗುರುತಿಸುವ ಆನೆಗಳು ಕೂಡ ಬಂದಿವೆ. ಗೋಣಿಬೀಡು ಕಸ್ಕೆಬೈಲು ಪ್ರದೇಶದಲ್ಲಿವೆ. ‘ಮತ್ತೊಂದೆಡೆ ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ತಣಿಗೆಬೈಲು ವಲಯದಿಂದ ಬಿಂಡಿಗ ಮಲ್ಲೇನಹಳ್ಳಿ ತನಕ ಬಂದಿದ್ದ ಆನೆಗಳು ವಾಪಸ್ ಮುಖ ಮಾಡಿವೆ. ಕೊಪ್ಪ ವಿಭಾಗ ಹೊರತುಪಡಿಸಿ ಚಿಕ್ಕಮಗಳೂರು ವಿಭಾಗಕ್ಕೆ 50 ಆನೆಗಳು ಬಂದಿವೆ. ಚಲನ–ವಲನವನ್ನು ಅರಣ್ಯ ಇಲಾಖೆ ನಿರಂತರವಾಗಿ ಗಮನಿಸುತ್ತಿದೆ. 20 ಆನೆಗಳು ವಾಪಸ್ ಮುಖ ಮಾಡಿವೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.