ADVERTISEMENT

ಶಾಲಾ ಮಕ್ಕಳಿಗೆ ಸ್ತೋತ್ರ ಪಾರಾಯಣ; ಶಿಕ್ಷಣ ಇಲಾಖೆಯಿಂದ ಅನುಮತಿ

ವಿಜಯಕುಮಾರ್ ಎಸ್.ಕೆ.
Published 18 ಡಿಸೆಂಬರ್ 2024, 23:27 IST
Last Updated 18 ಡಿಸೆಂಬರ್ 2024, 23:27 IST
   

ಚಿಕ್ಕಮಗಳೂರು: ಶ್ರೀ ಶಂಕರ ತತ್ವ ಪ್ರಸಾರ ಅಭಿಯಾನದ ಅಂಗವಾಗಿ ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಮೂರು ಸ್ತೋತ್ರ ಪಾರಾಯಣಕ್ಕೆ ಶಾಲಾ ಶಿಕ್ಷಣ ಇಲಾಖೆ ಅನುಮತಿ ನೀಡಿದೆ. 

ಶಂಕರ ಭಗವತ್ಪಾದರು ರಚಿಸಿರುವ ಕಲ್ಯಾಣವೃಷ್ಟಿಸ್ತವ, ಶಿವಪಂಚಾಕ್ಷರ ನಕ್ಷತ್ರಮಾಲಾ ಹಾಗೂ ಲಕ್ಷ್ಮೀನರಸಿಂಹಕರಾವಲಂಭ ಸ್ತೋತ್ರಗಳನ್ನು ವಾರದಲ್ಲಿ ಎರಡು ದಿನ ಮಕ್ಕಳಿಗೆ ಪಾರಾಯಣ ಮಾಡಿಸಲು ಅನುಮತಿ ನೀಡುವಂತೆ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಶಿಕ್ಷಣ ಇಲಾಖೆಗೆ ಆಗಸ್ಟ್‌ 10ರಂದು ಪತ್ರ ಬರೆದಿದ್ದರು.

ಜಿಲ್ಲೆಯ ಎಲ್ಲಾ ಹಿರಿಯ ಪ್ರಾಥಮಿಕ ಶಾಲೆ (6 ಮತ್ತು 7ನೇ ತರಗತಿ) ಹಾಗೂ ಪ್ರೌಢಶಾಲೆಯ (8 ಮತ್ತು 9ನೇ ತರಗತಿ) ವಿದ್ಯಾರ್ಥಿಗಳಿಗೆ ವಾರಕ್ಕೆ 2 ಅವಧಿಗಳನ್ನು ನಿಗದಿಪಡಿಸಿ ಕಲಿಕೆಗೆ ಅವಕಾಶ ಕಲ್ಪಿಸಿಕೊಡುವಂತೆ ಕೋರಿದ್ದರು. ಇದನ್ನು ಆಧರಿಸಿ ಸೆಪ್ಟೆಂಬರ್ 6ರಂದು ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಸುತ್ತೋಲೆ ಹೊರಡಿಸಿದ್ದರು.

ADVERTISEMENT

‘ಈ ಮೂರು ಸ್ತೋತ್ರಗಳನ್ನು ಶಾಲಾ ಪಠ್ಯ ಚಟುವಟಿಕೆಗಳಿಗೆ ತೊಂದರೆ ಆಗದಂತೆ ಷರತ್ತಿಗೆ ಒಳಪಟ್ಟು ಪ್ರವಚನ ಮಾಡಲು ಅನುಮತಿ ನೀಡಲಾಗಿದೆ’ ಎಂದು ತಿಳಿಸಿದ್ದರು. ಎಲ್ಲಾ ಬಿಇಒ ಕಚೇರಿ ಮತ್ತು ಮುಖ್ಯ ಶಿಕ್ಷಕರಿಗೆ ಕಳುಹಿಸಿ ‘ಅಗತ್ಯ ಕ್ರಮಕ್ಕಾಗಿ’ ಎಂದು ಸೂಚಿಸಿದ್ದರು.

‌‘ಶೃಂಗೇರಿಯ ಶಂಕರ ಪೀಠದ ಭಾರತೀತೀರ್ಥ ಸ್ವಾಮೀಜಿ ಅವರು ಸನ್ಯಾಸ ಸ್ವೀಕರಿಸಿದ  ಸುವರ್ಣ ಮಹೋತ್ಸವದ ನಿಮಿತ್ತ ಕಲ್ಯಾಣವೃಷ್ಠಿ ಅಭಿಯಾನ ನಡೆಯುತ್ತಿದೆ. ಬಹುತೇಕ ಶಾಲೆಗಳಲ್ಲಿ ಮಕ್ಕಳಿಗೆ ಸ್ತೋತ್ರ ಪಾರಾಯಣ ಕಲಿಸಲಾಗುತ್ತಿದೆ. ನಮ್ಮ ಸ್ವಯಂ ಸೇವಕರು ಹೆಚ್ಚಿನದಾಗಿ ಇರುವ ಕಡೆಗಳಲ್ಲಿ ಮತ್ತು ನಾವು ಪ್ರಯತ್ನ ಮಾಡಿರುವ ಶಾಲೆಗಳಲ್ಲಿ ಸ್ತೋತ್ರ ಪಾರಾಯಣ ಅಭ್ಯಾಸ ಮಾಡಿಸಲಾಗುತ್ತಿದೆ’ ಎಂದು ಶಂಕರ ತತ್ವ ಪ್ರಸಾರ ಅಭಿಯಾನದ ಉಸ್ತುವಾರಿ ವಹಿಸಿರುವ ಉಮೇಶ್ ಹರಿಹರ ‘ಪ್ರಜಾವಾಣಿ’ಗೆ ವಿವರಿಸಿದರು. ‘ಶಾಲೆಗಳಲ್ಲಿ ಸಮಯ ನೀಡಿದಾಗ ನಮ್ಮ ಅಭಿಯಾನದ ಕಾರ್ಯಕರ್ತರು ಹೋಗಿ ಪಾರಾಯಣ ಅಭ್ಯಾಸ ಮಾಡಿಸುತ್ತಿದ್ದಾರೆ. ಹೆಚ್ಚಿನದಾಗಿ ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ಮತ್ತು ಕಳಸ ತಾಲ್ಲೂಕಿನ ಶಾಲೆಗಳಲ್ಲಿ ನಡೆಯುತ್ತಿದೆ’ ಎಂದು ಹೇಳಿದರು.

‘ಸ್ತೋತ್ರ ತ್ರಿವೇಣಿಯ ಮಹಾ ಸಮರ್ಪಣೆ 2025ರ ಜ.11ರಂದು ಶೃಂಗೇರಿಯಲ್ಲಿ ನಡೆಯಲಿದೆ. ವಿದ್ಯಾರ್ಥಿಗಳು, ಆಸ್ತಿಕರು ಸೇರಿ 50 ಸಾವಿರ ಜನ ಭಾಗವಹಿಸುವ ನಿರೀಕ್ಷೆ  ಇದೆ’ ಎಂದು ತಿಳಿಸಿದರು.

‘ಸುತ್ತೋಲೆ ಹಿಂಪಡೆಯಲಾಗುವುದು’
‘ಸುತ್ತೋಲೆಯನ್ನು ಸೆಪ್ಟೆಂಬರ್‌ನಲ್ಲಿ ಹೊರಡಿಸಲಾಗಿತ್ತು. ಆದರೆ, ಕೆಲವರು ವಿರೋಧ ವ್ಯಕ್ತಪಡಿಸಿದ ಬಳಿಕ ಪ್ರವಚನ ಮಾಡಿಸಿಲ್ಲ’ ಎಂದು ಡಿಡಿಪಿಐ ಜಿ.ಕೆ. ಪುಟ್ಟರಾಜು ತಿಳಿಸಿದರು. ‘ವಿರೋಧ ವ್ಯಕ್ತವಾಗುತ್ತಿರುವ ಬಗ್ಗೆ ಸ್ವಾಮೀಜಿ ಅವರಿಗೂ ತಿಳಿಸಲಾಗಿದೆ. ಅನುಮತಿ ನೀಡಿದ್ದ ಸುತ್ತೋಲೆಯನ್ನು ಇನ್ನೂ ವಾಪಸ್ ಪಡೆದಿಲ್ಲ. ಕೂಡಲೇ ಹಿಂಪಡೆಯಲಾಗುವುದು’ ಎಂದು ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದರು.

ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹೊರಡಿಸಿರುವ ಸುತ್ತೋಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.