
ಆಲ್ದೂರು: ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ಪತ್ತೆ ಹಚ್ಚಿ, ಹೊರಹಾಕುವಂತೆ ಒತ್ತಾಯಿಸಿ ಬಿಜೆಪಿ ಆಲ್ದೂರು ಮಂಡಲ ವತಿಯಿಂದ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಸರ್ಕಲ್ ಇನ್‌ಸ್ಪೆಕ್ಟರ್‌ಗೆ ಶನಿವಾರ ಮನವಿ ಸಲ್ಲಿಸಲಾಯಿತು.
ಬಿಜೆಪಿ ಆಲ್ದೂರು ಮಂಡಲ ಹಾಗೂ ಹೋಬಳಿ ಘಟಕದ ಮುಖಂಡರು, ಆಲ್ದೂರು ಹೋಬಳಿಯ ಸುತ್ತಮುತ್ತಲ ಗ್ರಾಮಗಳು ಮತ್ತು ಎಸ್ಟೇಟ್‌ಗಳಲ್ಲಿ ಬಾಂಗ್ಲಾದೇಶದಿಂದ ಬಂದ ಅಕ್ರಮ ವಲಸಿಗರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ ಎಂದು ದೂರಿದರು.
ಕೂಲಿ ಕಾರ್ಮಿಕರ ಸೋಗಿನಲ್ಲಿ ಮಾದಕ ದ್ರವ್ಯಗಳ ಅಕ್ರಮ ಸಾಗಾಟ, ಕಾಫಿ–ಕಾಳುಮೆಣಸು ಕಳ್ಳತನ, ಅಕ್ರಮವಾಗಿ ಗೋವುಗಳನ್ನು ಸಾಗಿಸಿ ಹತ್ಯೆ ಮಾಡುವಂತಹ ಕೃತ್ಯಗಳಲ್ಲಿ ತೊಡಗಿಕೊಂಡಿದ್ದು, ಇದರಿಂದ ಸ್ಥಳೀಯ ನಿವಾಸಿಗಳ ಶಾಂತಿ ಮತ್ತು ನೆಮ್ಮದಿಗೆ ಭಂಗ ಉಂಟಾಗಿದೆ ಎಂದು ಹೇಳಿದರು.
ಭಾರತ ಸರ್ಕಾರ ಜಾರಿಗೆ ತಂದಿರುವ 2019ರ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅಡಿಯಲ್ಲಿ ಅಕ್ರಮ ವಲಸಿಗರನ್ನು ಗುರುತಿಸಿ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಬಿಜೆಪಿ ಆಲ್ದೂರು ಮಂಡಲದ ಅಧ್ಯಕ್ಷ ರವಿ ಬಸರವಳ್ಳಿ, ಆಲ್ದೂರು ಹೋಬಳಿ ಘಟಕದ ಅಧ್ಯಕ್ಷ ನಾಗೇಶ್ ಭೂತನ ಕಾಡು, ಉಪಾಧ್ಯಕ್ಷರಾದ ಭವ್ಯ ನಟೇಶ್, ಚಂಪಾ ಜಗದೀಶ್, ಮಿಥುನ್ ಹಳಿಯೂರು, ಮುಖಂಡರಾದ ಕೆ.ಎಲ್. ರಾಜು, ಮಂಡಲ ಮಹಿಳಾ ಮೋರ್ಚಾದ ಅಧ್ಯಕ್ಷೆ ಪ್ರತಿಭಾ ನವೀನ್, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಆತ್ಮಿಕ್ ಗೌಡ, ಪದಾಧಿಕಾರಿ ಹರೀಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.