ಕಲ್ಪನಾ
ಚಿಕ್ಕಮಗಳೂರು: ಮರ್ಲೆ ಹೊಸಳ್ಳಿಯಲ್ಲಿ ಕಾನೂನು ಬಾಹಿರವಾಗಿ ನಡೆಸುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಹೋರಾಟ ನಡೆಸುವುದಾಗಿ ತಿಳಿಸಿದ್ದ ರೈತ ಸಂಘದ ಮುಖಂಡರು ಈಗ ಮೌನ ವಹಿಸಿದ್ದಾರೆ ಎಂದು ಮರ್ಲೆ ಹೊಸಹಳ್ಳಿ ರೈತ ಮಹಿಳೆ ಕಲ್ಪನಾ ದೂರಿದರು.
ಕ್ರಷರ್ ಮಾಲೀಕರ ವಿರುದ್ದ ಜಿಲ್ಲಾಧಿಕಾರಿ, ತಹಶೀಲ್ದಾರ್, ಭೂವಿಜ್ಞಾನ ಇಲಾಖೆಗೆ ದೂರು ನೀಡಲಾಗಿದೆ. ಕ್ರಮ ಕೈಗೊಳ್ಳಲು ಗಡುವು ನೀಡಿದ್ದರೂ ಅಧಿಕಾರಿಗಳು ಮೌನ ವಹಿಸಿದ್ದಾರೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.
‘ನಿಯಮಗಳಿಗೆ ವಿರುದ್ಧವಾಗಿ ಮರ್ಲೆ ಹೊಸಳ್ಳಿ ಸಮೀಪ ಕಲ್ಲು ಗಣಿಗಾರಿಕೆ ನಡಸಲಾಗುತ್ತಿದೆ. ಗ್ರಾಮಸ್ಥರ ಜಮೀನುಗಳು 50 ಮೀಟರ್ ಅಂತರದಲ್ಲಿವೆ. ದೂಳು, ಕಲ್ಲಿನ ಚೂರುಗಳು, ಕಲುಷಿತ ನೀರು ಜಮೀನಿಗೆ ಆವರಿಸುತ್ತಿದೆ. ಜಮೀನಲ್ಲಿ ಕೆಲಸ ಮಾಡಲು ಭಯವಾಗುತ್ತಿದೆ. ಕಲ್ಲು ಸ್ಪೋಟಿಸುವ ಶಬ್ದದಿಂದ ಕುರಿ, ಹಸುಗಳು ಗರ್ಭಪಾತವಾಗಿ ಸಾಯುತ್ತಿವೆ’ ಎಂದು ಹೇಳಿದರು.
‘ಈ ನಡುವೆ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ನ್ಯಾಯ ಕೊಡಿಸುವ ಭರವಸೆ ನೀಡಿದ್ದರು. ನಮ್ಮಿಂದ ಎಲ್ಲಾ ದಾಖಲೆಗಳನ್ನು ಪಡೆದಿದ್ದರು. ಗ್ರಾಮಕ್ಕೂ ಬಂದು ಪರಿಶೀಲನೆ ನಡೆಸಿದ್ದರು’ ಎಂದರು.
‘ಜಿಲ್ಲಾ ಕೇಂದ್ರದಲ್ಲಿ ಸುದ್ದಿಗೋಷ್ಠಿಯನ್ನೂ ನಡೆಸಿ ಕ್ರಷರ್ ನಿಲ್ಲಿಸಲು ಅಧಿಕಾರಿಗಳಿಗೆ 15 ದಿನಗಳ ಗಡುವು ನೀಡಿದ್ದರು. ನಿಲ್ಲಿಸದಿದ್ದರೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದರು. ಅದರಂತೆ ಆ.12ರಂದು ಪ್ರತಿಭಟನೆ ನಡೆಸಬೇಕಿತ್ತು. ಆದರೆ, ಯಾರೂ ಬರಲಿಲ್ಲ. ಫೋನ್ ಮಾಡಿದರೆ ಉಡಾಫೆಯಿಂದ ಮಾತನಾಡುತ್ತಿದ್ದು, ಇದರಿಂದ ನೋವಾಗಿದೆ’ ಎಂದು ಹೇಳಿದರು.
‘ರೈತ ಸಂಘದವರನ್ನು ನಂಬಿ ಕ್ರಷರ್ ಮಾಲೀಕರು ಮತ್ತು ರಾಜಕಾರಣಿಯೊಬ್ಬರ ಕೆಂಗಣ್ಣಿಗೂ ಗುರಿಯಾಗಿದ್ದೇವೆ. ನಮ್ಮನ್ನು ನಂಬಿಸಿ ಮೌನವಾಗಿರುವುದು ಅನುಮಾನ ಹುಟ್ಟಿಸಿದೆ. ಗಣಿಗಾರಿಕೆ ನಡೆಸುವವರ ಜತೆಗೆ ಶಾಮೀಲಾಗಿದ್ದಾರೆ ಎಂಬ ಅನುಮಾನ ಮೂಡುತ್ತಿದೆ’ ಎಂದರು.
ಮರ್ಲೆ ಹೊಸಳ್ಳಿ ಗ್ರಾಮಸ್ಥರಿಗೆ ರೈತ ಸಂಘದವರು ನ್ಯಾಯ ಕೊಡಿಸಬೇಕು. ಇಲ್ಲದಿದ್ದರೆ ಹಸಿರು ಶಾಲು ತೆಗೆದಿಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.