ADVERTISEMENT

ಶಿಕ್ಷಣ, ಸಾಹಿತ್ಯದ ಓದು ನಿಮ್ಮ ಮೌಲ್ಯ ವೃದ್ಧಿಸುತ್ತದೆ: ವಿನಯಕುಮಾರ್‌ ಜಿ.ಬಿ.

ಬೀರೂರು ಪಟ್ಟಣದ ಗುರುಭವನದಲ್ಲಿ ಇನ್‌ಸೈಟ್ಸ್‌ ಅಕಾಡೆಮಿ ವತಿಯಿಂದ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 6:31 IST
Last Updated 12 ಜನವರಿ 2026, 6:31 IST
ಬೀರೂರಿನ ಗುರುಭವನದಲ್ಲಿ ಭಾನುವಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್‌ ವಿದ್ಯಾರ್ಥಿಗಳಿಗಾಗಿ ನಡೆದ ಒಂದು ದಿನದ ಉಚಿತ ಕಾರ್ಯಾಗಾರವನ್ನು ಇನ್‌ಸೈಟ್ಸ್‌ ಸಂಸ್ಥೆಯ ಸಂಸ್ಥಾಪಕ ವಿನಯ್‌ ಕುಮಾರ್ ಜಿ.ಬಿ ಉದ್ಘಾಟಿಸಿದರು
ಬೀರೂರಿನ ಗುರುಭವನದಲ್ಲಿ ಭಾನುವಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್‌ ವಿದ್ಯಾರ್ಥಿಗಳಿಗಾಗಿ ನಡೆದ ಒಂದು ದಿನದ ಉಚಿತ ಕಾರ್ಯಾಗಾರವನ್ನು ಇನ್‌ಸೈಟ್ಸ್‌ ಸಂಸ್ಥೆಯ ಸಂಸ್ಥಾಪಕ ವಿನಯ್‌ ಕುಮಾರ್ ಜಿ.ಬಿ ಉದ್ಘಾಟಿಸಿದರು   

ಬೀರೂರು(ಕಡೂರು): ‘ವಿದ್ಯಾರ್ಥಿಗಳಲ್ಲಿ ಮಹತ್ವಾಕಾಂಕ್ಷೆ ಇದ್ದು, ಗುರಿ ಸಾಧಿಸುವ ಛಲದ ಜತೆಗೆ ಉತ್ತಮ ಶಿಕ್ಷಣ ಹಾಗೂ ಸಾಹಿತ್ಯದ ಓದಿನ ತಳಹದಿ ಇದ್ದರೆ ನಿಮ್ಮ ಮೌಲ್ಯ ವೃದ್ಧಿಸುತ್ತದೆ’ ಎಂದು ಐಎಎಸ್‌ ಹಾಗೂ ಕೆಎಎಸ್‌ ತರಬೇತಿ ಅಕಾಡೆಮಿ ಇನ್‌ಸೈಟ್ಸ್‌ನ ಸಂಸ್ಥಾಪಕ ವಿನಯಕುಮಾರ್‌ ಜಿ.ಬಿ. ಅಭಿಪ್ರಾಯಪಟ್ಟರು.

ಬೀರೂರು ಪಟ್ಟಣದ ಗುರುಭವನದಲ್ಲಿ ಭಾನುವಾರ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕಡೂರು ಇವರ ಆಶ್ರಯದಲ್ಲಿ ನಡೆದ ಇನ್‌ಸೈಟ್ಸ್‌ ಐಎಎಸ್‌-ಕೆಎಎಸ್‌ ಬೆಂಗಳೂರು, ದೆಹಲಿ ಕೋಚಿಂಗ್‌ ಅಕಾಡೆಮಿ ವತಿಯಿಂದ ‘ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್‌ ವಿದ್ಯಾರ್ಥಿಗಳಿಗೆ’ ಒಂದು ದಿನದ ಉಚಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣ ಇಲಾಖೆ ನೀಡುವ ಪ್ರತಿಯೊಂದು ಸೌಲಭ್ಯಗಳನ್ನು ಬಳಸಿಕೊಂಡು ಗುರಿ ಈಡೇರಿಸುವತ್ತ ಗಮನ ಹರಿಸುತ್ತಾರೆ. ಸರ್ಕಾರಿ ಹುದ್ದೆಗಳ ಅವಕಾಶ ಇದ್ದರೂ, ಇಲ್ಲದಿದ್ದರೂ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಜಾಣ್ಮೆ ಅವರಲ್ಲಿರುತ್ತದೆ, ಅಂತಹ ವಿದ್ಯಾರ್ಥಿಗಳು ಸಾಧನೆಯತ್ತ ಸಾಗುತ್ತಾರೆ. ಸಾಹಿತ್ಯದ ಪುಸ್ತಕಗಳನ್ನು ಅಭ್ಯಾಸ ಮಾಡುವ ಹವ್ಯಾಸ ಬೆಳೆಸಿಕೊಳ್ಳಿ’ ಎಂದು ಸಲಹೆ ನೀಡಿದರು.

ADVERTISEMENT

ಮುಖ್ಯ ಅತಿಥಿ, ಕಡೂರು ಸಿಪಿಐ ರಫೀಕ್‌ ಎಂ. ಮಾತನಾಡಿ, ‘ದೇಶ ನಮಗೇನು ಮಾಡಿದೆ ಎನ್ನುವುದಕ್ಕಿಂತ ನಾವು ದೇಶಕ್ಕಾಗಿ ನಾವು ಏನು ಮಾಡಿದ್ದೇವೆ ಎನ್ನುವ ಭಾವ ಮುಖ್ಯ. ತಂದೆ–ತಾಯಿ ಮಕ್ಕಳಿಗೆ ಕಷ್ಟದ ಅರಿವಾಗದಂತೆ ಓದಿಸಲು ಪ್ರಯತ್ನಿಸುತ್ತಾರೆ. ಅವರ ಕನಸನ್ನು ನನಸು ಮಾಡುವ ಧ್ಯೇಯ ನಿಮ್ಮದಾಗಿರಬೇಕು’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು‌ ಹೇಳಿದರು.

ಕಡೂರು ತಹಶೀಲ್ದಾರ್‌ ಪೂರ್ಣಿಮಾ ಸಿ.ಎಸ್‌. ಮಾತನಾಡಿ, ‘ಹೆಣ್ಣು ಮಕ್ಕಳಿಗೆ ಸರ್ಕಾರ ಎಲ್ಲ ಕ್ಷೇತ್ರದಲ್ಲೂ ಮೀಸಲಾತಿ ನೀಡಿದೆ. ಆದರೆ, ಅದನ್ನು ಬಳಸಿಕೊಳ್ಳುವವರು ವಿರಳವಾಗಿದ್ದಾರೆ. ಮದುವೆ, ಮಕ್ಕಳು, ಕುಟುಂಬ ಎಲ್ಲರ ಜೀವನದಲ್ಲಿಯೂ ಬರುತ್ತದೆ. ಆದರೆ, ಓದಿನ ಸಮಯ ನಿಮ್ಮ ಬದುಕಿನ ಆರಂಭಿಕ ದಿನಗಳಲ್ಲಿ ಇರುತ್ತದೆ. ಆಸಕ್ತಿ, ಶ್ರದ್ಧೆಯಿಂದ ಕಲಿತು ಉನ್ನತ ಹುದ್ದೆಯಲ್ಲಿ ಹೆಚ್ಚು ಮಹಿಳೆಯರು ಇರುವಂತಾಗಬೇಕು’ ಎಂದರು.

ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ದೇವರಾಜ್‌. ಎಸ್.ಎಸ್ ಪ್ರಾಸ್ತಾವಿಕವಾಗಿ ಮಾತನಾಡಿ, ‘40 ಮಂದಿಗೆ ತರಬೇತಿ ನೀಡುತ್ತಿದ್ದ ಇನ್‌ಸೈಟ್ಸ್‌ನಂತಹ ಒಂದು ಸಂಸ್ಥೆ ಇಂದು, ದೇಶದ ತರಬೇತಿ ಕೇಂದ್ರಗಳ ಪೈಕಿ ಅಗ್ರಸ್ಥಾನ ಹೊಂದಿದೆ. ಪ್ರಸ್ತುತ 7,500 ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದು, ಈ ಕೇಂದ್ರದಲ್ಲಿ ಕಲಿತ 1,800 ಮಂದಿ ದೇಶದ ವಿವಿಧ ರಾಜ್ಯಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ’ ಎಂದರು. 

ಬಾಣಾವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ದೊರೇಶ್‌, ಕಡೂರು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ತಿಮ್ಮಯ್ಯ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 32 ಹಾಸ್ಟೆಲ್‌ಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು

‘ಆರ್ಥಿಕ ಹಿಂದುಳಿದ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಸಂಸ್ಥೆ ಸಿದ್ಧವಿದೆ’

ಯಶಸ್ಸು ಎನ್ನುವುದು ನಿರಂತರ ಪರಿಶ್ರಮದಿಂದ ಬರುತ್ತದೆಯೇ ಹೊರತು ಕೇವಲ ಅದೃಷ್ಟದಿಂದ ಅಲ್ಲ ಗೆಲ್ಲುವವರು ಎಂದಿಗೂ ಸೋಲದವರೇನಲ್ಲ. ಆದರೆ ಎಂದಿಗೂ ಪ್ರಯತ್ನಿಸುವುದನ್ನು ಬಿಡದವರು. ಸಮಯ ಅತ್ಯಂತ ಅಮೂಲ್ಯವಾದ ಸಂಪತ್ತಾಗಿದ್ದು ಪ್ರತಿಭಾವಂತ ಆರ್ಥಿಕ ದುರ್ಬಲ ವರ್ಗದ ವಿದ್ಯಾರ್ಥಿಗಳು ಯಾರೇ ಆಗಲಿ ಅವರು ಐಎಎಸ್‌ ಐಪಿಎಸ್‌ ಕೆಎಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಇಚ್ಚಿಸಿದಲ್ಲಿ ಅಂತಹ ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡಲು ನಮ್ಮ ಸಂಸ್ಥೆ ಸಿದ್ಧವಿದೆ ಎಂದು ಐಎಎಸ್‌ ಹಾಗೂ ಕೆಎಎಸ್‌ ತರಬೇತಿ ಅಕಾಡೆಮಿ ಇನ್‌ಸೈಟ್ಸ್‌ನ ಸಂಸ್ಥಾಪಕ ವಿನಯಕುಮಾರ್‌ ಜಿ.ಬಿ. ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.