ADVERTISEMENT

ಇದು ರಾಜಕಾರಣ ಮಾಡುವ ಸಮಯವೇ?: ಸಿದ್ದರಾಮಯ್ಯಗೆ ಸಿ.ಟಿ.ರವಿ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2021, 20:21 IST
Last Updated 27 ಏಪ್ರಿಲ್ 2021, 20:21 IST
ಶಾಸಕ ಸಿ.ಟಿ.ರವಿ
ಶಾಸಕ ಸಿ.ಟಿ.ರವಿ   

ಚಿಕ್ಕಮಗಳೂರು: ‘ರಾಜ್ಯಪಾಲರು ಸಭೆ ನಡೆಸಲು ಮುಂದಾದರೆ ಅವರಿಗೆ ಸಾಂವಿಧಾನಿಕ ಅಧಿಕಾರ ಇಲ್ಲ ಎನ್ನುತ್ತೀರಿ, ಪ್ರಧಾನಿ ಸಭೆ ಕರೆದರೆ ಅವರೇನು ‘ಹೆಡ್‌ ಮಾಸ್ಟ್ರಾ’ ಎಂದು ಹೇಳುತ್ತೀರಿ. ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರೇ ನಿಮಗೆ ಏನಾಗಿದೆ, ಇದು ರಾಜಕಾರಣ ಮಾಡುವ ಸಮಯವೇ?’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಶಾಸಕ ಸಿ.ಟಿ.ರವಿ ಪ್ರಶ್ನಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇದು ಕರ್ತವ್ಯ ನಿರ್ವಹಿಸುವ ಸಂದರ್ಭ, ಅಧಿಕಾರ ಚಲಾಯಿಸುವ ಸಂದರ್ಭವಲ್ಲ. ಕೋವಿಡ್‌ ಎರಡನೇ ಅಲೆಯಲ್ಲಿ ಏಪ್ರಿಲ್‌ ಮೊದಲವಾರ ಏಕಾಏಕಿ ಪ್ರಕರಣಗಳ ಸಂಖ್ಯೆ 15 ಪಟ್ಟು ಹೆಚ್ಚಾಗಿದೆ. ಹೀಗಾಗಬಹುದು ಎಂದು ಯಾರೂ ಊಹಿಸಿರಲಿಲ್ಲ. ವಿರೋಧ ಪಕ್ಷಗಳು ಕೋವಿಡ್‌ ವಿರುದ್ಧ ಹೋರಾಡುತ್ತಿರುವವರ ವಿರುದ್ಧ ಹೋರಾಡುವ ಸಣ್ಣತನ ಪ್ರದರ್ಶಿಸಬಾರದು, ಸಹಕಾರ ನೀಡಬೇಕು’ ಎಂದು ಕೋರಿದರು

‘ವಿರೋಧ ಪಕ್ಷಗಳ ಧನಾತ್ಮಕ ಸಲಹೆಗಳನ್ನು ನೀಡಿದರೆ ಸಕರಾತ್ಮಕವಾಗಿ ಸ್ವೀಕರಿಸುತ್ತೇವೆ. ನಿರ್ವಹಣೆಯಲ್ಲಿ ವೈಫಲ್ಯವಾಗಿದ್ದರೆ ನಂತರ ಬೊಟ್ಟು ಮಾಡಿ ತೊರಿಸಲಿ’ ಎಂದು ಪ್ರತಿಕ್ರಿಯಿಸಿದರು.

ADVERTISEMENT

‘ಮಾರ್ಚ್‌ನಲ್ಲಿ ರಾಜಕಾರಣಿಗಳು, ಮಾಧ್ಯಮಗಳು ಎಲ್ಲರೂ ಸಿ.ಡಿ ಬಗ್ಗೆ ಚರ್ಚೆ ಮಾಡಿದರೇ ಹೊರತು ಕೋವಿಡ್‌ ಬಗ್ಗೆ ಮುಂಜಾಗ್ರತೆ ವಹಿಸುವ ಕುರಿತು ಯಾರೂ ಚರ್ಚಿಸಿಲ್ಲ. ಎರಡನೇ ಅಲೆ ಹೆಚ್ಚುತ್ತಿದೆ ಸರ್ಕಾರ ನಿಯಂತ್ರಣ ಹೇರಬೇಕು ಎಂದು ಮಾಧ್ಯಮಗಳು, ಪ್ರತಿಪಕ್ಷಗಳು ಸಹಿತ ಯಾರೂ ಒತ್ತಡ ಹೇರುವ ಕೆಲಸ ಮಾಡಲಿಲ್ಲ’ ಎಂದರು.

’ಸರ್ಕಾರದ ನಿರ್ಲಕ್ಷ್ಯ ಜನರ ಸಾವು, ನೋವಿಗೆ ಕಾರಣ’
ಬೆಂಗಳೂರು: ‘ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯ ವರದಿಯನ್ನು ರಾಜ್ಯ ಸರ್ಕಾರ ಸಂಪೂರ್ಣ ನಿರ್ಲಕ್ಷಿಸಿದ್ದು ಜನರ ಸಾವು, ನೋವು, ಸಂಕಟ, ಕಣ್ಣೀರಿಗೆ ಕಾರಣ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಕೇಂದ್ರ ಮತ್ತು ರಾಜ್ಯ ಸರ್ಕಾರ ತಮ್ಮ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯತನದ ಬದಲಿಗೆ ಲಾಕ್‌ಡೌನ್ ಘೋಷಿಸಿ ದುಡಿಯುವ ವರ್ಗ ಮತ್ತು ಸಮುದಾಯಗಳನ್ನು ಹಸಿವಿಗೆ ದೂಡಿವೆ’ ಎಂದರು.

‘ಲಕ್ಷಾಂತರ ಮಂದಿ ಆರೋಗ್ಯ ಸವಲತ್ತು ಸಿಗದೆ ಸಾವು ಬದುಕಿನ ನಡುವೆ ಸೆಣಸುತ್ತಿದ್ದಾರೆ. ಇದರ ಸಂಪೂರ್ಣ ಹೊಣೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಹೊತ್ತುಕೊಳ್ಳಬೇಕು’ ಎಂದರು.

‘ರಾಜ್ಯ ಸರ್ಕಾರ ಎಲ್ಲದರಲ್ಲೂ ಸುಳ್ಳು ಹೇಳುತ್ತಿದೆ. ಸಾವಿನ ಸಂಖ್ಯೆಯನ್ನೂ ಮುಚ್ಚಿಡುತ್ತಿದೆ. ಸರ್ಕಾರದ ಲೆಕ್ಕಕ್ಕೂ, ಬಿಬಿಎಂಪಿ ನೀಡುವ ಲೆಕ್ಕಕ್ಕೂ, ಅಂಕಿ-ಸಂಖ್ಯೆ ಇಲಾಖೆಯ ಲೆಕ್ಕಕ್ಕೂ ಭಾರೀ ವ್ಯತ್ಯಾಸವಿದೆ. ಆ ಮೂಲಕ, ತನ್ನ ಲೋಪಗಳಿಗೆ ತೇಪೆ ಹಾಕಿಕೊಳ್ಳಲು ಸರ್ಕಾರ ಯತ್ನಿಸುತ್ತಿದೆ’’ ಎಂದು ದೂರಿದರು.

‘ತಜ್ಞ ವೈದ್ಯ ದೇವಿಪ್ರಸಾದ್ ಶೆಟ್ಟಿ ಅವರ ಪ್ರಕಾರ ಸೋಂಕಿತರ ಪ್ರಮಾಣ ಇನ್ನೂ ಐದು ಪಟ್ಟು ಹೆಚ್ಚಿದೆ. ಕೋವಿಡ್ ಪರೀಕ್ಷೆಗಳು ಕಡಿಮೆ ನಡೆಯುತ್ತಿರುವುದರಿಂದ ಪಾಸಿಟಿವ್ ಪ್ರಕರಣಗಳ ಪ್ರಮಾಣ ಕೂಡ ಕಡಿಮೆ ಇದೆ. ಹೀಗಾಗಿ, ಈಗಿರುವುದಕ್ಕಿಂತ ಐದು ಪಟ್ಟು ಹೆಚ್ಚು ಸೋಂಕಿತರು ಇರುವ ಸಾಧ್ಯತೆ ಇದೆ’ ಎಂದು ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದರು.

‘ಆಕ್ಸಿಜನ್, ವೆಂಟಿಲೇಟರ್, ಬೆಡ್‌ಗಳು, ಆಸ್ಪತ್ರೆಗಳು, ಔಷಧಗಳು, ಲಸಿಕೆ, ರೆಮ್‌ಡಿಸಿವಿರ್‌ ಚುಚ್ಚುಮದ್ದು ಇಲ್ಲದೆ ಜನ ಸಾಯುವ ಸಮಯದಲ್ಲಿಯೂ ಅನಾಗರಿಕ, ಅಮಾನವೀಯ ಹೇಳಿಕೆಗಳನ್ನು ನೀಡುತ್ತಿರುವಬಿಜೆಪಿ ಮುಖ್ಯಮಂತ್ರಿಗಳು, ಪ್ರಧಾನಿ, ಕೇಂದ್ರ ಸಚಿವರನ್ನು ಜನರು ಕ್ಷಮಿಸುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.