ADVERTISEMENT

ಅಜ್ಜಂಪುರ: ‘ಶಾಲೆಯಲ್ಲಿ ಕಲಿಸುವ ಯೋಜನೆ ಜಾರಿಯಾಗಲಿ’

ಜಾನಪದ ಕಲೆಗಳಾದ ತತ್ವಪದ, ಪಟ್ಟ ಕುಣಿತ ತರಬೇತಿ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2023, 7:26 IST
Last Updated 5 ಫೆಬ್ರುವರಿ 2023, 7:26 IST
ಅಜ್ಜಂಪುರ ತಾಲ್ಲೂಕಿನ ಬೆಣಗುಣಸೆ ಗ್ರಾಮದಲ್ಲಿ ನಡೆದ ಜಾನಪದ ಕಲೆಗಳ ತರಬೇತಿ ಕಾರ್ಯಾಗಾರವನ್ನು ಹಣ್ಣೆ ಮಠದ ಅಭಿನವ ಮರುಳಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು
ಅಜ್ಜಂಪುರ ತಾಲ್ಲೂಕಿನ ಬೆಣಗುಣಸೆ ಗ್ರಾಮದಲ್ಲಿ ನಡೆದ ಜಾನಪದ ಕಲೆಗಳ ತರಬೇತಿ ಕಾರ್ಯಾಗಾರವನ್ನು ಹಣ್ಣೆ ಮಠದ ಅಭಿನವ ಮರುಳಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು   

ಅಜ್ಜಂಪುರ: ‘ಜಾನಪದ ಕಲೆ ಉಳಿಸಿ, ಬೆಳೆಸುವಲ್ಲಿ ಕರ್ನಾಟಕ ಜಾನಪದ ಪರಿಷತ್ತು ಮತ್ತು ಸಂಘ ಸಂಸ್ಥೆಗಳ ಕಾರ್ಯ ಶ್ಲಾಘನೀಯ’ ಎಂದು ಹಣ್ಣೆ ಮಠದ ಅಭಿನವ ಮರುಳಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲ್ಲೂಕಿನ ಬೆಣಗುಣಸೆ ಗ್ರಾಮದಲ್ಲಿ ಬೇವಿನ ಮರದಮ್ಮನವರ ನೂತನ ದೇವಾಲಯ ಉದ್ಘಾಟನೆ, ವಿಗ್ರಹ ಪ್ರತಿಷ್ಠಾಪನೆ ಹಾಗೂ ಗುರುಸಿದ್ದರಾಮೇಶ್ವರ ಸ್ವಾಮಿ ಉತ್ಸವ ಸಮಾರಂಭದ ಪ್ರಯುಕ್ತ ನಡೆದ ಜಾನಪದ ಕಲೆಗಳಾದ ರಂಗ ಹೆಜ್ಜೆ, ಪಟ್ಟ ಕುಣಿತ, ತತ್ವಪದಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರ, ಜಾನಪದ ಕಲಾವಿದರಿಗೆ ಮಾಸಾಶನ ನೀಡಲು ನಿಗದಿಗೊಳಿಸಿರುವ ವಯೋಮಿತಿಯನ್ನು 55ಕ್ಕೆ ಇಳಿಸಬೇಕು ಮತ್ತು ಕಲಾವಿದರಿಗೆ ನೀಡುತ್ತಿರುವ ಮಾಸಾಶನವನ್ನು ಹೆಚ್ಚಿಸಬೇಕು ಎಂದು ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕ ಅಧ್ಯಕ್ಷ ಜಿ.ಬಿ.ಸುರೇಶ್ ಒತ್ತಾಯಿಸಿದರು.

ADVERTISEMENT

ನಿವೃತ್ತ ಶಿಕ್ಷಕ ಮರುಳಸಿದ್ದಪ್ಪ, ‘ಸರ್ಕಾರ, ಶಾಲಾ-ಕಾಲೇಜುಗಳಲ್ಲಿ ಜಾನಪದ ಕಲೆಯನ್ನು ಪಠ್ಯ ವಿಷಯವಾಗಿ ಬೋಧಿಸಲು ಮತ್ತು ಮಕ್ಕಳು ಮತ್ತು ಯುವ ಪೀಳಿಗೆಗೆ ನುರಿತ ಕಲಾವಿದರಿಂದ ಜಾನಪದ ಕಲೆಯನ್ನು ಕಲಿಸಲು ಸಹಕಾರಿಯಾಗುವ ಯೋಜನೆ ಜಾರಿಗೊಳಿಸಬೇಕು’ ಎಂದು ಮನವಿ ಮಾಡಿದರು.

ನಂದೀಪುರದ ನಂದೀಶ್ವರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಜಾನಪದಶ್ರೀ ಪ್ರಶಸ್ತಿ ಪುರಸ್ಕೃತ ಮಾಳೇನಹಳ್ಳಿ ಬಸಪ್ಪ, ಜಾನಪದ ಅಕಾಡಮಿ ಸದಸ್ಯೆ ಲಕ್ಷ್ಮೀದೇವಮ್ಮ, ನಿವೃತ್ತ ಪ್ರಾಂಶುಪಾಲ ಸಿದ್ರಾಮಪ್ಪ, ಕಲಾವಿದ ಕಾರೇಹಳ್ಳಿ ಬಸಪ್ಪ, ದೇವರಾಜ್, ರಚನಾ ಮಾತನಾಡಿದರು.

ಕಲಾವಿದ ಮರುಳಸಿದ್ದಪ್ಪ ಅವರಿಗೆ ಬೆಂಗಳೂರಿನ ನಿತ್ಯೋತ್ಸವ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘ ನೀಡಿದ ‘ಜಗಜ್ಯೋತಿ ಬಸವೇಶ್ವರ ಕಾಯಕಶ್ರೀ ಪ್ರಶಸ್ತಿ’ಯನ್ನು ಹಣ್ಣೆ ಮಠದ ಶ್ರೀಗಳು ಪ್ರದಾನ ಮಾಡಿದರು.

ಮುಖಂಡ ರಾಮಲಿಂಗಪ್ಪ, ಆನಂದಪ್ಪ, ಪ್ರದೀಪ್, ಮಲ್ಲೇಶಪ್ಪ, ಲೋಕೇಶಪ್ಪ, ಸದಾಶಿವಪ್ಪ, ಸುರೇಶ್ ಮತ್ತಿತರರಿದ್ದರು.

ಆಂಜನೇಯ ದೇವಾಲಯ ಸಮಿತಿ, ಬೇವಿನ ಮರದಮ್ಮ ದೇವಾಲಯ ಸಮಿತಿ, ಗ್ರಾಮಾಭಿವೃದ್ದಿ ಸಂಘ, ಕರ್ನಾಟಕ ಜಾನಪದ ಪರಿಷತ್ತು ಸಂಯುಕ್ತವಾಗಿ ಕಾರ್ಯಕ್ರಮ ಆಯೋಜಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.