ADVERTISEMENT

ಚಿಕ್ಕಮಗಳೂರು: ಜೇಸಿಐ ಸಂಸ್ಥೆಯ ಸಮಾಜಮುಖಿ ಸೇವೆ ಶ್ಲಾಘನೀಯ

ಶೃಂಗೇರಿ ಜೇಸಿಐ ಸಂಸ್ಥೆಯ 7 ದಿನಗಳ ಜೇಸಿಐ ಸಪ್ತಾಹದ ಉದ್ಘಾಟನಾ ಸಮಾರಂಭ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 5:19 IST
Last Updated 11 ಸೆಪ್ಟೆಂಬರ್ 2025, 5:19 IST
ಶೃಂಗೇರಿಯ ಜಿಎಸ್‍ಬಿ ಸಭಾಂಗಣದಲ್ಲಿ ಜೇಸಿಐ ಸಂಸ್ಥೆ ಆಯೋಜಿಸಿದ್ದ ‘ಜೇಸಿಐ ಸಪ್ತಾಹ ಕಾರ್ಯಕ್ರಮ’ದ ಉದ್ಘಾಟನಾ ಸಮಾರಂಭದಲ್ಲಿ ವಕೀಲ ಸುಧೀರ್ ಕುಮಾರ್ ಮುರೋಳ್ಳಿ ಮಾತನಾಡಿದರು 
ಶೃಂಗೇರಿಯ ಜಿಎಸ್‍ಬಿ ಸಭಾಂಗಣದಲ್ಲಿ ಜೇಸಿಐ ಸಂಸ್ಥೆ ಆಯೋಜಿಸಿದ್ದ ‘ಜೇಸಿಐ ಸಪ್ತಾಹ ಕಾರ್ಯಕ್ರಮ’ದ ಉದ್ಘಾಟನಾ ಸಮಾರಂಭದಲ್ಲಿ ವಕೀಲ ಸುಧೀರ್ ಕುಮಾರ್ ಮುರೋಳ್ಳಿ ಮಾತನಾಡಿದರು    

ಶೃಂಗೇರಿ: ‘ಸಮಾಜಕ್ಕೆ ಸೇವೆ ಸಲ್ಲಿಸುವುದು ಸಂಸ್ಥೆಯ ಮುಖ್ಯ ಧ್ಯೇಯ. ಜನಸಾಮಾನ್ಯರ ಕಾಳಜಿ ಅರಿತು ಅವರ ಶ್ರೇಯಸ್ಸಿಗಾಗಿ ದುಡಿಯುವುದು ಮಾನವ ಧರ್ಮ. ಈ ಧರ್ಮವನ್ನು ಜೇಸಿಐ ಸಂಸ್ಥೆ ನಿರ್ವಹಿಸುತ್ತಿರುವುದು ಶ್ಲಾಘನೀಯ’ ಎಂದು ವಕೀಲ ಸುಧೀರ್ ಕುಮಾರ್ ಮುರೋಳ್ಳಿ ಹೇಳಿದರು.

ಶೃಂಗೇರಿಯ ಜಿಎಸ್‍ಬಿ ಸಭಾಂಗಣದಲ್ಲಿ ಜೇಸಿಐ ಸಂಸ್ಥೆ ಆಯೋಜಿಸಿದ್ದ ಜೇಸಿಐ ಸಪ್ತಾಹ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ‘ಸಮಾಜಕ್ಕಾಗಿ ದುಡಿಯುವ ಪಟ್ಟಣ ಮತ್ತು ಗ್ರಾಮ ಪಂಚಾಯಿತಿಯ ಕಾರ್ಮಿಕರನ್ನು ಸನ್ಮಾನಿಸಿ’ ಅವರು ಮಾತನಾಡಿದರು.

‘ಯುವ ಸಂಘಟನೆಗಳು ಬೆಳೆದರೆ ಮಾತ್ರ ಸಮುದಾಯದ ಉನ್ನತಿ ಸಾಧ್ಯ. ಮನುಷ್ಯನು ಸ್ವಾರ್ಥಪರ ಚಿಂತನೆ ಬಿಟ್ಟು ವಿಶ್ವಮಾನವನಾಗಬೇಕು. ಲಭಿಸಿದ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಸಂಸ್ಕಾರ, ಸಂಸ್ಕೃತಿಯನ್ನು ಮರೆತ್ತಿರುವುದು ಆತಂಕಕಾರಿ. ಮಾನವೀಯ ಮೌಲ್ಯಗಳಿಗೆ ಬೆಲೆ ನೀಡುವುದು ಧರ್ಮ. ದೇಶದ ಅಭಿವೃದ್ಧಿ ಎಲ್ಲರೂ ಒಗ್ಗೂಡಿ ಕಾರ್ಯನಿರ್ವಹಿಸಿದಾಗ ಮಾತ್ರ ಸಾಧ್ಯ. ಮನುಷ್ಯನಲ್ಲಿ ಸೃಜನಶೀಲತೆ, ಕ್ರಿಯಾಶೀಲತೆ ಇದ್ದಾಗ ಮಾತ್ರ ಗೌರವ ಸಿಗುತ್ತದೆ’ ಎಂದರು.

ADVERTISEMENT

ಪಟ್ಟಣ ಪಂಚಾಯಿತಿ ಅಧ್ಯಕ್ಷ ವೇಣುಗೋಪಾಲ್ ಹೇಳಿದರು: ‘ಸಂಘ-ಸಂಸ್ಥೆಗಳು ಪ್ರಾಮಾಣಿಕವಾಗಿ ಸಮಾಜ ಸೇವೆ ಸಲ್ಲಿಸಬೇಕು. ಅಂತಹ ಸತ್ಕಾರ್ಯಗಳು ಜನ ಮಾನಸದಲ್ಲಿ ಶಾಶ್ವತವಾಗಿರುತ್ತವೆ. ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವವರು ನಂಬಿಕೆ-ವಿಶ್ವಾಸದಿಂದ ಕೆಲಸ ಮಾಡಿದಾಗ ಯಶಸ್ಸು ಲಭಿಸುತ್ತದೆ. ಸಮಾಜ ಸೇವೆ ಜೊತೆಗೆ ಕುಟುಂಬಕ್ಕೂ ಸಮಯ ನೀಡಬೇಕು. ಸಮುದಾಯದಲ್ಲಿ ಉತ್ತಮ ಕೆಲಸ ಮಾಡಿದಾಗಲೇ ನಮ್ಮನ್ನು ಗುರುತಿಸಲಾಗುತ್ತದೆ’ ಎಂದರು.

ಜೇಸಿಐನ ಅಧ್ಯಕ್ಷ ವಿ.ಎಸ್. ಅಶೋಕ್ ಮಾತನಾಡಿ, ‘ಮನುಷ್ಯನ ನಡುವೆ ಪ್ರೀತಿ, ವಿಶ್ವಾಸ ಇದ್ದಾಗ ಸಹೋದರತ್ವ ಭಾವನೆ ನಿರಂತರವಾಗಿರುತ್ತದೆ. ಮನುಕುಲದ ಸೇವೆಯೇ ನಿಜವಾದ ಧರ್ಮ. ದೀನ ದಲಿತರಿಗಾಗಿ ಮಾಡುವ ಸೇವೆ ಭಗವಂತನನ್ನು ತಲುಪುತ್ತದೆ’ ಎಂದರು.

ಮೆಸ್ಕಾಂ, ಗ್ರಾಮ ಪಂಚಾಯಿತಿಯಲ್ಲಿ ನೀರು ನಿರ್ವಹಣೆ ಮಾಡುವವರನ್ನು ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ವೀಜೆತ ಅಶೋಕ್, ನಿಕಟಪೂರ್ವ ಅಧ್ಯಕ್ಷ ಎಚ್.ಜೆ. ರಾಘವೇಂದ್ರ, ರಮೇಶ್ ಶೂನ್ಯ, ಚೇತನ್, ಎಚ್.ಸಿ. ಶ್ರೀಕಾಂತ್, ಸುನೀತಾ ನವೀನ್ ಗೌಡ, ಸಿ.ಎನ್. ಶ್ರೀಕಾಂತ್, ಮೋಹನ್ ಬೋಳೂರು, ಆಶೀಶ್ ದೇವಾಡಿಗ, ಸಚಿನ್, ಸುನೀತ ಪ್ರಭು, ಉಮಾ ಚಂದ್ರಶೇಖರ್ ಇದ್ದರು.

ದೇವರಲ್ಲಿ ಭಕ್ತಿ ಇರಬೇಕೆ ಹೊರತು ಭಯ ಇರಬಾರದು. ಭಗವಂತ ಜೀವ ಸಂಕುಲಗಳನ್ನು ರಕ್ಷಿಸುತ್ತಾನೆ ಎಂದು ಭಗವದ್ಗೀತೆಯಲ್ಲಿದೆ. ಆದರೆ ಪ್ರಸ್ತುತ ಮನುಷ್ಯನು ಅಹಂಕಾರದಿಂದ ದೇವರನ್ನು ರಕ್ಷಿಸಲು ಹೊರಟಿರುವುದು ವಿಷಾದನೀಯ.
– ಸುಧೀರ್ ಕುಮಾರ್, ಮುರೋಳ್ಳಿ ವಕೀಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.