ADVERTISEMENT

ಚಿಕ್ಕಮಗಳೂರು ನಗರಸಭೆ ಗದ್ದುಗೆ ಹಿಡಿದ ಜೆಡಿಎಸ್: 25 ವರ್ಷಗಳ ಬಳಿಕ ಅಧಿಕಾರಕ್ಕೆ

ಅಧ್ಯಕ್ಷರಾಗಿ ಶೀಲಾ ದಿನೇಶ್ ಅವಿರೋಧವಾಗಿ ಅಯ್ಕೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2025, 12:43 IST
Last Updated 5 ಜುಲೈ 2025, 12:43 IST
<div class="paragraphs"><p>ಅಧ್ಯಕ್ಷರಾಗಿ ಶೀಲಾ ದಿನೇಶ್ ಅವಿರೋಧವಾಗಿ ಅಯ್ಕೆ</p></div>

ಅಧ್ಯಕ್ಷರಾಗಿ ಶೀಲಾ ದಿನೇಶ್ ಅವಿರೋಧವಾಗಿ ಅಯ್ಕೆ

   

ಚಿಕ್ಕಮಗಳೂರು: ನಗರಸಭೆ ಅಧ್ಯಕ್ಷರಾಗಿ ಶೀಲಾ ದಿನೇಶ್ ಅವಿರೋಧವಾಗಿ ಅಯ್ಕೆಯಾಗಿದ್ದು, 25 ವರ್ಷಗಳ ಬಳಿಕ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ.

ಬಿಜೆಪಿಯ ಸುಜಾತಾ ಶಿವಕುಮಾರ್ ರಾಜೀನಾಮೆಯಿಂದ ತೆರವಾಗಿದ್ದ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಶನಿವಾರ ಚುನಾವಣೆ ನಡೆಯಿತು.

ADVERTISEMENT

35 ಸದಸ್ಯ ಬಲದ ನಗರಸಭೆಯಲ್ಲಿ ಬಿಜೆಪಿಯ 18 ಸದಸ್ಯರಿದ್ದು, ಒಬ್ಬರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ. ಜೆಡಿಎಸ್ ನ ಮೂವರು ಸದಸ್ಯರಿದ್ದಾರೆ. ಕಾಂಗ್ರೆಸ್‌ನ 12 ಸದಸ್ಯರು, ಎಸ್‌ಡಿಪಿಐ ಒಬ್ಬರು, ಒಬ್ಬರು ಪಕ್ಷೇತರರು ಇದ್ದಾರೆ.

ಬಿಜೆಪಿ–ಜೆಡಿಎಸ್‌ ಮೈತ್ರಿಕೂಟದ ಒಪ್ಪಂದದ ಪ್ರಕಾರ ಈ ಬಾರಿ ಜೆಡಿಎಸ್‌ಗೆ ಅಧಿಕಾರ ಸಿಕ್ಕಿದೆ.

30 ತಿಂಗಳ ಅವಧಿಗೆ ಮೊದಲ 10 ತಿಂಗಳ ಅವಧಿಯಲ್ಲಿ ಬಿಜೆಪಿಯ ಸುಜಾತಾ ಶಿವಕುಮಾರ್ ಅಧ್ಯಕ್ಷರಾಗಿದ್ದರು. ಎರಡನೇ 10 ತಿಂಗಳನ್ನು ಜೆಡಿಎಸ್‌ಗೆ, ನಂತರದ 10 ತಿಂಗಳು ಮತ್ತೆ ಬಿಜೆಪಿಗೆ ಅಧಿಕಾರ ಬಿಟ್ಟುಕೊಡಲು ಒಪ್ಪಂದವಾಗಿದೆ.

ಶೀಲಾ ದಿನೇಶ್ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲೂ ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಭೋಜೇಗೌಡ, ಸಿ.ಟಿ.ರವಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ ಜೊತೆಗಿದ್ದರು.

ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯನ್ನು ಉಪವಿಭಾಗಾಧಿಕಾರಿ ಸುದರ್ಶನ್ ಘೋಷಿಸಿದರು. ಕೇವಲ ಮೂವರು ಸದಸ್ಯರು ಇರುವುದರಿಂದ ಸ್ವಂತ ಬಲ ಇಲ್ಲದಿದ್ದರೂ ಬಿಜೆಪಿ ಬೆಂಬಲದಿಂದ ಜೆಡಿಎಸ್ ಅಧಿಕಾರ ಹಿಡಿದಿದೆ‌. ಇದಕ್ಕೂ ಹಿಂದೆ 1996ರಲ್ಲಿ ಜನತಾ ದಳ ನಗರಸಭೆ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಐದು ವರ್ಷಗಳ ಅವಧಿಯಲ್ಲಿ ಮೊದಲಿಗೆ ಎಸ್.ಎಲ್.ಭೋಜೇಗೌಡ, ನಂತರ ಜಿ.ಬಿ.ಮಹೇಶ್, ಕೊನೆಯದಾಗಿ ಎಲ್.ಶಾಂತಕುಮಾರ್ ಅಧ್ಯಕ್ಷರಾಗಿ ಅಧಿಕಾರ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.