ADVERTISEMENT

‘ಒತ್ತಡ ಹೇರಿಲ್ಲ; ಬೆದರಿಕೆಗೆ ಬಗ್ಗಲ್ಲ’

ಜಿ.ಪಂ. ಅಧ್ಯಕ್ಷೆ ರಾಜೀನಾಮೆಗೆ ಪಕ್ಷ ಸೂಚನೆ ವಿಚಾರ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2020, 8:10 IST
Last Updated 25 ಅಕ್ಟೋಬರ್ 2020, 8:10 IST
ಕವಿತಾಶೇಖರ್
ಕವಿತಾಶೇಖರ್   

ಚಿಕ್ಕಮಗಳೂರು: ‘ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸುಜಾತಾ ಕೃಷ್ಣಪ್ಪ ಅವರಿಗೆ ಪಕ್ಷ ಸೂಚನೆ ನೀಡಿದೆ. ಆದರೆ, ಒತ್ತಡ ಹೇರಿಲ್ಲ’ ಎಂದು ಬಿಜೆಪಿ ಜಿಲ್ಲಾ ಘಟಕದ ಸಹ ವಕ್ತಾರರಾದ ಕವಿತಾ ಶೇಖರ್ ಇಲ್ಲಿ ಶನಿವಾರ ತಿಳಿಸಿದರು.

‘ರಾಜೀನಾಮೆ ನೀಡಲು ಸುಜಾತಾ ಅವರಿಗೆ ಸೂಚಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕಲ್ಮರುಡಪ್ಪ ದರ್ಪ ತೋರಿದ್ದಾರೆ ಎಂದು ಮುಂಡಾಳ ಸಮಾಜದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಜಾಹ್ನವ್‌ ಆರೋಪಿಸಿದ್ದಾರೆ. ಅಲ್ಲದೇ, ಅವರ ವಿರುದ್ಧ ದೌರ್ಜನ್ಯ ಕಾಯ್ದೆಯಡಿ ದೂರು ದಾಖಲಿಸುವುದಾಗಿ ಹೇಳಿಕೆ ನೀಡಿದ್ದಾರೆ. ಅವರ ಬೆದರಿಕೆಗೆ ಪಕ್ಷ ಹೆದರುವುದಿಲ್ಲ’ ಎಂದು ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದರು.

‘ಕಲ್ಮರುಡಪ್ಪ ಪಕ್ಷದ ನಿರ್ಧಾರವನ್ನು ಸುಜಾತಾ ಅವರಿಗೆ ತಿಳಿಸಿದ್ದಾರೆಯೇ ಹೊರತು ಅದು ಅವರ ವೈಯುಕ್ತಿಕ ತೀರ್ಮಾನವಲ್ಲ. ಪಕ್ಷದ ಪ್ರಮುಖರ ಸಮಿತಿ (ಕೋರ್‌ ಕಮಿಟಿ) ನಿರ್ಣಯವನ್ನು ಪಕ್ಷದಲ್ಲಿರುವವರು ಒಪ್ಪಿಕೊಳ್ಳಬೇಕು, ಪಕ್ಷ ಅಶಿಸ್ತನ್ನು ಸಹಿಸುವುದಿಲ್ಲ’ ಎಂದರು.

ADVERTISEMENT

‘ಪಕ್ಷವು ಸುಜಾತಾ ಅವರನ್ನು ತಾಲ್ಲೂಕು ಪಂಚಾಯಿತಿ ಅಧ್ಯಕ್ಷರನ್ನಾಗಿ ಮಾಡಿತ್ತು. ಈಗ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿಸಿದೆ. ಸಮಾಜವನ್ನು ಅವರು ಮುಂದಿಟ್ಟುಕೊಂಡು ನಾಟಕವಾಡ ಬಾರದು. ಪಕ್ಷದ ಸೂಚನೆ ಪಾಲಿಸ ಬೇಕು. ಏನಾದರೂ ಸಮಸ್ಯೆಗಳಿದ್ದರೆ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಪರಿಹರಿಸಿ ಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಬಿ.ಜಿ. ಸೋಮಶೇಖರಪ್ಪ ಮಾತನಾಡಿ, ‘ಜಿಲ್ಲಾ ಪಂಚಾಯಿತಿ ಕ್ರಿಯಾ ಯೋಜನೆ ಅನುಮೋದನೆಯಾದ ನಂತರ ರಾಜೀನಾಮೆ ನೀಡುವುದಾಗಿ ಅಧ್ಯಕ್ಷರು ಹೇಳಿಕೆ ನೀಡಿದ್ದಾರೆ. ಆದರೆ ಈಗಾಗಲೇ ಕ್ರಿಯಾ ಯೋಜನೆಗೆ ಅನುಮೋದನೆ ದೊರೆತಿದೆ. ಅಧ್ಯಕ್ಷ ಸ್ಥಾನದ ಅವಧಿ ಹಂಚಿಕೆ ಬಗ್ಗೆ ಈ ಹಿಂದೆ ಏನು ನಿರ್ಣಯವಾಗಿತ್ತೊ ಗೊತ್ತಿಲ್ಲ. ರಾಜೀನಾಮೆ ಸೂಚನೆ ಹಿಂದೆ ಷಡ್ಯಂತ್ರ ಇಲ್ಲ’ ಎಂದು ಸ್ಪಷ್ಟಪಡಿಸಿದರು.

‘ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ ಏರ್ಪಡಿಸುವಾಗ ಅಧ್ಯಕ್ಷರು ಸೌಜನ್ಯಕ್ಕೂ ಉಪಾಧ್ಯಕ್ಷರು, ಸದಸ್ಯರನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಹೀಗಾಗಿ ಹಿಂದಿನ ಸಭೆಗೆ ಗೈರು ಹಾಜರಾಗಿದ್ದೆವು. ಮುಂದಿನ ಸಭೆಯಲ್ಲಿ ಹಾಜರಾಗಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಸದಸ್ಯರು ಚರ್ಚಿಸಿ ತೀರ್ಮಾನಿಸುತ್ತೇವೆ’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಜಸಂತಾ ಅನಿಲ್‌ಕುಮಾರ್, ಪಕ್ಷದ ಜಿಲ್ಲಾ ಘಟಕದ ವಕ್ತಾರ ವರಸಿದ್ಧಿ ವೇಣುಗೋಪಾಲ್, ಸದಸ್ಯರಾದ ಸಂದೀಪ್, ವೀಣಾಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.