ADVERTISEMENT

ವಾಹನ ಚಾಲನೆ ವೇಳೆ ಸಂಚಾರ ನಿಯಮ ಪಾಲಿಸಿ

ಪರಿಸರ ಕಾನೂನು ಸಾಕ್ಷರತೆ. ಸಮುದಾಯ ಸಂರಕ್ಷಣೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 7:14 IST
Last Updated 31 ಡಿಸೆಂಬರ್ 2025, 7:14 IST
ನರಸಿಂಹರಾಜಪುರ ತಾಲ್ಲೂಕು ಮೆಣಸೂರಿನ ಮೌಂಟ್ ಕಾರ್ಮೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ಟಿ,ರಘುನಾಥ ಗೌಡ ಚಾಲನೆ ನೀಡಿದರು. ನ್ಯಾಯಾಧೀಶ ಆರ್.ಎಸ್.ಜೀತು, ಕೆ.ಜಯಪ್ರಕಾಶ್, ಜಿ.ಬಿ.ನೇಕಾರ್, ಸಿಸ್ಟರ್ ಶುಭಾ ಪಾಲ್ಗೊಂಡಿದ್ದರು
ನರಸಿಂಹರಾಜಪುರ ತಾಲ್ಲೂಕು ಮೆಣಸೂರಿನ ಮೌಂಟ್ ಕಾರ್ಮೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ಟಿ,ರಘುನಾಥ ಗೌಡ ಚಾಲನೆ ನೀಡಿದರು. ನ್ಯಾಯಾಧೀಶ ಆರ್.ಎಸ್.ಜೀತು, ಕೆ.ಜಯಪ್ರಕಾಶ್, ಜಿ.ಬಿ.ನೇಕಾರ್, ಸಿಸ್ಟರ್ ಶುಭಾ ಪಾಲ್ಗೊಂಡಿದ್ದರು   

ಮೆಣಸೂರು (ನರಸಿಂಹರಾಜಪುರ): ವಾಹನ ಚಾಲನೆ ಮಾಡುವಾಗ ಪ್ರತಿಯೊಬ್ಬರು ನಿಯಮಗಳನ್ನು ಪಾಲನೆ ಮಾಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ಟಿ,ರಘುನಾಥ ಗೌಡ ಹೇಳಿದರು.

ತಾಲ್ಲೂಕಿನ ಮೆಣಸೂರು ಮೌಂಟ್ ಕಾರ್ಮೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ತಾಲ್ಲೂಕು ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಸಹಾಯಕ ಸರ್ಕಾರಿ ಅಭಿಯೋಜನಾ ಇಲಾಖೆ, ತಾಲ್ಲೂಕು ಆರೋಗ್ಯ ಇಲಾಖೆ ಹಾಗೂ ವಲಯ ಅರಣ್ಯಾಧಿಕಾರಿಗಳ ಇಲಾಖೆ ಆಶ್ರಯದಲ್ಲಿ ನಡೆದ ಪರಿಸರ ಕಾನೂನು ಸಾಕ್ಷರತೆ ಹಾಗೂ ಸಮುದಾಯ ಸಂರಕ್ಷಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

18 ವರ್ಷದೊಳಗಿನವರು ಯಾವುದೇ ಕಾರಣಕ್ಕೂ ವಾಹನ ಚಾಲನೆ ಮಾಡಬಾರದು. ಒಂದು ವೇಳೆ ವಾಹನ ಚಾಲನೆ ಮಾಡಿದರೆ ₹25 ಸಾವಿರದವರೆಗೆ ದಂಡ ವಿಧಿಸಲಾಗುತ್ತದೆ. ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಚಾಲನಾ ಪರವಾನಗಿ, ವಾಹನ ವಿಮೆ, ವಾಹನದ ದಾಖಲೆ ಇರಬೇಕು. ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ನಾಲ್ಕು ಚಕ್ರದ ವಾಹನ ಚಾಲನೆ ಮಾಡುವಾಗ ಸಿಟ್ ಬೆಲ್ಟ್‌ ಕಡ್ಡಾಯವಾಗಿ ಧರಿಸಬೇಕು ಎಂದರು.

ADVERTISEMENT

ಶಿಕ್ಷಣದ ಕೊರತೆಯಿಂದ ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿವೆ. ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ತಡೆಗಟ್ಟಲು ಫೋಕ್ಸೊ ಕಾಯ್ದೆ ಜಾರಿಗೆ ತರಲಾಗಿದೆ. ವಿದ್ಯಾರ್ಥಿಗಳು ತಮ್ಮ ಗ್ರಾಮದ ವ್ಯಾಪ್ತಿಯಲ್ಲಿ ಬಾಲ್ಯ ವಿವಾಹವಾದಲ್ಲಿ ಕಾನೂನು ಸೇವಾ ಪ್ರಾಧಿಕಾರಕ್ಕೆ ದೂರು ನೀಡಿದರೆ ಬಾಲ್ಯವಿವಾಹ ತಡೆಗಟ್ಟಲಾಗುವುದು.  ವಿದ್ಯಾರ್ಥಿಗಳು ದೈನಂದಿನ ಬಳಕೆಗೆ ಅವಶ್ಯಕವಾದ ಕಾನೂನುಗಳನ್ನು ತಿಳಿದುಕೊಳ್ಳಬೇಕು. ಪಿಯುಸಿ ಹಂತದಲ್ಲಿ ಮನಸ್ಸು ಚಂಚಲವಾಗಿದ್ದು ಮನಸ್ಸು ಕೇಂದ್ರೀಕರಿಸಿ ಓದಿನ ಕಡೆ ಗಮನಹರಿಸಬೇಕು ಎಂದು ಸಲಹೆ ನೀಡಿದರು.

ಜೆ.ಎಂ.ಎಫ್.ಸಿ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶ ಆರ್.ಎಸ್.ಜೀತು ಮಾತನಾಡಿ, ದೇಶದಲ್ಲಿ 1986ರಲ್ಲಿ ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದ ನಂತರ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ ಪರಿಸರಕ್ಕೆ ಪೂರಕವಾದ ಬಟ್ಟೆಬ್ಯಾಗ್, ಪೇಪರ್ ಬಳಸುವುದರ ಮೂಲಕ ಪ್ಲಾಸ್ಟಿಕ್ ಮುಕ್ತ ದೇಶ ಮಾಡಲು ಶ್ರಮಿಸಬೇಕು. ಪ್ರಸ್ತುತ ಮನುಷ್ಯನ ದುರಾಸೆಗೆ ಅರಣ್ಯ ನಾಶವಾಗುತ್ತಿದ್ದು ಪ್ರಾಣಿಸಂಕುಲ ಉಳಿಯಲು ಅರಣ್ಯವಿಲ್ಲದೆ ವಿನಾಶದ ಅಂಚಿಗೆ ತಲುಪುತ್ತಿದೆ.  ಪರಿಸರದಲ್ಲಿ ಸಕಲ ಜೀವರಾಶಿಗೂ ಬದುಕುವ ಹಕ್ಕಿದೆ. ನೀರನ್ನು ಮಿತವಾಗಿ ಬಳಸಬೇಕು. ಎಲ್ಲಾ ಪ್ರಾಣಿಗಳ ಬಗ್ಗೆ ದಯೆ ತೋರಬೇಕು ಎಂದರು.

ಚಿಕ್ಕಗ್ರಹಾರ ಉಪವಲಯ ಅರಣ್ಯಾಧಿಕಾರಿ ಬಿ.ನಂದೀಶ್ ಮಾತನಾಡಿ, ಪರಿಸರದಲ್ಲಿನ ಮರ, ಗಿಡ, ಪ್ರಾಣಿ ಪಕ್ಷಿಗಳನ್ನು ಪೂಜೆ ಮಾಡುವ ಹಿಂದಿನ ಉದ್ದೇಶ ಅವುಗಳ ಸಂರಕ್ಷಣೆಯಾಗಿದೆ. ಪರಿಸರ ಮಾಲಿನ್ಯ ತಡೆಗಟ್ಟಲು ಅರಣ್ಯ ಸಂರಕ್ಷಣಾ ಕಾಯ್ದೆ, ವನ್ಯ ಜೀವಿ ಸಂರಕ್ಷಣಾ ಕಾಯ್ದೆ ಜಾರಿಗೆ ತರಲಾಗಿದೆ ಎಂದರು.

ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಜಯಪ್ರಕಾಶ್ ಜನನ, ಮರಣ ಪ್ರಮಾಣ ಪತ್ರ ಕಾಯ್ದೆ ಬಗ್ಗೆ ಮಾಹಿತಿ ನೀಡಿದರು. ವಕೀಲ ಪೌಲ್ ಚೆರಿಯನ್ ಪರಿಸರ ಕಾನೂನು ಸಾಕ್ಷರತಾ ಬಗ್ಗೆ , ಸರ್ಕಾರಿ ವಕೀಲ ಜಿ.ಬಿ.ನೇಕಾರ್, ಸೈಬರ್ ಅಪರಾಧ ಬಗ್ಗೆ ಮಾಹಿತಿ ನೀಡಿದರು.

ಮೌಂಟ್ ಕಾರ್ಮೆಲ್ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಸಿಸ್ಟರ್ ಶುಭಾ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ, ಉಪನ್ಯಾಸಕರಾದ ನಂದಿನಿ ಆಲಂದೂರು, ಅನುಷಾ, ವಿದ್ಯಾರ್ಥಿಗಳಾದ ಕ್ರಿಸ್ಟಲ್, ದರ್ಶನಾ, ಜೆಸ್ನ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.