ಬೀರೂರು (ಕಡೂರು): ‘ದೇಶ ಸೇವೆಗೆ ತಮ್ಮನ್ನು ತಾವು ಸಮರ್ಪಿಸಿಕೊಂಡು, ಬಲಿದಾನ ನೀಡಿದ ವೀರಯೋಧರ ಸ್ಮರಣೆ ನಿರಂತರವಾಗಿರಬೇಕು’ ಎಂದು ಕೇಂದ್ರೀಯ ಮೀಸಲು ಪಡೆಯ ಬೆಂಗಳೂರು ಗ್ರೂಪ್ ಸೆಂಟರ್‌ನ ಎಸ್‌ಐ ಎಂ.ಆರ್. ಜಗದೀಶ್ ತಿಳಿಸಿದರು.
ಪಟ್ಟಣದ ಬಳ್ಳಾರಿ ಕ್ಯಾಂಪ್‌ನಲ್ಲಿರುವ ಹುತಾತ್ಮ ಯೋಧ ಜಿ.ಶ್ರೀನಿವಾಸ್ ಕುಟುಂಬಸ್ಥರ ಮನೆಗೆ ಶನಿವಾರ ಭೇಟಿ ನೀಡಿ, ಹುತಾತ್ಮರ ಸಾಹಸ ಸಾರುವ ಸ್ಮರಣಿಕೆ ನೀಡಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಹುತಾತ್ಮರಾಗುವುದು ಎಂದರೆ ಕೇವಲ ಸಾವಲ್ಲ; ಅದು ಬದ್ಧತೆ ಮತ್ತು ದೇಶ ಸೇವೆಗಾಗಿ ಪ್ರಾಣಾರ್ಪಣೆ ಮಾಡಿದವರ ತ್ಯಾಗದ ಕತೆ. ರಾಜಕೀಯ, ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿರುವ ಎಲ್ಲರೂ ಯೋಧರ ಧೈರ್ಯ, ನಿಷ್ಠೆ ಮತ್ತು ಹೋರಾಟವನ್ನು ಸದಾ ಸ್ಮರಿಸಬೇಕು. ಪ್ರತಿಯೊಬ್ಬ ನಾಗರಿಕನೂ ಯೋಧರ ಬಲಿದಾನವನ್ನು ಮರೆಯಬಾರದು ಎಂದರು.
ಕೇಂದ್ರ ಸರ್ಕಾರ ಯುವಪೀಳಿಗೆಯು ಹುತಾತ್ಮರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಹುತಾತ್ಮರ ಮೂಲ ಸ್ಥಳಗಳಿಗೆ ತೆರಳಿ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮಗಳನ್ನು ಸೇವೆಯಲ್ಲಿರುವ ತುಕಡಿಗಳ ಯೋಧರ ಮೂಲಕ ನೆರೇವೇರಿಸುತ್ತಿದೆ. ಯೋಧರ ಸೇವಾ ವಿಭಾಗಗಳ ಮೂಲಕ ಅವರ ಕುಟುಂಬಗಳಿಗೆ ಸಾಹಸ ಸಾರುವ ನಾಮಫಲಕಗಳನ್ನು ನೀಡಿ ಗೌರವಿಸಲಾಗುತ್ತಿದೆ. ಊರಿನಿಂದ ದೇಶ ಸೇವೆಗೆಂದು ತೆರಳಿ ಹುತಾತ್ಮರಾದ ಯೋಧರ ನೆನಪು ನಿರಂತರವಾಗಿರಿಸಲು ಅವರ ಹೆಸರುಗಳನ್ನು ಮುಖ್ಯ ರಸ್ತೆ, ಸರ್ಕಾರಿ ಸ್ಥಳ, ಉದ್ಯಾನಕ್ಕೆ ನಾಮಕರಣ ಮಾಡುವ ಮೂಲಕ ಚಿರಸ್ಮರಣೀಯವಾಗಿರಿಸಬೇಕು ಎಂದು ಅವರು ಆಶಿಸಿದರು.
ಶ್ರೀನಿವಾಸ್ ಅವರ ಸಹೋದರರಾದ ಕುಮಾರಸ್ವಾಮಿ, ಗೋವಿಂದಪ್ಪ ಮಾತನಾಡಿ, ‘ನಮ್ಮ ಸಹೋದರ ಹುತಾತ್ಮರಾಗಿ 30 ವರ್ಷಗಳು ಕಳೆದಿವೆ. ಈ ಹಿಂದೆ ಪುರಸಭೆ ಆಡಳಿತ ಪಟ್ಟಣದ ಖಾಸಗಿ ಬಸ್ ನಿಲ್ದಾಣಕ್ಕೆ ಅವರ ಹೆಸರು ಇರಿಸಿತ್ತು. ನಂತರದ ದಿನಗಳಲ್ಲಿ ಬಸ್ ನಿಲ್ದಾಣದ ನವೀಕರಣದ ಸಂದರ್ಭದಲ್ಲಿ ಆ ನಾಮಫಲಕವನ್ನು ತೆರವುಗೊಳಿಸಿದ್ದಾರೆ. ನಿಲ್ದಾಣಕ್ಕೆ ಪುನಃ ಶ್ರೀನಿವಾಸ್ ಹೆಸರನ್ನು ನಾಮಕರಣ ಮಾಡಬೇಕು’ ಎಂದು ಆಗ್ರಹಿಸಿದರು.
ವಿದ್ಯಾರ್ಥಿಗಳಲ್ಲಿ ದೇಶಸೇವೆ ಮತ್ತು ಸೇನೆಯ ಬಗ್ಗೆ ಹೆಚ್ಚಿನ ಪ್ರೀತಿ ಮೂಡಲಿ ಎನ್ನುವ ಉದ್ದೇಶದಿಂದ ಹುತಾತ್ಮರ ಸಾಹಸ ಬಿತ್ತರಿಸುವ ನಾಮಫಲಕವನ್ನು ಜಿ.ಶ್ರೀನಿವಾಸ್ ವ್ಯಾಸಂಗ ಮಾಡಿದ ಬೀರೂರಿನ ಕೆಎಲ್‌ಕೆ ಸರ್ಕಾರಿ ಶಾಲೆಗೆ ಹಸ್ತಾಂತರಿಸಿ, ಅಳವಡಿಸುವಂತೆ ಕೋರಲಾಯಿತು.
ಈ ಸಂದರ್ಭದಲ್ಲಿ ಶ್ರೀನಿವಾಸ್ ಸಹೋದರ ಪುರಸಭೆ ಸದಸ್ಯ ಲಕ್ಷ್ಮಣ್, ಹರಿಪ್ರಸಾದ್, ಸಣ್ಣಪ್ಪ, ಫಣಿ ಮತ್ತು ಹುತಾತ್ಮ ಶ್ರೀನಿವಾಸ್ ಕುಟುಂಬಸ್ಥರು ಇದ್ದರು.