ADVERTISEMENT

ಬಿರುಸಿನ ಮಳೆ ನಡುವೆಯೇ ಖರೀದಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2022, 2:15 IST
Last Updated 5 ಆಗಸ್ಟ್ 2022, 2:15 IST
ಕಡೂರಿನಲ್ಲಿ ಸುರಿವ ಮಳೆಯಲ್ಲೆ ಹೂವು,ಹಣ್ಣು ಖರೀದಿಸುತ್ತಿರುವ ಜನರು
ಕಡೂರಿನಲ್ಲಿ ಸುರಿವ ಮಳೆಯಲ್ಲೆ ಹೂವು,ಹಣ್ಣು ಖರೀದಿಸುತ್ತಿರುವ ಜನರು   

ಪ್ರಜಾವಾಣಿ ವಾರ್ತೆ

ಕಡೂರು: ವರಮಹಾಲಕ್ಷ್ಮಿ ಹಬ್ಬದ ಮುನ್ನಾ ದಿನವಾದ ಗುರುವಾರ ಕಡೂರಿನಲ್ಲಿ ಸುರಿವ ಮಳೆಯಲ್ಲಿಯೇ ಹೂವು, ಹಣ್ಣುಗಳ ಖರೀದಿ ಭರ್ಜರಿಯಾಗಿ ನಡೆಯಿತು.

ಸೇವಂತಿಗೆ ಹೂವಿನ ಬೆಲೆ ಒಂದು ಮಾರಿಗೆ ₹60, ಮಲ್ಲಿಗೆ ₹80, ಕಾಕಡ ₹50 ಇತ್ತು. ಸೇವಂತಿಗೆ ಹೂವು ಹತ್ತು ಮಾರಿನ ಒಂದು ಕುಚ್ಚಿನ ಬೆಲೆ ₹450 ರಿಂದ ₹500ರವರೆಗೆ ಇತ್ತು. ಬಾಳೆ ಕಂದು ಒಂದು ಜೊತೆಗೆ ₹50 ದರ ಇತ್ತು. ಕೆಲ ಅಂಗಡಿಗಳಲ್ಲಿ ಮಹಾಲಕ್ಷ್ಮಿಯ ಮುಖಪದ್ಮ, ಹತ್ತಿಯ ಹಾರಗಳು, ಕೃತಕ ಬಟ್ಟೆ ಹಾರಗಳನ್ನು, ಭಾಗಿನ ಪದಾರ್ಥಗಳನ್ನು ಮಹಿಳೆಯರು ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ADVERTISEMENT

ಮಧ್ಯಾಹ್ನ ದಿಢೀರನೆ ಸುರಿದ ಮಳೆ, ಹಬ್ಬದ ಖರೀದಿ ಸಂಭ್ರಮಕ್ಕೆ ತುಸು ಅಡ್ಡಿಯನ್ನುಂಟು ಮಾಡಿತು. ಜನರು ಮಳೆಯನ್ನು ಲೆಕ್ಕಿಸದೆ ಖರೀದಿಯಲ್ಲಿ ನಿರತರಾಗಿದ್ದರು.

ತಾಲ್ಲೂಕಿನಾದ್ಯಂತ ಸಂಜೆ ನಾಲ್ಕು ಗಂಟೆಗೆ ಆರಂಭವಾದ ಮಳೆ ರಾತ್ರಿಯವರೆಗೂ ಮುಂದುವರಿಯಿತು. ವೇದಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಪಂಚನಹಳ್ಳಿಯಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿ ನಿವಾಸಿಗಳು ತೊಂದರೆ ಅನುಭವಿಸಿದರು. ಪಂಚನಹಳ್ಳಿ, ಸಿಂಗಟಗೆರೆ, ಚೌಳಹಿರಿಯೂರು, ಯಗಟಿ, ಮಲ್ಲೇಶ್ವರ, ಮಚ್ಚೇರಿ, ಕಡೂರು ಪಟ್ಟಣ ಮುಂತಾದೆಡೆ ಬಿರುಸಿನ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.