ADVERTISEMENT

ಕೋವಿಡ್ ನಿಯಂತ್ರಿಸಲುಗ್ರಾಮವೇ ಲಾಕ್‌ಡೌನ್!

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2020, 8:03 IST
Last Updated 3 ಅಕ್ಟೋಬರ್ 2020, 8:03 IST
ಕಡೂರು ತಾಲ್ಲೂಕಿನ ಪಿಳ್ಳೇನಹಳ್ಳಿ ಗ್ರಾಮಸ್ಥರು ತಮ್ಮ ಗ್ರಾಮಕ್ಕೆ ಸ್ವಯಂ ಲಾಕ್ ಡೌನ್ ವಿಧಿಸಿರುವ ನೋಟ
ಕಡೂರು ತಾಲ್ಲೂಕಿನ ಪಿಳ್ಳೇನಹಳ್ಳಿ ಗ್ರಾಮಸ್ಥರು ತಮ್ಮ ಗ್ರಾಮಕ್ಕೆ ಸ್ವಯಂ ಲಾಕ್ ಡೌನ್ ವಿಧಿಸಿರುವ ನೋಟ   

ಕಡೂರು: ಕೋವಿಡ್ ನಿಯಂತ್ರಣಕ್ಕಾಗಿ ತಾಲ್ಲೂಕಿನ ಪಿಳ್ಳೇನಹಳ್ಳಿ ಗ್ರಾಮಸ್ಥರು ತಮ್ಮ ಗ್ರಾಮದಲ್ಲಿ ಸ್ವಯಂ ಲಾಕ್‌ಡೌನ್ ಮಾಡಲು ನಿರ್ಧಾರ ತಳೆದಿದ್ದಾರೆ.

ಗ್ರಾಮದಲ್ಲಿ ಮೂವರು ಕೋವಿಡ್‌ನಿಂದ ಸಾವನ್ನಪ್ಪಿದ್ದು, ಸೋಂಕು ಪ್ರಕರಣ ಹೆಚ್ಚುತ್ತಿರುವ ಕಾರಣ ತರಳಬಾಳು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯ ಮಾರ್ಗದರ್ಶನದಂತೆ ಈ ನಿರ್ಧಾರ ತಳೆದಿದ್ದಾರೆ.

ಪಿಳ್ಳೇನಹಳ್ಳಿ ಗ್ರಾಮಸ್ಥರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಸ್ವಾಮೀಜಿ, ಕೊರೊನಾ ನಿಯಂತ್ರಣಕ್ಕೆ 20 ದಿನ ಲಾಕ್‌ಡೌನ್ ಮಾಡಿದರೆ ಅನುಕೂಲವಾಗುತ್ತದೆ ಎಂದು ಸೂಚಿಸಿದರು. ಸ್ವಾಮೀಜಿ ಸಲಹೆಗೆ ಪೂರಕವಾಗಿ ಮುಖಂಡರಾದ ಟಿ.ಕೆ.ರುದ್ರಪ್ಪ, ಲೋಕೇಶ್, ಕಲ್ಮರುಡಪ್ಪ, ರಮೇಶ್, ರತ್ನಾಕರ್, ಓಂಕಾರಪ್ಪ, ರವಿ ಮುಂತಾದವರು ಗ್ರಾಮಸ್ಥರೊಂದಿಗೆ ಸಭೆ ಸೇರಿ, 20 ದಿನಗಳ ಲಾಕ್ ಡೌನ್‌ಗೆ ನಿರ್ಧರಿಸಿದ್ದಾರೆ.

ADVERTISEMENT

ಲಾಕ್‌ಡೌನ್ ಅವಧಿಯಲ್ಲಿ ರೈತರು, ಕೃಷಿ ಕಾರ್ಮಿಕರು ಮಾಸ್ಕ್ ಧರಿಸಿಯೇ ಜಮೀನುಗಳಿಗೆ ಹೋಗಬೇಕು. ಹೊಲಗಳಲ್ಲೂ ಗುಂಪು ಸೇರಬಾರದು. ಪರಸ್ಪರ ಅಂತರ ಕಾಯ್ದುಕೊಂಡು ಕೆಲಸ ಮಾಡಬೇಕು. ತರಕಾರಿ, ಆಹಾರ ಧಾನ್ಯ ಸೇರಿ ನಿತ್ಯ ಬಳಕೆ ವಸ್ತುಗಳ ಖರೀದಿಗೆ ಬೆಳಿಗ್ಗೆ 7 ರಿಂದ 10 ಗಂಟೆವರೆಗೆ ಮಾತ್ರ ಅವಕಾಶವಿದೆ. 10 ರಿಂದ ಸಂಜೆ 6 ಗಂಟೆವರೆಗೆ ಪೂರ್ಣ ಲಾಕ್‌ಡೌನ್ ಜಾರಿಯಲ್ಲಿರುತ್ತದೆ. ಗ್ರಾಮಸ್ಥರು ಅನವಶ್ಯಕವಾಗಿ ಮನೆಯಿಂದ ಹೊರಗೆ ಬರುವಂತಿಲ್ಲ. ತುರ್ತು ಸಂದರ್ಭದಲ್ಲಿ ಮಾತ್ರ ಹೊರ ಬರಬಹುದೆಂಬ ತೀರ್ಮಾನ ಕೈಗೊಳ್ಳಲಾಗಿದೆ. ಸೋಂಕು ನಿಯಂತ್ರಣಕ್ಕೆ ಬರುವವರೆಗೆ ನೆಂಟರಿಷ್ಟರನ್ನು ಆಹ್ವಾನಿಸುವಂತಿಲ್ಲ. ಗ್ರಾಮಸ್ಥರೂ ನೆಂಟರ ಊರುಗಳಿಗೆ ಹೋಗುವಂತಿಲ್ಲ ಎಂದು ಗ್ರಾಮಸ್ಥರು ಒಕ್ಕೊರಲ ನಿರ್ಧಾರ ಕೈಗೊಂಡಿದ್ದಾರೆ. ಗ್ರಾಮದಲ್ಲಿ ಸಭೆಗಳನ್ನು ರದ್ದುಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.