ADVERTISEMENT

₹ 1200 ಕೋಟಿ ವೆಚ್ಚದ ಕಾಮಗಾರಿಗೆ ನ.15ರಂದು ತರೀಕೆರೆಯಲ್ಲಿ ಸಿಎಂ ಚಾಲನೆ

ಬಯಲುಸೀಮೆ ಪ್ರದೇಶಕ್ಕೆ ಕುಡಿಯುವ ನೀರು ಒದಗಿಸುವ ಯೋಜನೆ: ಶಾಸಕ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2022, 8:48 IST
Last Updated 28 ಅಕ್ಟೋಬರ್ 2022, 8:48 IST
ಕಡೂರು ತಾಲ್ಲೂಕಿನ ವಕ್ಕಲಗೆರೆ ಗ್ರಾಮದಲ್ಲಿ ಬಿವೈಎಸ್‌ಎಸ್ ರಸ್ತೆಯಿಂದ ಹೊಸದುರ್ಗ ಸಂಪರ್ಕ ಕಲ್ಪಿಸುವ 5 ಕಿ.ಮೀ ರಸ್ತೆ ಅಭಿವೃದ್ದಿ ಕಾಮಗಾರಿಗೆ ಶಾಸಕ ಬೆಳ್ಳಿಪ್ರಕಾಶ್ ಚಾಲನೆ ನೀಡಿದರು.
ಕಡೂರು ತಾಲ್ಲೂಕಿನ ವಕ್ಕಲಗೆರೆ ಗ್ರಾಮದಲ್ಲಿ ಬಿವೈಎಸ್‌ಎಸ್ ರಸ್ತೆಯಿಂದ ಹೊಸದುರ್ಗ ಸಂಪರ್ಕ ಕಲ್ಪಿಸುವ 5 ಕಿ.ಮೀ ರಸ್ತೆ ಅಭಿವೃದ್ದಿ ಕಾಮಗಾರಿಗೆ ಶಾಸಕ ಬೆಳ್ಳಿಪ್ರಕಾಶ್ ಚಾಲನೆ ನೀಡಿದರು.   

ಕಡೂರು: ‘ಬಯಲುಸೀಮೆಯ ಬಹುದಿನಗಳ ಕನಸು ನನಸಾಗಲಿದೆ. ಭದ್ರಾನದಿಯಿಂದ ಚಿಕ್ಕಮಗಳೂರು, ತರೀಕೆರೆ ಹಾಗೂ ಕಡೂರು ತಾಲ್ಲೂಕುಗಳ 718 ಜನವಸತಿ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸುವ ಮಹತ್ವಕಾಂಕ್ಷೆಯ ₹ 1200 ಕೋಟಿ ವೆಚ್ಚದ ಕಾಮಗಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನ.15ರಂದು ತರೀಕೆರೆಯಲ್ಲಿ ಚಾಲನೆ ನೀಡಲಿದ್ದಾರೆ’ ಎಂದು ಶಾಸಕ ಬೆಳ್ಳಿಪ್ರಕಾಶ್ ತಿಳಿಸಿದರು.

ತಾಲ್ಲೂಕಿನ ಮುಗುಳಿಕಟ್ಟೆ ಗ್ರಾಮ ದಲ್ಲಿ ಗುರುವಾರ ₹ 1.80 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಮೂರು ತಾಲ್ಲೂಕುಗಳ ಜನವಸತಿ ಪ್ರದೇಶಗಳಿಗೆ ಭದ್ರಾನದಿಯ ನೀರು ಒದಗಿಸುವ ಯೋಜನೆಯ ಟೆಂಡರ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಈ ಯೋಜನೆಯಿಂದಾಗಿ ಚಿಕ್ಕಮಗಳೂರು ತಾಲ್ಲೂಕಿನ 156, ಕಡೂರು ತಾಲ್ಲೂಕಿನ 426, ಮತ್ತು ತರೀಕೆರೆ ತಾಲ್ಲೂಕಿನ 136 ಜನವಸತಿ ಪ್ರದೇಶಗಳಲ್ಲಿ ಪ್ರತಿ ಮನೆಗೂ ನಲ್ಲಿ ನೀರಿನ ವ್ಯವಸ್ಥೆ ಕಲ್ಪಿಸುವ ಕಾಮಗಾರಿ ಆರಂಭಗೊಳ್ಳಲಿದೆ ಎಂದರು.

ADVERTISEMENT

ಕ್ಷೇತ್ರದಲ್ಲಿ ನೀರಾವರಿ ಮತ್ತು ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ನಾಲ್ಕೂವರೆ ವರ್ಷದಲ್ಲಿ ಎರಡು ವರ್ಷ ಕೋವಿಡ್‌ ಮಹಾಮಾರಿ ಯೂ ಅಭಿವೃದ್ಧಿಯನ್ನು ನುಂಗಿಹಾಕಿತು. ಉಳಿದ ಕಾಲಘಟ್ಟದಲ್ಲಿ ಕ್ಷೇತ್ರದಲ್ಲಿ ನೂರಾರು ಕೋಟಿ ಕಾಮಗಾರಿ ಅಭಿವೃದ್ಧಿ ಕೆಲಸವಾಗಿದೆ. ₹ 1281 ಕೋಟಿ ವೆಚ್ಚದಲ್ಲಿ ಕೆರೆಗಳನ್ನು ತುಂಬಿಸುವ ಮೊದಲ ಹಂತದ ಕಾಮಗಾರಿ ಮುಕ್ತಾ ಯದ ಹಂತ ತಲುಪಿದೆ. ಎರಡನೇ ಹಂತದ ಕಾಮಗಾರಿಗೂ ಶೀಘ್ರದಲ್ಲಿ ಚಾಲನೆ ದೊರಕಲಿದೆ’ ಎಂದರು.

ಕ್ಷೇತ್ರದ ಅಭಿವೃದ್ದಿಯ ವಿಚಾರದಲ್ಲಿ ಒಬ್ಬ ಶಾಸಕನಾಗಿ ಸ್ಪಷ್ಟ ಪರಿಕಲ್ಪನೆಯಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ. ಬರದ ನಾಡಿಗೆ ಪ್ರಕೃತಿಯ ವರದಿಂದ ಕೆರೆಕಟ್ಟೆಗಳು ಭರ್ತಿಗೊಂಡಿರುವುದು ಸಂತಸ ತಂದಿದೆ. ದೇಶದ ಆಗು-ಹೋಗುಗಳ ಸೂಕ್ಷ್ಮ ವಿಚಾರಗಳ ಬಗ್ಗೆ ಅವಲೋಕನ ನಡೆಸಿ ಪ್ರಜ್ಞಾವಂತಿಕೆ ಯನ್ನು ಬೆಳೆಸಿಕೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ ಶಾಸಕರು ತಾಲ್ಲೂಕಿನ ಮುಗಳೀಕಟ್ಟೆ, ಉಡುಗೆರೆ ಮತ್ತು ವಕ್ಕಲಗೆರೆ ಗ್ರಾಮಗಳಲ್ಲಿ ಕೈಗೆತ್ತಿಕೊಳ್ಳಲಿರುವ ₹ 7.40 ಕೋಟಿ ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿಗಳಿಗೂ ಚಾಲನೆ ನೀಡಿದರು.

ಗ್ರಾಮಸ್ಥರಾದ ಮಂಜುನಾಥ್, ಪಾರ್ವತಮ್ಮ, ರವಿ, ಮಧು, ಬಿಜೆಪಿ ಮಂಡಲಾಧ್ಯಕ್ಷ ಬಿ.ಪಿ. ದೇವಾನಂದ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಚ್.ಎಂ. ರೇವಣ್ಣಯ್ಯ, ಚಿನ್ನುದೇವರಾಜ್, ಮಾರ್ಗದ ಮಧು, ಎಂ. ಸತೀಶ್, ರಾಜನಾಯ್ಕ, ಓಂಕಾರಪ್ಪ, ವಡೇರಹಳ್ಳಿ ಅಶೋಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.