ADVERTISEMENT

ಹಾಲಪ್ಪ ಕೈಹಿಡಿದ ಮಿಶ್ರಬೆಳೆ: ಗಿರಿಯಾಪುರ ಕೃಷಿಕನಿಂದ ಬರಡು ಜಮೀನಲ್ಲೂ ಹಲವು ಬೆಳೆ

ಬರಡು ಜಮೀನಿನಲ್ಲೂ ಹಲವು ಬೆಳೆ ಬೆಳೆದ ಗಿರಿಯಾಪುರದ ಕೃಷಿಕ

ಬಾಲು ಮಚ್ಚೇರಿ
Published 26 ಜುಲೈ 2022, 19:30 IST
Last Updated 26 ಜುಲೈ 2022, 19:30 IST
ಈರುಳ್ಳಿ ಬೆಳೆಯ ಮುಂದೆ ಹಾಲಪ್ಪ
ಈರುಳ್ಳಿ ಬೆಳೆಯ ಮುಂದೆ ಹಾಲಪ್ಪ   

ಕಡೂರು: ತಾಲ್ಲೂಕಿನ ಗಿರಿಯಾಪುರದ ಜಿ. ಹಾಲಪ್ಪ ಅವರು ತಮ್ಮ 8 ಎಕರೆ ಬರಡು ಜಮೀನಿನಲ್ಲೂ ಮಿಶ್ರಬೆಳೆಯನ್ನು ಬೆಳೆದು ಕೈತುಂಬ ಆದಾಯ ಪಡೆಯುತ್ತಿದ್ದಾರೆ.

ಕೊಳವೆ ಬಾವಿಯೇ ಅವರ ಕೃಷಿಗೆ ಜಲಮೂಲ. ಅದನ್ನು ನಂಬಿಕೊಂಡು ಟೊಮೆಟೊ, ಕೊತ್ತಂಬರಿ, ಈರುಳ್ಳಿ, ಮೆಣಸಿನಕಾಯಿ ಮುಂತಾದ ಮಿಶ್ರಬೆಳೆ ಬೆಳೆದಿದ್ದಾರೆ. ಎಲ್ಲದಕ್ಕೂ ತುಂತುರು ಮತ್ತು ಹನಿ ನೀರಾವರಿ ಪದ್ಧತಿಯಲ್ಲಿ ಅಗತ್ಯವಿದ್ದಷ್ಟು ನೀರು ಕೊಡುತ್ತಾರೆ.

ಗಮನಾರ್ಹ ವಿಷಯವೆಂದರೆ ಇವರು ಕ್ರಿಮಿನಾಶಕ, ರಾಸಾಯನಿಕ ಗೊಬ್ಬರ ಬಳಸುವುದಿಲ್ಲ. ಸಾವಯವ ಪದ್ಧತಿಯಲ್ಲೆ ಎಲ್ಲವನ್ನೂ ಬೆಳೆಯುತ್ತಾರೆ. ಹವಾಮಾನಕ್ಕೆ ತಕ್ಕಂತೆ ಮತ್ತು ಹಂಗಾಮು ಆಧರಿಸಿ ಯಾವ ಬೆಳೆ ಬೆಳೆಯಬೇಕೆಂದು ನಿರ್ಧರಿಸುತ್ತಾರೆ.

ADVERTISEMENT

ಕಡೂರು ರೈತ ಉತ್ಪಾದಕ ಕಂಪನಿಯ ನಿರ್ದೇಶಕರಾಗಿರುವ ಅವರು ಕೃಷಿ ಮತ್ತು ತೋಟಗಾರಿಕಾ ಇಲಾಖೆಯ ಜೊತೆ ಸಮನ್ವಯವಿಟ್ಟುಕೊಂಡು ರೈತರಿಗೆ ಸರ್ಕಾರದ ವತಿಯಿಂದ ಸಿಗುವ ಸವಲತ್ತುಗಳನ್ನು ಪಡೆಯುವ ಮತ್ತು ಅಗತ್ಯವಿದ್ದವರಿಗೆ ಕೃಷಿ ಪರಿಕರಗಳನ್ನು ಒದಗಿಸುವ ಕಾಯಕವನ್ನು ಮಾಡುತ್ತಾರೆ.

ಮಿಶ್ರಬೆಳೆ ಪದ್ಧತಿಯಲ್ಲಿ ಒಂದು ಉತ್ಪನ್ನಕ್ಕೆ ಬೆಲೆ ಕಡಿಮೆಯಾದರೂ ಮತ್ತೊಂದಕ್ಕೆ ಬೆಲೆ ದೊರೆಯುತ್ತದೆ. ಮಾರುಕಟ್ಟೆಗೂ ತೊಂದರೆಯಿಲ್ಲ. ಜಮೀನಿಗೆ ಬಂದು ಖರೀದಿಸುತ್ತಾರೆ ಎನ್ನುವ ಅವರು, ಏಕಬೆಳೆ ಪದ್ಧ‌ತಿ ಎಂದಿಗೂ ಅಪಾಯಕಾರಿ ಎನ್ನುತ್ತಾರೆ.

ಇಂದು ಕೃಷಿಗೆ ಬಂದವರು ಬಹಳ ಅವಸರದ ಮನೋಭಾವವುಳ್ಳವರು. ಬಹುಬೇಗ ಲಾಭ ಪಡೆಯುವ ಆಸೆಯಿರುತ್ತದೆ. ಆದರೆ, ತಾಳ್ಮೆಯಿಂದ ವೈಜ್ಞಾನಿಕವಾಗಿ ಒಂದಿಷ್ಟು ಮಾಹಿತಿ ಪಡೆದು, ಹವಾಮಾನ, ಮಾರುಕಟ್ಟೆ ಅಧ್ಯಯನ ಮಾಡಿ ಸರಿಯಾದ ಸಮಯದಲ್ಲಿ ಮಾಡುವ ಸುಸ್ಥಿರ ಕೃಷಿಯಿಂದ ಆರ್ಥಿಕ ಲಾಭ ಮತ್ತು ನೆಮ್ಮದಿ ಪಡೆಯಬಹುದು. ಕೃಷಿಗೆ ಬರುವ ಯುವಕರು ಸ್ವತಃ ಶ್ರಮ ಹಾಕಬೇಕು. ಕೂಲಿಯಾಳುಗಳನ್ನೇ ನೆಚ್ಚಿಕೊಂಡರೆ ಕೃಷಿ ಕಷ್ಟ ಎನ್ನುವ ಹಾಲಪ್ಪ ಅವರಿಗೆ ತಾಯಿ ಕಮಲಾ ಗಿರೀಶ್ ಅವರ ಮಾರ್ಗದರ್ಶನ ಮತ್ತು ಪತ್ನಿ ಸವಿತಾ ಅವರ ಸಹಕಾರವಿದೆ. ಹಾಲಪ್ಪ ಅವರ ಮೊಬೈಲ್‌– 98805 55651.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.