ಕಡೂರು: ಬಯಲು ಸೀಮೆಗೆ ಪುನರ್ವಸು ಮಳೆ ನೆಮ್ಮದಿ ನೀಡಿದೆ. ತೆಂಗು, ಅಡಿಕೆ ಬೆಳೆಗಾರರಲ್ಲಿ ಮಂದಹಾಸ ಮೂಡಿದೆ. ಒಂದು ವಾರದಿಂದ ನಿರಂತರ ಸುರಿಯುತ್ತಿರುವ ಮಳೆ ಭೂಮಿಯನ್ನು ಹದಗೊಳಿಸಿದೆ. ಈರುಳ್ಳಿ ಬೆಳೆಗೆ ಜೀವದಾನ ದೊರೆತಿದೆ. ಈರುಳ್ಳಿಯಲ್ಲಿ ಕಳೆ ಕೀಳುವ, ಗೊಬ್ಬರ ಹಾಕುವ ಕಾರ್ಯಕ್ಕೆ ರೈತರು ಮುಂದಾಗಿದ್ದಾರೆ.
ಪ್ರಮುಖ ಬೆಳೆಯಾದ ತೆಂಗು ಮತ್ತು ಅಡಿಕೆ ಕಳೆದ ವರ್ಷ ಮಳೆ ಕೊರತೆ ಕಾಡಿತ್ತು. ಈ ಬಾರಿ ಕಡೂರು ತಾಲ್ಲೂಕು ಒಂದರಲ್ಲೇ ಅಂದಾಜು 3,500 ಎಕರೆ ಪ್ರದೇಶದಲ್ಲಿ ಅಡಿಕೆ ಗಿಡ ನಾಟಿ ಮಾಡಲಾಗಿದೆ. ಮುಂಗಾರು ಪೂರ್ವ ಮಳೆ ಚೆನ್ನಾಗಿ ಸುರಿದರೂ, ಮುಂಗಾರು ಕ್ಷೀಣಿಸಿದಾಗ ರೈತರು ಆತಂಕದಲ್ಲಿದ್ದರು. ಇದೀಗ ಸತತ ಮಳೆಯಿಂದ ರೈತರಲ್ಲಿ ಆಶಾಭಾವನೆ ಮೂಡಿದೆ.
ಆರಂಭಿಕ ಮುಂಗಾರು ಕ್ಷೀಣವಾಗಿದ್ದರಿಂದ ತಾಲ್ಲೂಕಿನಲ್ಲಿ ವಾಣಿಜ್ಯ ಬೆಳೆಯಾದ ಹತ್ತಿ ನಿರೀಕ್ಷಿತ ಪ್ರಮಾಣದಲ್ಲಿ ಬಿತ್ತನೆಯಾಗಿರಲಿಲ್ಲ. ಈ ಬಾರಿ ಈರುಳ್ಳಿ ಬೆಳೆಯನ್ನು ಗಣನೀಯ ಪ್ರಮಾಣದಲ್ಲಿ ಬಿತ್ತನೆ ಮಾಡಲಾಗಿದೆ. ಈ ವರ್ಷ ತಾಲ್ಲೂಕಿನಾದ್ಯಂತ ಐದು ಸಾವಿರ ಎಕರೆ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆಯಾಗಿದೆ.663 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆಯಲಾಗಿದೆ. ರಾಗಿ ಇನ್ನೇನು ಬಿತ್ತನೆಯಾಗಬೇಕಿದ್ದು, ಅದಕ್ಕೆ ಪೂರಕವಾಗಿ ಉತ್ತಮ ಮಳೆಯಾಗಿದೆ.
ತಾಲ್ಲೂಕಿನ ಎರಡು ನದಿಗಳಾದ ವೇದಾ ಮತ್ತು ಆವತಿ (ವೇದಾವತಿ) ನದಿಗಳು ಇನ್ನೂ ಮೈದುಂಬಿ ಹರಿಯಲು ಆರಂಭಿಸಿಲ್ಲ. ಎರಡು ಜೀವನಾಡಿ ಕೆರೆಗಳಾದ ಮದಗದ ಕೆರೆ ಮತ್ತು ಅಯ್ಯನ ಕೆರೆಗಳಿಗೆ ನೀರು ಹರಿದುಬರುತ್ತಿದೆ. ಮಳೆ ಮುಂದುವರಿದರೆ ಇನ್ನೊಂದು ವಾರದಲ್ಲಿ ಮದಗದ ಕೆರೆ ಭರ್ತಿಯಾಗಿ ಕೋಡಿ ಹರಿಯಬಹುದು ಎಂದು ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ ಮಂಜುನಾಥ್ ಹೇಳಿದರು. ಅಯ್ಯನಕೆರೆಯ ವಿಸ್ತಾರ ದೊಡ್ಡದಿರುವುದರಿಂದ ಕೆರೆ ಪೂರ್ಣ ತುಂಬಲು ಎರಡು ವಾರಗಳು ಬೇಕಿದೆ ಎಂದು ಎಇ ದಯಾಶಂಕರ್ ತಿಳಿಸಿದರು. ಇವೆರಡೂ ಕೆರೆಗಳು ತುಂಬಿ ಕೋಡಿ ಹರಿದರೆ ವೇದಾವತಿ ನದಿಗೆ ಜೀವಕಳೆ ಬರಲಿದೆ.
ಮಳೆ ವಿವರ: ಜುಲೈ 12ರಿಂದ 19ರವರೆಗೆ (ಸೆ.ಮೀಗಳಲ್ಲಿ)
ಕಡೂರು( ಕಸಬಾ): 26.52
ಬೀರೂರು: 25.0
ಹಿರೇನಲ್ಲೂರು:23.58
ಸಖರಾಯಪಟ್ಟಣ: 21.6
ಯಗಟಿ: 15.76
ಸಿಂಗಟಗೆರೆ: 28.62
ಉತ್ತಮ ಮಳೆಯಾಗಿರುವುದು ರಾಗಿ ಬಿತ್ತನೆಗೆ ಅನುಕೂಲವಾಗಿದೆ.ಈಗಾಗಲೇ 1 ಸಾವಿರ ಕ್ವಿಂಟಲ್‌ನಷ್ಟು ಬಿತ್ತನೆಗಾಗಿ ರಾಗಿ ವಿತರಿಸಲಾಗಿದೆ. ಹೆಚ್ಚುವರಿ 800 ಕ್ವಿಂಟಲ್‌ಗೆ ಬೇಡಿಕೆ ಸಲ್ಲಿಸಲಾಗಿದೆಅಶೋಕ್ ಕೃಷಿ ಸಹಾಯಕ ನಿರ್ದೇಶಕ
ಉತ್ತಮ ಮಳೆಯಾಗಿರುವುದು ತೆಂಗು ಮತ್ತು ಅಡಿಕೆ ಬೆಳೆಗೆ ಅನುಕೂಲಕರವಾಗಿದೆ. ಮಳೆ ಮುಂದುವರಿದರೆ ಈರುಳ್ಳಿ ಬೆಳೆಗೆ ತೊಂದರೆಯಾಗುವ ಸಾಧ್ಯತೆ ಇದೆಜಯದೇವ್ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.