
ಕಡೂರು: ಜೀವನದಲ್ಲಿ ಗುರಿ ಇದ್ದು, ನಿಮ್ಮ ಬೆಂಬಲಕ್ಕೆ ಗುರು ಇದ್ದರೆ ಖಂಡಿತವಾಗಿಯೂ ಸಾಧಕರಾಗುವಿರಿ ಎಂದು ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಕೆ.ಎಂ. ಇಂದ್ರೇಶ್ ಹೇಳಿದರು.
ಕಡೂರು ತಾಲ್ಲೂಕು ದೇವನೂರಿನ ಶ್ರೀಲಕ್ಷ್ಮೀಶ ವಿದ್ಯಾಸಂಸ್ಥೆಯು ಶನಿವಾರ ಹಮ್ಮಿಕೊಂಡಿದ್ದ ಸುವರ್ಣ ಸಂಭ್ರಮ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾವು ಹುಟ್ಟಿದ ಊರು, ಓದಿದ ಶಾಲೆ ಸ್ವರ್ಗಕ್ಕೆ ಸಮಾನವಾದರೆ ಗೆಳೆತನದ ಸವಿನೆನಪುಗಳು ಅಮೃತ ಸಮಾನ. ನಾವು ಯಾವುದೇ ಹಂತ ತಲುಪಿದರೂ ಈ ವಿಷಯಗಳನ್ನು ಮರೆಯಬಾರದು. ನಾನು ಈ ಶಾಲೆಯಲ್ಲಿ 72-73ನೇ ಸಾಲಿನ ವಿದ್ಯಾರ್ಥಿಯಾಗಿದ್ದೆ, ಗುರುಗಳು ಎಲ್ಲರೂ ಹೋಗುವ ಹಾದಿಯಲ್ಲ ಹೋಗಬೇಡ. ವಿನೂತನ ಹಾದಿಯಲ್ಲಿ ಸಾಗು ಎಂದು ಅಂದು ಹೇಳಿದ್ದು ಈಗ ಹೇಳಿದಂತಿದೆ. ಅದರಂತೆ ಹಲವರು ನಮ್ಮ ಬದುಕಿಗೆ ವಿನೂತನ ಮಾರ್ಗಗಳನ್ನು ಅನುಸರಿಸಿ ಗುರುಗಳ ಮಾರ್ಗದರ್ಶನದಿಂದ ಉನ್ನತಿಯ ಹಾದಿಯಲ್ಲಿ ಸಾಗುವಂತಾಯಿತು. ನಾವು ಕಲಿತ ಶಾಲೆಯ ಅಭ್ಯುದಯಕ್ಕಾಗಿ ಹಿರಿಯ ವಿದ್ಯಾರ್ಥಿಗಳು ಸೇರಿಕೊಂಡು, ಶಾಲೆಯ 59ರ ಹರೆಯದ ಸಂಭ್ರಮವನ್ನು ಆಚರಿಸುತ್ತಿದ್ದೇವೆ. ಎಲ್ಲರೂ ಸೇರಿ ಶಾಲೆಯನ್ನು ನವೀಕರಣ ಮಾಡಿ, ನಾವು ಓದಿದ ಶಾಲೆಗೆ ಕೃತಜ್ಞತೆ ಸಲ್ಲಿಸಿದ್ದೇವೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರೌಢಶಾಲಾ ಮುಖ್ಯ ಶಿಕ್ಷಕ ಎನ್.ಸಿ. ಗುರುಮೂರ್ತಿ, ‘ಈ ಶಾಲೆ 1967ರಲ್ಲಿ ಪ್ರಾರಂಭವಾಗಿದ್ದು, ಇಂದಿಗೆ 59 ವರ್ಷ ಸಂದಿವೆ. ನಾನೂ ಸಹ ಈ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದೇನೆ. ಹಿರಿಯ ವಿದ್ಯಾರ್ಥಿಗಳು ಸೇರಿ ಸುಮಾರು ₹40 ಲಕ್ಷ ವೆಚ್ಚದಲ್ಲಿ ಶಾಲೆಯನ್ನು ನವೀಕರಣ ಮಾಡಿ, ವಿದ್ಯಾರ್ಥಿಗಳಿಗೆ ಉತ್ತಮ ವಾತಾವರಣ ಕಲ್ಪಿಸಲು ನೆರವಾಗಿದ್ದಾರೆ. ಅವರಿಗೆ ಎಲ್ಲರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ. ಜೀವನ ಸುಗಮವಾಗಿರಲು ಯಾವಾಗಲೂ ಚಿಂತೆಯ ಬೆನ್ನು ಬಿಟ್ಟು ಚಿಂತನೆಯ ಕಡೆಗೆ ಗಮನವಿರಲಿ’ ಎಂದು ಸಲಹೆ ನೀಡಿದರು.
ಚಟ್ನಹಳ್ಳಿ ಮಹೇಶ್ ಉಪನ್ಯಾಸ ನೀಡಿ ಮಾತನಾಡಿ, ‘ಹಳೇ ನೆನಪುಗಳನ್ನು ರಸಗಳಿಗೆ ಮಾಡಿ ಮೆಲುಕು ಹಾಕುವುದು ಉತ್ತಮ ವ್ಯಕ್ತಿತ್ವದ ಲಕ್ಷಣ. ಸಮಾಜ ಕಟ್ಟಬೇಕಾದರೆ ಶಿಸ್ತಿನ ಜೀವನ ಮುಖ್ಯ. ಪ್ರೀತಿ ನಮ್ಮ ಜೀವನ ಸೂತ್ರವಾಗಬೇಕು ಮತ್ತು ಜೀವನಸ್ಫೂರ್ತಿ ಎಂದಿಗೂ ಬತ್ತಬಾರದು. ಗುರುಗಳು ಯಾವಾಗಲೂ ಮಕ್ಕಳಿಗೆ ಜ್ಞಾನ ತುಂಬುವ ನೀರಿನ ಒರತೆ ಅಥವಾ ಜೀವನದಿಯಾಗಿರಬೇಕು. ಇತ್ತೀಚೆಗೆ ಮಕ್ಕಳು ‘ಆಡಿ ಆಡಿ ದಣಿಯುತ್ತಿಲ್ಲ, ನೋಡಿ ನೋಡಿ ದಣಿಯುತ್ತಿದ್ದಾರೆ’, ಇದು ತಪ್ಪಬೇಕು. ಹಿರಿಯ ವಿದ್ಯಾರ್ಥಿಗಳು ಉದಾರ ಮನಸ್ಸಿನಿಂದ ಶಾಲೆಯನ್ನು ಅತ್ಯುತ್ತಮವಾದ ರೀತಿಯಲ್ಲಿ ನವೀಕರಣ ಮಾಡಿ ವಿದ್ಯಾರ್ಥಿ ಸಮುದಾಯಕ್ಕೆ ಮಾದರಿಯಾಗಿದ್ದಾರೆ. ಪೋಷಕರು ಇಂತಹ ಶಾಲೆಗಳಿಗೆ ಮಕ್ಕಳನ್ನು ಸೇರಿಸಬೇಕು’ ಎಂದರು.
ದೇವನೂರು ಗ್ರಾ.ಪಂ. ಅಧ್ಯಕ್ಷೆ ದೀಪಾ ದಕ್ಷಿಣಮೂರ್ತಿ, ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಎಸ್.ಬಿ. ಬಸವರಾಜು, ಜಿ.ಪಂ. ಮಾಜಿ ಉಪಾಧ್ಯಕ್ಷ ಜಿ.ಎನ್. ವಿಜಯಕುಮಾರ್, ನಿವೃತ್ತ ಡಿಡಿಪಿಐ ದೊಡ್ಡಮಲ್ಲಪ್ಪ, ಸರ್ಕಲ್ ಇನ್‌ಸ್ಪೆಕ್ಟರ್ ಶಂಕರ್‌ನಾಯಕ್ ಮಾತನಾಡಿದರು.
ಲಕ್ಷ್ಮೀಶ ವಿದ್ಯಾಸಂಸ್ಥೆಯ ಅಧ್ಯಕ್ಷ ಎಸ್. ಲಕ್ಷ್ಮಣ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾಸಂಸ್ಥೆಯ ಪಾರ್ಥಸಾರಥಿ, ನಿಜಗುಣ, ರಾಮಚಂದ್ರಪ್ಪ, ರವಿಕುಮಾರ್, ಶ್ರೀನಿವಾಸ ರಾಘವನ್, ಪ್ರಾಂಶುಪಾಲ ಪುಟ್ಟಸ್ವಾಮಿನಾಯ್ಕ, ಕುಮಾರ್‌ಗೌಡ, ರಜನಿಕಾಂತ್, ಲೋಕೇಶ, ಚಂದ್ರಪ್ಪ, ಸಂಸ್ಥೆಯ ಕಾರ್ಯದರ್ಶಿ ಎಸ್. ಯತೀಶ್, ಶಿಕ್ಷಕಿ ಪ್ರಮೀಳಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.