ADVERTISEMENT

ಶಾಸಕರ ಮಾದರಿ ಶಾಲೆ; ಕೊರತೆಗಳದ್ದೇ ಪಾರಮ್ಯ

ಬಾಲು ಮಚ್ಚೇರಿ
Published 31 ಜುಲೈ 2024, 6:11 IST
Last Updated 31 ಜುಲೈ 2024, 6:11 IST
ಪಟ್ಟಣದ ಹೃದಯಭಾಗದಲ್ಲಿರುವ ಶಾಸಕರ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಪಟ್ಟಣದ ಹೃದಯಭಾಗದಲ್ಲಿರುವ ಶಾಸಕರ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ   

ಕಡೂರು: 1868ರಲ್ಲಿ ಆರಂಭವಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊರತೆಗಳದ್ದೇ ಕಾರುಬಾರು. ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು 2006ರಲ್ಲಿ ಶಾಸಕರ ಮಾದರಿ ಶಾಲೆಯಾಯಿತು. ಹಳೆ ಕಟ್ಟಡದಲ್ಲಿಯೇ ಇದ್ದ ಈ ಶಾಲೆಗೆ 2020ರಲ್ಲಿ 10 ಕೊಠಡಿಗಳ ಹೊಸ ಕಟ್ಟಡ ನಿರ್ಮಿಸಲಾಗಿದೆ. 1ರಿಂದ 7ರವರೆಗೆ 100 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಐವರು ಶಿಕ್ಷಕರಿದ್ದಾರೆ. ಸುಸಜ್ಜಿತ ಶಾಲಾ ಕಟ್ಟಡವಿದೆ. ಆದರೆ, ‘ಡಿ’ ದರ್ಜೆ ನೌಕರರಿಲ್ಲ. ಎಲ್ಲವನ್ನೂ ಶಿಕ್ಷಕರೇ ನಿರ್ವಹಿಸಬೇಕಾದ‌ ಪರಿಸ್ಥಿತಿಯಿದೆ.

ಕಡೂರಿನ ಮಧ್ಯಭಾಗದಲ್ಲಿರುವ ಈ ಶಾಲೆಯ ಎದುರು ಬಲಭಾಗದಲ್ಲಿ ಗಣಪತಿ ಆಸ್ಥಾನ ಮಂಟಪವಿದ್ದು, ಎಡಭಾಗಕ್ಕೆ ನಿವೃತ್ತ ನೌಕರರ ಸಂಘದ ಕಾರ್ಯಾಲಯವಿದೆ.  ಶಾಲೆಗೆ ಆವರಣ ಗೋಡೆ ಇಲ್ಲದಿರುವುದರಿಂದ ಸಂಜೆ ವೇಳೆ ಯಾವ್ಯಾವುದೋ ವಾಹನಗಳನ್ನು ತಂದು ನಿಲ್ಲಿಸಲಾಗುತ್ತಿದೆ. ಶಾಲಾ ಸಮಯ ಮುಗಿದ ನಂತರ ಕೆಲವು ಕಿಡಿಗೇಡಿಗಳು ಬಂದು ಮದ್ಯಪಾನ ಹಾಗೂ ಊಟ ಮಾಡಿ, ಕಸವನ್ನು ಅಲ್ಲೆ ಎಸೆದು ಹೋಗಿರುತ್ತಾರೆ. ಶಾಲಾ ಆವರಣದಲ್ಲಿ ಬಿದ್ದಿರುವ ಬಾಟಲ್, ಪ್ಲಾಸ್ಟಿಕ್ ತಟ್ಟೆ, ಲೋಟಗಳನ್ನು ನಿತ್ಯ ವಿದ್ಯಾರ್ಥಿಗಳೇ ತೆಗೆದು ಶುಚಿ ಮಾಡುವ ಅನಿವಾರ್ಯತೆಯಿದೆ.

ಮಳೆಗಾಲದಲ್ಲಿ ಶಾಲೆಯ ಎದುರು ನಿಲ್ಲುವ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲ. ಶಾಲೆಗೆ ಕುಡಿಯುವ ನೀರು ಪೂರೈಸುವ ಕೊಳವೆಬಾವಿಗೆ ಇದೇ ನೀರು ಸೇರುವ ಸಂಭವವಿದೆ. ಸದ್ಯಕ್ಕೆ ಶಾಲೆಗೆ ಪುರಸಭೆ ನಲ್ಲಿ ಸಂಪರ್ಕವಿಲ್ಲ.

ADVERTISEMENT

ಶಾಲೆಗೆ ಆವರಣಗೋಡೆ ಕಟ್ಟಿಸಿ, ಕಾವಲುಗಾರನ ವ್ಯವಸ್ಥೆ ಮಾಡಿದರೆ, ಕೀಡಗೇಡಿಗಳ ಹಾವಳಿ ನಿಲ್ಲಸಬಹುದಾಗಿದೆ ಎಂಬುದು ಸಾರ್ವಜನಿಕರು ಕೋರಿದೆ.

ಸುಪ್ರೀಂ ಕೋರ್ಟ್‌ ನ್ಯಾಯಾಧೀಶರಾಗಿದ್ದ ಡಾ.ಎಚ್‌.ಎಲ್. ದತ್ತು, ಶಾಸಕರಾಗಿದ್ದ ಕೆ.ಎಂ.ಕೃಷ್ಣಮೂರ್ತಿ ಈ ಶಾಲೆಯ ವಿದ್ಯಾರ್ಥಿಗಳು.

ಈ ಶಾಲೆಯಲ್ಲಿ ಓದಿದ ನೆನಪು ಮರೆಯಲಾಗದು. ಶಾಲೆಗೆ ಬೇಕಾದ ಮೂಲ ಸೌಕರ್ಯ ನೀಡಲು ಹಳೆವಿದ್ಯಾರ್ಥಿಗಳು ಮುಂದಾಗುತ್ತೇವೆ.
-ಡಾ.ಎಸ್‌.ಎನ್.ಮುರಳಿ ಅಮೆರಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.