ADVERTISEMENT

ಕಡೂರು | ಸಂಪ್ರದಾಯ ಶೋಷಣೆಗೆ ಬಳಕೆಯಾಗದಿರಲಿ: ವಿ.ಹನುಮಂತಪ್ಪ

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2025, 12:26 IST
Last Updated 13 ಮಾರ್ಚ್ 2025, 12:26 IST
ವಿಕಸನ ಸಂಸ್ಥೆ ಕಡೂರಲ್ಲಿ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿದ ನ್ಯಾಯಾಧೀಶ ಹನುಮಂತಪ್ಪ ಮಾತನಾಡಿದರು
ವಿಕಸನ ಸಂಸ್ಥೆ ಕಡೂರಲ್ಲಿ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿದ ನ್ಯಾಯಾಧೀಶ ಹನುಮಂತಪ್ಪ ಮಾತನಾಡಿದರು   

ಕಡೂರು: ಸಂಪ್ರದಾಯಗಳು ಹೆಣ್ಣುಮಕ್ಕಳ ಅಭಿವೃದ್ಧಿಗೆ ಪೂರಕವಾಗಿರಬೇಕೇ ವಿನಾ ಅವರ ಶೋಷಣೆಗಾಗಿ ಬಳಕೆಯಾಗಬಾರದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ವಿ.ಹನುಮಂತಪ್ಪ ಹೇಳಿದರು.

ತರೀಕೆರೆಯ ವಿಕಸನ ಸಂಸ್ಥೆ ಕಡೂರಿನ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಸಂವಿಧಾನ ಸಮಾನತೆಯನ್ನು ನೀಡಿದೆ. ಪುರುಷ ಮತ್ತು ಮಹಿಳೆಯರು ಸಮಾನರೆಂದು ಪ್ರತಿ ಹಂತದಲ್ಲಿಯೂ‌ ಪ್ರತಿಪಾದಿಸಲಾಗುತ್ತದೆ. ಆದರೆ, ವಾಸ್ತವದಲ್ಲಿ ಹೆಣ್ಣು ಮಕ್ಕಳನ್ನು ಸಂಪ್ರದಾಯದ ಹೆಸರಲ್ಲಿ ಕಟ್ಟುಪಾಡುಗಳಲ್ಲಿ ಉಳಿಸಲಾಗಿದೆ. ಮಹಿಳಾ ಸಬಲೀಕರಣಕ್ಕಾಗಿ ಬಹಳಷ್ಟು ಕಾನೂನುಗಳಿವೆ. ಅವುಗಳ ಸಮರ್ಪಕ ಅನುಷ್ಠಾನವಾಗಬೇಕು ಎಂದರು.

ADVERTISEMENT

ಹೆಣ್ಣನ್ನು ವ್ಯಾಪಾರೀಕರಣದ ದೃಷ್ಟಿಯಿಂದ ನೋಡಲಾಗುತ್ತದೆ. ಪುರುಷರಷ್ಟೇ ಸಮರ್ಥವಾಗಿರುವ ಮಹಿಳೆಯರನ್ನು ಮಣಿಸಲು ಭಾವನಾತ್ಮಕ ಅಸ್ತ್ರಗಳನ್ನು ಪ್ರಯೋಗಿಸಲು ಸಮಾಜ ಮುಂದಾಗುತ್ತದೆ. ಇವೆಲ್ಲವೂ ತಪ್ಪಬೇಕು. ಪುರುಷರಷ್ಟೇ ಪ್ರಾಧಾನ್ಯತೆ ಮಹಿಳೆಯರಿಗೂ ದೊರೆಯಬೇಕು. ಹೆಣ್ಣು ಮಕ್ಕಳಿಗೆ ಶಿಕ್ಷಣ ದೊರೆಯಬೇಕು. ಮಹಿಳಾ ಸಾಕ್ಷರತೆಯಲ್ಲಿ ಶ್ರಮಿಸಿದ ಸಾವಿತ್ರಿ ಬಾಫುಲೆ ನಮಗೆಲ್ಲ ಸ್ಫೂರ್ತಿಯಾಗಬೇಕು ಎಂದ ಅವರು, ಮಹಿಳಾ ಸುರಕ್ಷತೆ ಮತ್ತು ಭ್ರೂಣಲಿಂಗ ಪತ್ತೆ ಕಾನೂನುಗಳ ಬಗ್ಗೆ ವಿವರಿಸಿದರು.

ಕಡೂರು ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಎಚ್.ವಿ.ಸವಿತಾರಾಣಿ ಮಾತನಾಡಿ, ಹೆಣ್ಣು ಮಕ್ಕಳು ಪುರುಷರಷ್ಟೇ ಸಾಧನೆ ಮಾಡಿದ್ದಾರೆ. ಯಾರೇ ಸಾಧನೆ ಮಾಡಿದರೂ ಅದರ ಹಿಂದೆ ತಾಯಿಯ ತ್ಯಾಗವಿದೆ. ಆದ್ದರಿಂದ ಮಹಿಳೆಯರಿಗೆ ಸಮಾನ ಗೌರವ ದೊರೆಯಬೇಕು. ಅವರ ಸುರಕ್ಷತೆ ಎಲ್ಲರ ಕರ್ತವ್ಯವಾಗಬೇಕು ಎಂದರು.

ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಉಪನಿರ್ದೇಶಕ ಮಹಾಂತೇಶ್ ಭಜಂತ್ರಿ, ಆರೋಗ್ಯ ಶಿಕ್ಷಣಾಧಿಕಾರಿ ಬಿ.ಸಿ.ಮಮತಾ, ಸಿಡಿಪಿಒ ಎಸ್.ಎನ್.ಶಿವಪ್ರಕಾಶ್, ಡಿಎಸ್ಎಸ್ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ವಸಂತಕುಮಾರಿ, ವಿಕಸನ ಸಂಸ್ಥೆಯ ಅಧ್ಯಕ್ಷೆ ಎ.ಎಂ‌.ವರ್ಗಿಸ್ ಕ್ಲೀಟಸ್, ವಕೀಲೆ ವಿಭಾ ವರ್ಗಿಸ್, ಲತಾ, ಪುಷ್ಪಾ, ಎಚ್.ಜೆ.ವಿನಾಯಕ, ವಿಕಸನ ಸಂಸ್ಥೆಯ ಸಂಯೋಜಕ ಮುಕುಂದರಾಜ್ ಇದ್ದರು.

Highlights - ಹೆಣ್ಣು ಮಕ್ಕಳಿಗೆ ಶಿಕ್ಷಣ ದೊರೆಯಲಿ ವ್ಯಕ್ತಿಯ ಸಾಧನೆಯ ಹಿಂದೆ ತಾಯಿಯ ತ್ಯಾಗ ಮಹಿಳಾ ಸುರಕ್ಷತೆ ಎಲ್ಲರ ಕರ್ತವ್ಯವಾಗಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.