ADVERTISEMENT

ನಿತ್ರಾಣಗೊಂಡ ಕಡೂರು ಸಾರ್ವಜನಿಕ ಆಸ್ಪತ್ರೆ

ವೈದ್ಯರು, ಸಿಬ್ಬಂದಿ ಕೊರತೆ, ಸೌಲಭ್ಯಗಳಿಲ್ಲದೇ ರೋಗಿಗಳ ಪರದಾಟ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 4:12 IST
Last Updated 23 ಜನವರಿ 2026, 4:12 IST
ಕಡೂರು ಸಾರ್ವಜನಿಕ ಆಸ್ಪತ್ರೆ
ಕಡೂರು ಸಾರ್ವಜನಿಕ ಆಸ್ಪತ್ರೆ   

ಕಡೂರು: ಉತ್ತಮ ಆರೋಗ್ಯ ಸೇವೆಗೆ ಹೆಸರಾಗಿದ್ದ ನಗರದ ಸಾರ್ವಜನಿಕ ಆಸ್ಪತ್ರೆಯು ಈಚೆಗೆ ನಿರ್ವಹಣೆ ಮತ್ತು ವೈದ್ಯರ ಕೊರತೆಯಿಂದ ಸೊರಗಿ ಹೋಗಿದೆ. ತಾಲ್ಲೂಕಿನ ಜನರು ಸಣ್ಣಪುಟ್ಟ ಚಿಕಿತ್ಸೆಗಳಿಗೂ ಖಾಸಗಿ ಆಸ್ಪತ್ರೆ ಹಾಗೂ ದೂರದ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯಬೇಕಾದ ಸನ್ನಿವೇಶ ಎದುರಾಗಿದೆ.

100 ಹಾಸಿಗೆ ಸಾಮರ್ಥ್ಯದ ಕಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿಯ ಕೊರತೆಯೇ ಹೆಚ್ಚು ಕಾಡುತ್ತಿದೆ. ಆಸ್ಪತ್ರೆಗೆ ಮಂಜೂರಾದ 95 ಹುದ್ದೆಗಳಲ್ಲಿ ರೇಡಿಯಾಲಜಿಸ್ಟ್‌, ಅರಿವಳಿಕೆ ತಜ್ಞ, ಲ್ಯಾಬ್‌ ಟೆಕ್ನಿಷಿಯನ್‌, ಎಕ್ಸ್‌-ರೇ ತಂತ್ರಜ್ಞರು, ತುರ್ತು ಚಿಕಿತ್ಸೆ ಸೇವೆಗೆ ಮಂಜೂರಾದ ವೈದ್ಯರ ಹುದ್ದೆ, ಇಸಿಜಿ ತಂತ್ರಜ್ಞರು, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಹುದ್ದೆ ಸೇರಿ ಬರೋಬ್ಬರಿ 53 ಹುದ್ದೆಗಳು ಖಾಲಿ ಇವೆ.

ಮಂಜೂರಾಗಿರುವ 39 ‘ಡಿ’ಗ್ರೂಪ್‌ ನೌಕರರಲ್ಲಿ ಕೇವಲ ಒಬ್ಬರು ಮಾತ್ರ ಕಾಯಂ ನೌಕರ ಇದ್ದಾರೆ. ಫಿಸಿಯೋಥೆರಪಿಸ್ಟ್‌, ಶುಶ್ರೂಷಕ ಮತ್ತಿತರ ಕರ್ತವ್ಯಗಳಲ್ಲಿ ಹೊರಗುತ್ತಿಗೆ ನೌಕರರು ಸೇವೆ ಸಲ್ಲಿಸುತ್ತಿದ್ದಾರೆ. ಹೊರಗುತ್ತಿಗೆ ಕೆಲಸಗಾರರಿಗೆ ಮೂರು ತಿಂಗಳಾದರೂ ಸಂಬಳ ದೊರೆತಿಲ್ಲ ಎನ್ನುವುದು ಆಸ್ಪತ್ರೆಯ ಅವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಕೀಲು–ಮೂಳೆ ತಜ್ಞರು ದೀರ್ಘಾವಧಿ ರಜೆಯಲ್ಲಿದ್ದು ರೋಗಿಗಳ ಗತಿ ದೇವರಿಗೇ ಪ್ರೀತಿ ಎನ್ನುವಂತಾಗಿದೆ.

ADVERTISEMENT

ಅರಿವಳಿಕೆ ತಜ್ಞರ ಕೊರತೆಯಿಂದ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯೇ ನಡೆಯುತ್ತಿಲ್ಲ. ರೇಡಿಯಾಲಜಿಸ್ಟ್ ಹುದ್ದೆ ಖಾಲಿ ಇರುವುದರಿಂದ ಸ್ಕ್ಯಾನಿಂಗ್ ಮಾಡಲು ಯಂತ್ರವಿದ್ದರೂ ಜನರಿಗೆ ಖಾಸಗಿ ನರ್ಸಿಂಗ್ ಹೋಂಗಳೇ ಆಧಾರವಾಗಿವೆ. ಕಳೆದ ತಿಂಗಳಿಂದ ಎಕ್ಸ್‌-ರೇ ಯಂತ್ರ ಹಾಳಾಗಿದ್ದು ದುರಸ್ತಿಯೇ ಕಂಡಿಲ್ಲ. ಎಕ್ಸ್‌-ರೇ ಯಂತ್ರದ ಮದರ್‌ಬೋರ್ಡ್‌ ಹಾಳಾಗಿದ್ದು, ಬಿಡಿಭಾಗವು ಜಪಾನ್‌ನಿಂದ ಬರಬೇಕಾಗಿರುವುದರಿಂದ ತಡವಾಗುತ್ತಿದೆ ಎನ್ನುತ್ತವೆ ಆಸ್ಪತ್ರೆಯ ಮೂಲಗಳು.

ಆಸ್ಪತ್ರೆಯಲ್ಲಿ ಒಬ್ಬರು ಸ್ತ್ರೀರೋಗ-ಪ್ರಸೂತಿ ತಜ್ಞರು ಇದ್ದರೂ ವ್ಯವಸ್ಥೆ ಸರಿ ಇಲ್ಲದೇ ಹೆರಿಗೆ ಪ್ರಮಾಣ ಕುಸಿತ ಕಂಡಿದೆ. 2025 ಜನವರಿಯಿಂದ ಡಿಸೆಂಬರ್ ತನಕ 6,055 ಮಹಿಳೆಯರು ಗರ್ಭ ಪರೀಕ್ಷೆಗೆ ಒಳಪಟ್ಟಿದ್ದು, 133 ಮಹಿಳೆಯರಿಗೆ ಸಹಜ ಹೆರಿಗೆಯಾಗಿದೆ. 244 ಮಹಿಳೆಯರಿಗೆ ಸಿಸೇರಿಯನ್‌ ಮೂಲಕ ಹೆರಿಗೆ ಮಾಡಿಸಲಾಗಿದೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಟ್ಟ ಗರ್ಭಿಣಿಯರ ಪೈಕಿ ಕೇವಲ 377 ಮಹಿಳೆಯರಿಗೆ ಆಸ್ಪತ್ರೆಯಲ್ಲಿ ಹೆರಿಗೆ ನಡೆದಿರುವುದು ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಶೇ 6ರಷ್ಟಿರುವ ಹೆರಿಗೆ ಪ್ರಮಾಣವು ಆಸ್ಪತ್ರೆಯ ಅವಸ್ಥೆಯನ್ನು ಸೂಚಿಸುತ್ತದೆ. ನಿತ್ಯ ಭೇಟಿ ನೀಡುತ್ತಿದ್ದ ಸುಮಾರು 800 ರೋಗಿಗಳ ಸಂಖ್ಯೆ ಈಗ 400 ರಿಂದ 450ಕ್ಕೆ ಕುಸಿದಿದೆ.

ಆಸ್ಪತ್ರೆಯಲ್ಲಿ ನಗುಮಗು ಸೇರಿ ನಾಲ್ಕು ಆಂಬುಲೆನ್ಸ್‌ಗಳಿವೆ. ಕೇವಲ ಒಬ್ಬರು ಮಾತ್ರ ಕಾಯಂ ಚಾಲಕ ಇದ್ದಾರೆ. ಹೆದ್ದಾರಿ ಬದಿಯೇ ಪಟ್ಟಣ ಹಾಗೂ ಆಸ್ಪತ್ರೆ ಇರುವುದರಿಂದ ಇಲ್ಲಿ ತುರ್ತು ಚಿಕಿತ್ಸೆಗೆ ಆಸ್ಪತ್ರೆ ಸನ್ನದ್ಧವಾಗಿಯೇ ಇರಬೇಕಾದರೂ ಸೌಕರ್ಯಗಳ ಕೊರತೆಯಿಂದ ಬಡಜನರಿಗೆ ಆರೋಗ್ಯ ಸೇವೆ ಮರೀಚಿಕೆಯಾಗಿದೆ.

ಒಂದು ವಾರದೊಳಗೆ ಎಕ್ಸ್‌-ರೇ ಯಂತ್ರ ದುರಸ್ತಿಯಾಗಲಿದೆ. ಹುದ್ದೆಗಳ ಕೊರತೆ ನಡುವೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ತಜ್ಞ ವೈದ್ಯರು ತಂತ್ರಜ್ಞರ ಹುದ್ದೆಗಳೂ ಕೆಲ ದಿನಗಳಲ್ಲಿ ಭರ್ತಿಯಾಗಲಿವೆ
ಡಾ.ಚಂದಾ ಕಡೂರು, ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ

‘ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆ (ಎಬಿಎಆರ್‌ಕೆ) ಮತ್ತು ಎಆರ್‌ಎಸ್ ಯೋಜನೆಗಳಿಂದ ₹69 ಲಕ್ಷ ನಿಧಿ ಇದ್ದು ಅಗತ್ಯವಿರುವ ಕಡೆ ಬಳಕೆ ಮಾಡಲಾಗುತ್ತದೆ.ಶಾಸಕರ ನೇತೃತ್ವದಲ್ಲಿಯೇ ಆಸ್ಪತ್ರೆಗೆ ಭೇಟಿ ನೀಡಿದ್ದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರಿಗೆ ಇಲ್ಲಿನ ಖಾಲಿ ಹುದ್ದೆಗಳ ಭರ್ತಿಯೂ ಸೇರಿ ಸೌಲಭ್ಯಗಳ ಕುರಿತು ಮನವಿ ಸಲ್ಲಿಸಲಾಗಿದೆ’ ಎಂದು ಕಡೂರು ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಚಂದಾ ಪ್ರತಿಕ್ರಿಯಿಸಿದರು.

ಜಿಲ್ಲಾಸ್ಪತ್ರೆಯತ್ತ ಕೈತೋರುವ ವೈದ್ಯರು!

ರಾತ್ರಿ ಪಾಳಿಯಲ್ಲಿ  ಕರ್ತವ್ಯ ನಿರ್ವಹಿಸುವ ವೈದ್ಯರು ಅಪಘಾತದ ಗಾಯಾಳುಗಳು ತುರ್ತು ಚಿಕಿತ್ಸೆಗೆ ಬರುವ ರೋಗಿಗಳನ್ನು ಪರೀಕ್ಷಿಸಿ ಕೂಡಲೇ ಶಿವಮೊಗ್ಗ ಚಿಕ್ಕಮಗಳೂರಿನತ್ತ ದಾರಿ ತೋರಿಸುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ. ಹತ್ತಿರವೇ ಇದ್ದ ಬೀರೂರು ಆಸ್ಪತ್ರೆಯ ಸ್ಥಿತಿಯೂ ತೀರಾ ಕಳಪೆಯಾಗಿದೆ. ಶಾಸಕ ಕೆ.ಎಸ್‌.ಆನಂದ್‌ ಅವರು ಆಸ್ಪತ್ರೆಗೆ ಭೇಟಿ ನೀಡಿ ಸೌಲಭ್ಯಗಳ ಪರಿಶೀಲನೆ ಮಾಡಬೇಕು. ಖಾಲಿ ಇರುವ ಹುದ್ದೆಗಳ ಭರ್ತಿಗೆ ಶಾಸಕರು ಸರ್ಕಾರದ ಗಮನಸೆಳೆಯಬೇಕು ಎಂದು ಒತ್ತಾಯಿಸಿದ್ದಾರೆ.

ಕೀಲು-ಮೂಳೆ ತಜ್ಞರ ಕೊಠಡಿ ಬೀಗ ಹಾಕಿರುವುದು.
ಕಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಖಾಲಿ ಖಾಲಿ ಇರುವ ಬೆಡ್‌ಗಳು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.