ADVERTISEMENT

ಕಡೂರು: ಮಹಿಳೆಯ ಶವ ಕುಟುಂಬಸ್ಥರಿಗೆ ಹಸ್ತಾಂತರ

ಆಲಘಟ್ಟದಲ್ಲಿ ಪತ್ನಿ ಕೊಂದು ಶವ ಹೂತಿಟ್ಟ ಪ್ರಕರಣ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 6:07 IST
Last Updated 20 ಅಕ್ಟೋಬರ್ 2025, 6:07 IST
ಕಡೂರು ತಾಲ್ಲೂಕು ಕಸಬಾ ಹೋಬಳಿಯ ಆಲಘಟ್ಟ ಗ್ರಾಮದಲ್ಲಿ ಕೊಲೆ ಮಾಡಿ ಹೂತಿಟ್ಟಿದ್ದ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಭಾನುವಾರ ಜೆಸಿಬಿ ಯಂತ್ರದ ನೆರವಿನಿಂದ ಹೊರತೆಗೆಯಲಾಯಿತು
ಕಡೂರು ತಾಲ್ಲೂಕು ಕಸಬಾ ಹೋಬಳಿಯ ಆಲಘಟ್ಟ ಗ್ರಾಮದಲ್ಲಿ ಕೊಲೆ ಮಾಡಿ ಹೂತಿಟ್ಟಿದ್ದ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಭಾನುವಾರ ಜೆಸಿಬಿ ಯಂತ್ರದ ನೆರವಿನಿಂದ ಹೊರತೆಗೆಯಲಾಯಿತು   

ಕಡೂರು: ತಾಲ್ಲೂಕಿನ ಆಲಘಟ್ಟ ಗ್ರಾಮದ ವಿಜಯಕುಮಾರ ಎಂಬಾತ ತನ್ನ ಪತ್ನಿಯನ್ನು ಕೊಂದು ಜಮೀನಿನಲ್ಲಿದ್ದ ವಿಫಲ ಕೊಳವೆಬಾವಿಯಲ್ಲಿ ಹೂತಿಟ್ಟಿದ್ದ ಶವವನ್ನು ಕಡೂರು ಪೊಲೀಸರು ಭಾನುವಾರ ತಹಶೀಲ್ದಾರ್ ಸಮ್ಮುಖದಲ್ಲಿ ಜೆಸಿಬಿ ಯಂತ್ರದ ಸಹಾಯದಿಂದ ಹೊರತೆಗೆದರು. ಮರಣೋತ್ತರ ಪರೀಕ್ಷೆ ನಡೆಸಿ, ಅಂತ್ಯಸಂಸ್ಕಾರ ನೆರವೇರಿಸಲು ಮೃತಳ ಕುಟುಂಬಸ್ಥರಿಗೆ ಹಸ್ತಾಂತರಿಸಿದರು.

ವರದಕ್ಷಿಣೆಯ ಹಣಕಾಸಿನ ವಿಚಾರದ ನೆಪದಲ್ಲಿ ಪತ್ನಿ ಭಾರತಿಗೆ ಮಾನಸಿಕವಾಗಿ ಕಿರುಕುಳ ನೀಡಿ ಕೊಲೆ ಆಲಘಟ್ಟ ಗ್ರಾಮದ, ಆರೋಪಿ ಪತಿ ವಿಜಯಕುಮಾರ್ ಸೆ.3ರ ರಾತ್ರಿ ಕೊಲೆ ಮಾಡಿದ್ದ. ತಂದೆ ಗೋವಿಂದಪ್ಪನ ನೆರವಿನೊಂದಿಗೆ ಮನೆಯಿಂದ ಬೈಕ್‌ನಲ್ಲಿ ಶವವನ್ನು ತಂದು ಕೊಳವೆಬಾವಿಯ 12 ಅಡಿ ಆಳದ ಗುಂಡಿಯಲ್ಲಿ ಶವ ಇಳಿಸಿದ್ದರು. ಬಳಿಕ ಎಂ.ಸ್ಯಾಂಡ್ ಮತ್ತು ಗೋಣಿಚೀಲ ಹಾಕಿ ಮುಚ್ಚಿಟ್ಟು ಪತ್ನಿ ಕಾಣೆಯಾಗಿರುವ ಬಗ್ಗೆ ಠಾಣೆಯಲ್ಲಿ ನಾಪತ್ತೆ ಪ್ರಕರಣದಡಿ ಸುಳ್ಳು ದೂರು ನೀಡಿದ್ದ.

ಪ್ರಕರಣ ಕೈಗೆತ್ತಿಕೊಂಡಿದ್ದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದರು. ಮಗಳಿಗೆ ಕಿರುಕುಳ ನೀಡಿ ಕೊಲೆ ಮಾಡಿರುವ ಆರೋಪದಡಿ ಮೃತ ಭಾರತಿಯ ತಾಯಿ ನೀಡಿದ್ದ ದೂರನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಕೃತ್ಯ ನಡೆಸಿರುವುದು ಗೊತ್ತಾಗಿತ್ತು. ಆರೋಪಿಗಳು ವಿಚಾರಣೆ ವೇಳೆಯಲ್ಲಿ ಶವಹೂತಿಟ್ಟ ಬಗ್ಗೆ ತಪ್ಪೊಪ್ಪಿಕೊಂಡು ಅ.14ರಂದು ಸ್ಥಳ ಮಹಜರು ನಡೆಸಲಾಗಿತ್ತು.

ADVERTISEMENT

ಹೂತಿಟ್ಟ ಶವ ಹೊರತೆಗೆಯಲು ತರೀಕೆರೆ ಉಪವಿಭಾಗಾಧಿಕಾರಿಗೆ ಅರ್ಜಿ ಸಲ್ಲಿಸಿದ ಪೊಲೀಸರು ಅವರ ನಿರ್ದೇಶನದಂತೆ ಕಡೂರು ತಹಶೀಲ್ದಾರ್‌ ಸಿ.ಎಸ್‌.ಪೂರ್ಣಿಮಾ ಅವರಿಂದ ಕಾನೂನಾತ್ಮಕ ಅನುಮತಿ ಪಡೆದು ಅವರ ಉಪಸ್ಥಿತಿಯಲ್ಲಿಯೇ ಜೆಸಿಬಿ ಯಂತ್ರದಿಂದ ಗುಂಡಿ ತೆಗೆದು ಶವವನ್ನು ಹೊರ ತೆಗೆಯಲಾಯಿತು. ಅರೆಬರೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಶವದ ಮಾದರಿಗಳನ್ನು ಎಫ್ಎಸ್ಎಲ್ ತಂಡದ ತಜ್ಞರು ಸಂಗ್ರಹಿಸಿದರು.  ಬಳಿಕ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಕೊಲೆಗೀಡಾದ ಭಾರತಿಯ ದೇಹ ಹೊರತೆಗೆಯುತ್ತಿದ್ದಂತೆ ಮೃತಳ ತಾಯಿಯ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತು. ಮೃತದೇಹ ಹೊರತೆಗೆಯಲು ಪೊಲೀಸರು ಅಧಿಕಾರಿಗಳ ತಂಡದೊಂದಿಗೆ ಬರುತ್ತಿದ್ದಂತೆ ಸುತ್ತಮುತ್ತಲ ಗ್ರಾಮಸ್ಥರು ಜಮೀನಿನ ಬಳಿ ಸೇರಿದ್ದರು.

ತರೀಕೆರೆ ಡಿವೈಎಸ್‌ಪಿ ಪರಶುರಾಮಪ್ಪ, ಕಡೂರು ಸಿಪಿಐ ರಫೀಕ್ ಎಂ., ಪಿಎಸ್‌ಐಗಳಾದ ಸಜಿತ್‌ಕುಮಾರ್‌, ಧನಂಜಯ್, ಕಂದಾಯ ನಿರೀಕ್ಷಕ ರವಿಕುಮಾರ್, ಪೊಲೀಸ್ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.