ಕಳಸ: ಕಳಸ-ಕುದುರೆಮುಖ-ಎಸ್.ಕೆ.ಬಾರ್ಡರ್ ರಸ್ತೆಯಲ್ಲಿ ಗುಂಡಿಗಳ ಅಕ್ಕ–ಪಕ್ಕ ರಸ್ತೆಯನ್ನು ಹುಡುಕಿ ವಾಹನ ಚಲಾಯಿಸಬೇಕಾಗಿದೆ. ನಮ್ಮ ವಾಹನಗಳ ವೀಲ್ ಅಲೈನ್‍ಮೆಂಟ್ ತಿಂಗಳಿಗೊಮ್ಮೆ ಮಾಡಿಸಬೇಕಿದೆ. ಟೈರ್, ಸಸ್ಪೆನ್ಷನ್ ಕೂಡ ಅರ್ಧಕ್ಕರ್ಧ ಬಾಳಿಕೆ ಬರುತ್ತಿಲ್ಲ. ಇದರಿಂದ ವಾಹನ ಮಾಲೀಕರಿಗೆ ವಿಪರೀತ ನಷ್ಟ ಆಗುತ್ತಿದೆ.... ಇದು ತಾಲ್ಲೂಕಿನ ಪ್ರವಾಸಿ ವಾಹನಗಳ ಮಾಲೀಕ ಸುಜಿತ್ ಹೇಳುವ ಮಾತು.
ತಾಲ್ಲೂಕಿನ ಕುದುರೆಮುಖ-ಎಸ್.ಕೆ.ಬಾರ್ಡರ್, ಕಳಸ-ಕೊಟ್ಟಿಗೆಹಾರ, ಕಳಸ-ಬಾಳೆಹೊನ್ನೂರು, ಕಳಸ- ಹೊರನಾಡು ರಾಜ್ಯ ಹೆದ್ದಾರಿಗಳಲ್ಲಿ ದೊಡ್ಡ ಗಾತ್ರದ ಗುಂಡಿಗಳು ಮೂಡಿವೆ. ಮಳೆಗಾಲವಿಡೀ ರಸ್ತೆಯ ಅಗಲಕ್ಕೂ ನೀರು ಹರಿದು ಹಳ್ಳದಂತಹ ರಚನೆ ಮೂಡಿದೆ. ಈ ರಸ್ತೆಗಳಲ್ಲಿ ವಾಹನ ಚಲಾಯಿಸಲು ಗಟ್ಟಿ ಗುಂಡಿಗೆ ಬೇಕು ಎಂಬಂತಾಗಿದೆ.
ತಾಲ್ಲೂಕಿನ ಹದಗೆಟ್ಟ ರಸ್ತೆಗಳ ಕಾರಣಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರ ನಡುವೆ ಜಟಾಪಟಿ ನಡೆದಿದೆ. ಮೇ ತಿಂಗಳ ಮಧ್ಯಭಾಗದಲ್ಲಿ ಆರಂಭವಾದ ಮಳೆ 5 ತಿಂಗಳ ನಂತರವೂ ಸುರಿಯುತ್ತಲೇ ಇದೆ. ಸತತ ಮಳೆಯು ತಾಲ್ಲೂಕಿನ ಎಲ್ಲ ರಸ್ತೆಗಳ ಸ್ವರೂಪವನ್ನೇ ಬದಲಿಸಿದ್ದು ಜನರು ಗುಂಡಿಮಯ ರಸ್ತೆ ಬಳಸಲು ಎರಡರೆಡು ಬಾರಿ ಯೋಚಿಸುವಂತಾಗಿದೆ.
'ನಮ್ಮ ಊರಿಂದ ಯಾವುದೇ ಊರಿಗೆ ಹೋಗುವುದಾದರೂ ಹಿಂದೆ ಮುಂದೆ ಆಲೋಚನೆ ಮಾಡಬೇಕಾಗಿದೆ. ಎಸ್.ಕೆ.ಬಾರ್ಡರ್ ರಸ್ತೆ ಸಮಸ್ಯೆ ನೆನಪಿಸಿಕೊಂಡು ಅನೇಕ ಮದುವೆ, ಮತ್ತಿತರ ಕಾರ್ಯಕ್ರಮಗಳಿಗೆ ಹೋಗುವುದನ್ನೇ ಬಿಟ್ಟಿದ್ದೇವೆ' ಎಂದು ಅನೇಕ ಬೆಳೆಗಾರರು, ವ್ಯಾಪಾರಿಗಳು ಹೇಳುತ್ತಾರೆ.
‘3 ದಶಕದ ಹಿಂದೆಯೂ ಇದಕ್ಕಿಂತ ಹೆಚ್ಚು ಮಳೆ ಬೀಳತ್ತಿತ್ತು. ಆಗ ರಸ್ತೆಯಲ್ಲಿ ಹರಿಯುವ ನೀರು, ಚರಂಡಿ ಬಿಡಿಸಲು ಲೋಕೋಪಯೋಗಿ ಇಲಾಖೆಯಲ್ಲಿ ಗ್ಯಾಂಗ್‍ಮನ್ ಒಬ್ಬರು ಇರುತ್ತಿದ್ದರು. ಅವರು ಮಳೆಗಾಲವಿಡೀ ರಸ್ತೆಗಳ ಬದಿ ಓಡಾಡುತ್ತಾ ನೀರು ಬಿಡಿಸುತ್ತಿದ್ದರು. ಇದರಿಂದ ರಸ್ತೆ ಹಾಳಾಗುತ್ತಿರಲಿಲ್ಲ' ಎಂದು ಕಳಸ ಪಂಚಾಯಿತಿ ಮಾಜಿ ಅಧ್ಯಕ್ಷ ಎನ್.ಪಿ.ಭರತ್‍ರಾಜ್ ಹೇಳಿದರು.
ಗ್ರಾಮೀಣ ಪ್ರದೇಶದಲ್ಲಿ ಹದಗೆಟ್ಟಿರುವ ರಸ್ತೆಗಳ ದುರಸ್ತಿಗೆ ನೂರಾರು ಕೋಟಿ ರೂಪಾಯಿ ಬೇಕಾಗಬಹುದು. ಎಲ್ಲಾವನ್ನೂ ಒಂದೇ ಬಾರಿಗೆ ದುರಸ್ತಿ ಮಾಡಲು ಅಸಾಧ್ಯ ಎಂಬ ಸತ್ಯವನ್ನೂ ಗ್ರಾಮಸ್ಥರು ಅರಿಯದೆ ಸ್ಥಳೀಯ ಜನಪ್ರತಿನಿಧಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ.
ರಸ್ತೆ ಕಾಮಗಾರಿಗಳಲ್ಲಿ ಗುಣಮಟ್ಟದ ಕೆಲಸ ನಡೆಯದೆ ಕಳಪೆಯೇ ಆಗುತ್ತಿವೆ. ಇದರಿಂದ 2 ವರ್ಷದಲ್ಲೇ ರಸ್ತೆಗಳು ಮತ್ತೆ ಹದಗೆಡುತ್ತಿವೆ ಎಂಬ ಆರೋಪವೂ ಬಲವಾಗಿದೆ. ಮಳೆ ಬಿಟ್ಟ ಕೂಡಲೇ ಸಮರೋಪಾದಿಯಲ್ಲಿ ರಸ್ತೆ ಕಾಮಗಾರಿ ನಡೆಸಲಾಗುತ್ತದೆ ಎಂಬ ಆಶ್ವಾಸನೆ ಎಷ್ಟರ ಮಟ್ಟಿಗೆ ಸತ್ಯ ಆಗುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.
ಕಳಸ- ಎಸ್.ಕೆ.ಬಾರ್ಡರ್ ರಸ್ತೆ ಕಳಸೇಶ್ವರ ದೇವಸ್ಥಾನದ ಬಳಿಯ ರಸ್ತೆ ಕಳಸ-ಕೊಟ್ಟಿಗೆಹಾರ ಕಳಸ-ಹೊರನಾಡು ರಸ್ತೆಗಳ ಅಭಿವೃದ್ಧಿಗಾಗಿ ಬಹಳಷ್ಟು ಅನುದಾನ ಮೀಸಲಿಟ್ಟಿದ್ದೇನೆ. ಆದರೆ ಮಳೆ ನಿಲ್ಲದ ಕಾರಣ ಕಾಮಗಾರಿ ನಡೆಸಲು ಆಗುತ್ತಿಲ್ಲ-ನಯನಾ ಮೋಟಮ್ಮ, ಶಾಸಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.