
ಬೀರೂರು (ಕಡೂರು): ‘ಕನ್ನಡದ ನೆಲ–ಜಲ, ಭಾಷೆ, ಸಂಸ್ಕೃತಿಯನ್ನು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಅನ್ನು ‘ಕನ್ನಡದ ರಥ’ದ ಮಾದರಿಯಲ್ಲಿ ಅಲಂಕರಿಸುವ ಮೂಲಕ ಭಾಷಾಭಿಮಾನದ ಕಂಪು ಮೂಡಿಸುತ್ತಿರುವ ‘ಹುಬ್ಬಳ್ಳಿ-ಮಂಡ್ಯ’ ಬಸ್‌ನ ಚಾಲಕ ಮತ್ತು ನಿರ್ವಾಹಕರ ಕಾರ್ಯ ವೈಖರಿ ನಿಜಕ್ಕೂ ಶ್ಲಾಘನೀಯ’ ಎಂದು ಗೂಡ್ಸ್ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಗೌರವಾಧ್ಯಕ್ಷ ಹೇಮಂತ್ ಕುಮಾರ್ ತಿಳಿಸಿದರು.
ಪಟ್ಟಣದ ಗಣಪತಿ ಪೆಂಡಾಲ್ ಪಕ್ಕದಲ್ಲಿರುವ ಶ್ರೀಗಣಪತಿ ಸರ್ವ ಧರ್ಮ ಗೂಡ್ಸ್ ಆಟೊ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಶನಿವಾರ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಗಿರೀಶ್ ಮತ್ತು ನಿರ್ವಾಹಕ ಮೌನೇಶ್‌ರಿಗೆ ಸನ್ಮಾನಿಸಿ ಅವರು ಮಾತನಾಡಿದರು.
ಭಾಷಾಭಿಮಾನವನ್ನು ತೋರ್ಪಡಿಕೆಗೆ ಅಳವಡಿಸಿಕೊಳ್ಳದೆ, ಕಾಯಕದ ಜತೆಗೂ ಅಳವಡಿಸಿಕೊಂಡಿರುವ ಬಸ್‌ನ ಚಾಲಕ ಮತ್ತು ನಿರ್ವಾಹಕರು ತಮ್ಮ ಸ್ವಂತ ಹಣದಲ್ಲಿ ಬಸ್‌ಅನ್ನು ತೇರಿನಂತೆ ಸಿಂಗರಿಸಿದ್ದಾರೆ. ಇವರು ನಿಜಕ್ಕೂ ಕನ್ನಡದ ಕಟ್ಟಾಳುಗಳು. ಗಿರೀಶ್ ಮತ್ತು ಮೌನೇಶ್ ಬಸ್‌ನ ಮುಂಭಾಗದಲ್ಲಿ ಭುವನೇಶ್ವರಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಒಳಭಾಗದಲ್ಲಿ ರಾಜ್ಯದ ಪ್ರತಿಯೊಂದು ಜಿಲ್ಲೆ, ಅವುಗಳ ವಿಶೇಷತೆ, ಪ್ರಯಾಣಿಕರ ಸಲುವಾಗಿ ಓದಲು ಕನ್ನಡ ದಿನಪತ್ರಿಕೆಗಳು, ಪುಸ್ತಕಗಳು, ಜ್ಞಾನಪೀಠ ಪ್ರಶಸ್ತಿ ವಿಜೇತರ ವಿವರಗಳು, ಮನರಂಜನೆಗಾಗಿ ಕನ್ನಡ ಚಿತ್ರಗೀತೆಗಳು, ಬಸ್‌ನ ಆಸನಗಳಿಗೂ ಕೂಡ ಹಳದಿ ಮತ್ತು ಕೆಂಪು ಬಣ್ಣದ ಮೇಲು ಹೊದಿಕೆ ಅಳವಡಿಸಿ, ರಾಜ್ಯವನ್ನು ಆಳಿದ ರಾಜ ಮಹಾರಾಜರ ಪರಿಚಯ, ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ರಾಜ್ಯಕ್ಕೆ ಹೆಸರು ತಂದಿರುವ ಕ್ರೀಡಾಪಟುಗಳ ಮಾಹಿತಿ ಹಂಚುವ ಮೂಲಕ ಕನ್ನಡದ ಹಿರಿಮೆಯನ್ನು ಸಾರುತ್ತಿದ್ದಾರೆ ಎಂದು ಪ್ರಶಂಸಿಸಿದರು.
ಗೌರವ ಸ್ವೀಕರಿಸಿ ಮಾತನಾಡಿದ ಬಸ್ ಚಾಲಕ ಗಿರೀಶ್, ‘ಕನ್ನಡ ನಮ್ಮ ಭಾಷೆ. ಮಾತೃಭಾಷೆಯ ಹಿರಿಮೆಯನ್ನು ಸಾರಲು ಯಾವುದೇ ಹಿಂಜರಿಕೆ ಬೇಡ, ಭಾಷಾಭಿಮಾನ ಎನ್ನುವುದನ್ನು ನವೆಂಬರ್ ತಿಂಗಳ ಕನ್ನಡ ರಾಜ್ಯೋತ್ಸವದ ಸಂಭ್ರಮಕ್ಕೆ ಮಾತ್ರ ಸೀಮಿತಗೊಳಿಸದೆ ಜೀವನವಿಡೀ ಕಂಪು ಪಸರಿಸಲು ಮುಂದಾಗಬೇಕು. ಭಾಷಾಭಿಮಾನವನ್ನು ಶಾಲಾ ದಿನಗಳಲ್ಲಿಯೇ ಮೈಗೂಡಿಸಿಕೊಂಡಿದ್ದು, ಕರ್ತವ್ಯ ನಿರ್ವಹಿಸುತ್ತಿರುವ ಹುದ್ದೆಯಲ್ಲೂ ಕೂಡ ಮರೆಯದೆ ಹೆಮ್ಮೆಯಿಂದ ಆಚರಿಸುತ್ತಿದ್ದೇವೆ. ಪ್ರಯಾಣಿಕರ, ಕನ್ನಡಾಭಿಮಾನಿಗಳ ಈ ಪ್ರೋತ್ಸಾಹ ಇದೇ ರೀತಿ ಇರಲಿ, ಮುಂದೆ ಇನ್ನಷ್ಟು ಅದ್ಧೂರಿಯಾಗಿ ಕನ್ನಡ ಹಂಚುವ ಕಾಯಕವನ್ನು ಮುಂದುವರೆಸುತ್ತೇವೆ’ ಎಂದರು.
ಶ್ರೀಗಣಪತಿ ಸರ್ವ ಧರ್ಮ ಗೂಡ್ಸ್ ಆಟೊ ಚಾಲಕರ ಸಂಘದ ಅಧ್ಯಕ್ಷ ಅಲ್ತಮಷ್, ಉಪಾಧ್ಯಕ್ಷ ದಾದು, ಕಾರ್ಯದರ್ಶಿ ಅಜಯ್, ಖಚಾಂಚಿ ನೂರುಲ್ಲಾ, ಪದಾಧಿಕಾರಿಗಳಾದ ಮನ್ಸೂರ್, ಮುಹೀಬ್, ಡಿ.ಜೆ.ರಫೀಕ್, ಮುನ್ನಾ, ಮನು, ಗಣೇಶ, ಯರೇಹಳ್ಳಿ ಮಂಜುನಾಥ, ಜಮೀಲ್, ರಹಮತ್, ಮಂಜುನಾಥ, ನಾನಾ, ಅಲ್ಲೂ, ಟಿಪ್ಪು ರಫೀಕ್, ಪ್ರದೀಪ್, ಅಯುಬ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.