ADVERTISEMENT

ನದಿ ದಡದಲ್ಲಿ ಕಣ್ಣಾಸ್ರ ಸಂಪ್ರದಾಯ

ಹೇಮಾವತಿ ನದಿ ಮತ್ತು ಹಳ್ಳ ಸೇರುವ ಸಂಗಮ ಸ್ಥಳ

ಪ್ರಜಾವಾಣಿ ವಿಶೇಷ
Published 21 ಮಾರ್ಚ್ 2021, 2:44 IST
Last Updated 21 ಮಾರ್ಚ್ 2021, 2:44 IST
ಹೇಮಾವತಿ ನದಿಯಲ್ಲಿ ಕಣ್ಣಾಸ್ರ ತೆಗೆಯಲು ಸಿದ್ಧತೆ
ಹೇಮಾವತಿ ನದಿಯಲ್ಲಿ ಕಣ್ಣಾಸ್ರ ತೆಗೆಯಲು ಸಿದ್ಧತೆ   

ಮೂಡಿಗೆರೆ: ತಾಲ್ಲೂಕಿನಲ್ಲಿ ಹಲವಾರು ಸಾಂಪ್ರದಾಯಿಕ ಆಚರಣೆಗಳು ಸ್ಥಳೀಯವಾಗಿ ಮಾತ್ರವಲ್ಲದೆ, ರಾಜ್ಯ, ರಾಷ್ಟ್ರ ಮಟ್ಟದವರೆಗೂ ಪ್ರಸಿದ್ಧಿ ಪಡೆದಿವೆ. ಅಂತಹ ಆಚರಣೆಗಳಲ್ಲಿ ಕೆಸವಳಲು ಕೂಡಿಗೆಯಲ್ಲಿ ನಡೆಯುವ ಕಣ್ಣಾಸ್ರ ತೆಗೆಯುವ ಸಂಪ್ರದಾಯವೂ ಒಂದಾಗಿದೆ.

ತಾಲ್ಲೂಕಿನ ದಾರದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕೂಡಿಗೆಯು ಹೇಮಾವತಿ ನದಿ ತೀರದಲ್ಲಿರುವ ಪುಟ್ಟ ಗ್ರಾಮವಾಗಿದೆ. ಹೇಮಾವತಿ ಹಾಗೂ ಭೈರಾಪುರದಿಂದ ಬರುವ ಸ್ಥಳೀಯ ಹಳ್ಳವೊಂದು ಸೇರ್ಪಡೆಗೊಳ್ಳುವ ಸ್ಥಳದಲ್ಲಿ ಕಣ್ಣಾಸ್ರ ಹೊಡೆಯಲಾಗುತ್ತದೆ. ರಾಜ್ಯದ ಕೆಲವೇ ಭಾಗಗಳಲ್ಲಿ ನಡೆಸುವ ಕಣ್ಣಾಸ್ರ ಸೇವೆಯಲ್ಲಿ ಇದು ಒಂದಾಗಿದೆ ಎನ್ನಲಾಗಿದ್ದು, ಈ ಗ್ರಾಮದಲ್ಲಿ ನಡೆಯುವ ಕಣ್ಣಾಸ್ರ ತೆಗೆಯುವ ಸಂಪ್ರದಾಯವು ಸ್ಥಳೀಯರನ್ನು ಮಾತ್ರವಲ್ಲದೇ ರಾಜ್ಯದ ನಾನಾ ಭಾಗಗಳ ಜನರನ್ನು ತನ್ನತ್ತ ಸೆಳೆಯುತ್ತಿದೆ. ಕೆಸವಳಲು ಗ್ರಾಮದಲ್ಲಿರುವ 65 ಪರಿಶಿಷ್ಟ ಕುಟುಂಬಗಳು ಈ ಕಣ್ಣಾಸ್ರ ಸೇವೆಯನ್ನು ಮಾಡುತ್ತಿದ್ದು, ಹೊಸದಾಗಿ ಮದುವೆಯಾದ ದಂಪತಿಗಳು, ಫಸಲು ಕಟಾವು ಮಾಡಿದ ಕೃಷಿಕರು, ಹೊಸ ವಾಹನ ತೆಗೆದುಕೊಂಡವರು, ಜಮೀನು, ಆಸ್ತಿ ಖರೀದಿಸಿದವರು ತಪ್ಪದೇ ಈ ಸ್ಥಳಕ್ಕೆ ಬಂದು ಕಣ್ಣಾಸ್ರ ಹೊಡೆಸುವುದು ಸಂಪ್ರದಾಯವಾಗಿದೆ. ಕೆಟ್ಟದೃಷ್ಟಿ ತಾಗುವುದಕ್ಕೆ ಪರಿಹಾರ ಕಂಡುಕೊಳ್ಳಲು ಆಚರಿಸುವ ಪದ್ಧತಿಯನ್ನು ಕಣ್ಣಾಸ್ರ ತೆಗೆಯುವುದು ಎನ್ನುತ್ತಾರೆ.

ಸ್ಥಳೀಯವಾಗಿ ಇದನ್ನು ದೃಷ್ಟಿ ತೆಗೆಯುವುದು ಎಂದೂ ಹೇಳುತ್ತಾರೆ.

ADVERTISEMENT

‘ಅಷ್ಟಮುನಿಗಳು ತಪಸ್ಸು ನಡೆಸುವಾಗ, ದುಷ್ಟ ಶಕ್ತಿಗಳ ದೃಷ್ಟಿ ಅಷ್ಟಮುನಿಗಳ ಮೇಲೆ ಬಿದ್ದಿದ್ದನ್ನು ಶ್ರೀರಾಮ ನಿವಾರಣೆ ಮಾಡಿದ ಎಂಬ ಕಥೆಯಿದೆ. ಅಂದಿನಿಂದಲೂ ಈ ಸ್ಥಳದಲ್ಲಿ ಕಣ್ಣಾಸ್ರ ತೆಗೆಯುವ ಸಂಪ್ರದಾಯವನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂಬ ನಂಬಿಕೆಯಿದ್ದು, ನಾಲ್ಕೈದು ತಲೆಮಾರುಗಳಿಂದ ಸಂಪ್ರದಾಯ ಸಾಗಿ ಬಂದಿರುವ ಹೆಜ್ಜೆ ಗುರುತುಗಳಿವೆ. ರೈತರು ಕಟಾವಿಗೂ ಫಲಸಿನೊಂದಿಗೆ, ನವ ದಂಪತಿ ಬಾಸಿಂಗ ಕಣ್ಣಾಸ್ರ ತೆಗೆಸುತ್ತಾರೆ. ರಾಜ್ಯದ ನಾನಾ ಭಾಗಗಳಿಂದ ಬರುವ ಜನರು ಸಂಪ್ರದಾಯದಲ್ಲಿ ಪಾಲ್ಗೊಳ್ಳುತ್ತಾರೆ’ ಎನ್ನುತ್ತಾರೆ ಕೆಸವೊಳಲು ಸಿದ್ದೇಶ್.

‘ಬಿಡ್ತು… ಬಿಡ್ತು… ಬಿಡ್ತು’

ಅಷ್ಟಮುನಿ ಎಂಬ ಋಷಿಮುನಿಯೊಬ್ಬರು ಶ್ರೀರಾಮನಿಗಾಗಿ ಯಾಗವನ್ನು ನಡೆಸಿದ ಸ್ಥಳವೆಂಬುದು ಐತಿಹ್ಯ. ನದಿತೀರದಲ್ಲಿ ಶ್ರೀರಾಮನ ದೇವಾಲಯವನ್ನು ನಿರ್ಮಿಸಿ ಪೂಜಿಸಲಾಗುತ್ತಿದೆ. ವಾರ್ಷಿಕ ಜಾತ್ರೆಯನ್ನು ವಿಜೃಂಭಣೆಯಿಂದ ನಡೆಸುವುದು ಇಲ್ಲಿನ ವಿಶೇಷತೆ. ಗುರುವಾರ, ಭಾನುವಾರಗಳಂದು ವರ್ಷಪೂರ್ತಿ ನಡೆಯುವ ಈ ಕಣ್ಣಾಸ್ರ ಸೇವೆಯು ಬೆಳಿಗ್ಗೆ 9ರಿಂದ ಪ್ರಾರಂಭವಾಗಿ ಸಂಜೆಯವರೆಗೂ ನಡೆಯುತ್ತದೆ. ಕೂಡಿಗೆ ನದಿಯಲ್ಲಿ ಸಣ್ಣದಾಗಿ ಮಣ್ಣಿನ ರಾಶಿಯನ್ನು ನಿರ್ಮಿಸಿ, ರಾಶಿಯ ಮೇಲೆ ಲಕ್ಕೆಸೊಪ್ಪು, ಹಣ್ಣು, ಕಾಯಿ, ಕುಡಿಕೆಗಳನ್ನಿರಿಸಿ, ಸಾಂಪ್ರದಾಯಿಕ ಮಂತ್ರಗಳನ್ನು ಹೇಳಿ, ‘ಬಿಡ್ತು… ಬಿಡ್ತು… ಬಿಡ್ತು’ ಎಂಬ ಉದ್ಘಾರದೊಂದಿಗೆ ಕಣ್ಣಾಸ್ರ ತೆಗೆಯಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.