ADVERTISEMENT

ಕಾಫಿನಾಡಿಗೆ ಸಚಿವ ಸ್ಥಾನವಿಲ್ಲ: ಎಂ.ಪಿ.ಕುಮಾರಸ್ವಾಮಿ, ಸುರೇಶ್‌ ಪ್ರಯತ್ನ ವಿಫಲ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2021, 9:22 IST
Last Updated 4 ಆಗಸ್ಟ್ 2021, 9:22 IST
ಎಂ.ಪಿ.ಕುಮಾರಸ್ವಾಮಿ
ಎಂ.ಪಿ.ಕುಮಾರಸ್ವಾಮಿ   

ಚಿಕ್ಕಮಗಳೂರು: ಕಾಫಿನಾಡಿನ ಬಿಜೆಪಿ ನಾಲ್ವರು ಶಾಸಕರ ಪೈಕಿ ಒಬ್ಬರಿಗೂ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲ. ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದ ಎಂ.ಪಿ.ಕುಮಾರಸ್ವಾಮಿ, ತರೀಕೆರೆ ಡಿ.ಎಸ್‌.ಸುರೇಶ್‌ ಅವರ ಶತಪ್ರಯತ್ನ ಫಲ ನೀಡಿಲ್ಲ.

ಒಬ್ಬರಿಗಾದರೂ ಸಚಿವ ಸ್ಥಾನ ನೀಡಬೇಕು ಎಂಬ ಬಿಜೆಪಿ ಜಿಲ್ಲಾ ಘಟಕದ ಮುಖಂಡರ ಮನವಿಯನ್ನು ಪರಿಗಣಿಸಿಲ್ಲ. ಜಿಲ್ಲೆಯ ಕಾರ್ಯಕರ್ತರು, ಮುಖಂಡರಿಗೆ ನಿರಾಸೆ ಮೂಡಿಸಿದೆ.

ಯಡಿಯೂರಪ್ಪ ಅವರ ಸಂಪುಟದಲ್ಲಿ ಸಚಿವರಾಗಿದ್ದ ಸಿ.ಟಿ.ರವಿ ಅವರು ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನೇಮಕವಾದ ನಂತರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಬೆಳವಣಿಗೆ ನಂತರ ಒಮ್ಮೆ ಸಂಪುಟ ವಿಸ್ತರಣೆ ಮಾಡಲಾಗಿತ್ತು. ಆದರೆ, ಜಿಲ್ಲೆಗೆ ಸಚಿವ ಸ್ಥಾನ ಕರುಣಿಸಿರಲಿಲ್ಲ.

ಸಚಿವ ಸ್ಥಾನ ಸಿಗದಿರುವ ಬಗ್ಗೆ ಶಾಸಕ ಎಂ.ಪಿ.ಕುಮಾರಸ್ವಾಮಿ ‘ಫೇಸ್‌ ಬುಕ್‌’ನಲ್ಲಿ ಪೋಸ್ಟ್‌ ಹಾಕಿದ್ದು, ಸಂದೇಶ ಇಂತಿದೆ.

ಆತ್ಮೀಯ ನನ್ನ ವಿಧಾನಸಭಾ ಕ್ಷೇತ್ರದ ಬಂಧುಗಳೇ, ಈಗ ತಾನೇ ವಿಧಾನಸೌಧದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ನನ್ನನ್ನು ಕರೆಸಿ ಇಂದಿನ ಸಂಪುಟದಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಯಾವುದೇ ಸಚಿವ ಸ್ಥಾನ ನೀಡಲಾಗುತ್ತಿಲ್ಲ. ಆದರೆ, ನನ್ನ ಕ್ಷೇತ್ರಕ್ಕೆ ಹಾಗೂ ಚಿಕ್ಕಮಗಳೂರು ಜಿಲ್ಲೆ ಅಭಿವೃದ್ಧಿಗೆ ಪ್ರಾಶಸ್ತ್ಯ ನೀಡುವುದಾಗಿಯೂ, ಮುಂದಿನ ಕೆಲ ದಿನಗಳಲ್ಲಿ ಸಂಪುಟ ವಿಸ್ತರಣೆ ನಡೆಯುವ ಸಂದರ್ಭದಲ್ಲಿ ನನ್ನನ್ನು ಪರಿಗಣಿಸುವುದಾಗಿಯೂ ಭರವಸೆ ನೀಡಿದ್ದಾರೆ.

ಭರವಸೆ ನೀಡಿದ ಮಾನ್ಯ ಮುಖ್ಯಮಂತ್ರಿಗಳಿಗೆ, ನನಗಾಗಿ ಪ್ರಾರ್ಥನೆ ಸಲ್ಲಿಸಿ ನಿರೀಕ್ಷೆ ಇಟ್ಟುಕೊಂಡಿದ್ದ ಕ್ಷೇತ್ರದ ಜನತೆಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ADVERTISEMENT

ಈ ಸರ್ಕಾರ ಅತ್ಯಂತ ಸುಭದ್ರವಾಗಿ ಕೆಲಸ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಕ್ಷೇತ್ರದ ಅಭಿವೃದ್ಧಿ ಮಾಡುತ್ತಾ ಮುಂದಿನ ದಿನಗಳಲ್ಲಿ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸೋಣ.

ಇಂತಿ,
ಎಂ.ಪಿ.ಕುಮಾರಸ್ವಾಮಿ, ಶಾಸಕ, ಮೂಡಿಗೆರೆ ಕ್ಷೇತ್ರ

**
‘ಜಿಲ್ಲೆಯನ್ನು ಸಮರ್ಥವಾಗಿ ಮುನ್ನಡೆಸುವ ನಾಯಕರು ಜಿಲ್ಲೆಯಲ್ಲಿ ಇದ್ದಾರೆ, ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಹೀಗಾಗಿ, ಜಿಲ್ಲೆಯ ಒಬ್ಬರಿಗೂ ಸಚಿವ ಸ್ಥಾನ ಸಿಗದಿರುವುದು ದೊಡ್ಡ ಕೊರತೆಯಾಗಲಾರದು’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಸಿ. ಕಲ್ಮರುಡಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.